ನರಗುಂದ: ರಾಜ್ಯದಲ್ಲಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಆರೋಗ್ಯ ಅಧಿಕಾರಿಗಳು ಮತ್ತು ನೌಕರರನ್ನು ಸರ್ಕಾರ ಅವೈಜ್ಞಾನಿಕವಾಗಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುತ್ತಿದೆ. ಇದನ್ನು ವಿರೋಧಿಸಿ ಶೀಘ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ಜಡೇಶ ಭದ್ರಗೌಡ್ರ ಆರೋಪಿಸಿದರು.
ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಕಾಲಕಾಲಕ್ಕೆ ಸಮರ್ಪಕವಾಗಿ ಔಷಧಿಗಳ ಸರಬರಾಜು ಮಾಡುತ್ತಿಲ್ಲ. ವೃಂದ ಮತ್ತು ನೇಮಕಾರಿ ನಿಯಮಗಳನ್ನು ಪ್ರತಿ 3 ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಲು ಸರ್ಕಾರದ ಆದೇಶವಿದ್ದರೂ 1973ರಿಂದ ಇಲ್ಲಿಯವರೆಗೆ ಆರೋಗ್ಯ ಇಲಾಖೆಯ ಯಾವುದೇ ವೃಂದ, ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಿಲ್ಲ. ಇಲಾಖೆಯ ಎಲ್ಲ ವೃಂದಗಳ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿಲ್ಲ. ಇಲಾಖೆಯ ಯಾವುದೇ ಅಧಿಕಾರಿ, ನೌಕರರಿಗೆ 5 ವರ್ಷಗಳಿಂದ ಮುಂಬಡ್ತಿಯನ್ನೇ ನೀಡಿಲ್ಲ. ನಿಯಮಾನುಸಾರ ಸೇವಾನಿರತ ಸರ್ಕಾರಿ ವೈದ್ಯರು, ಅಧಿಕಾರಿ, ನೌಕರರು ಉನ್ನತ ವ್ಯಾಸಂಗ, ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶವಿದ್ದರೂ ಶಿಕ್ಷಣಕ್ಕೆ ಅವಕಾಶ ನೀಡುತ್ತಿಲ್ಲ ಎಂದರು. ಗುತ್ತಿಗೆ ಆಧಾರದಡಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ನೌಕರರು, ಎನ್‌ಎಚ್‌ಎಂ ಸಿಬ್ಬಂದಿಗೆ ಸೇವಾ ಭದ್ರತೆ, ಕಾಲಕಾಲಕ್ಕೆ ವೇತನ ಹೆಚ್ಚಳ ಮಾಡಬೇಕು. ಕೇಂದ್ರ ಪುರಸ್ಕೃತ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ 6 ಸಾವಿರಕ್ಕೂ ಅಧಿಕ ನೌಕರರಿಗೆ ಮೂರ‍್ನಾಲ್ಕು ತಿಂಗಳಿಗೊಮ್ಮೆ ವೇತನ ಪಾವತಿಸುವುದರ ಬದಲಾಗಿ ಪ್ರತಿ ತಿಂಗಳು ವೇತನ ಪಾವತಿಸಬೇಕು.
ವೈದ್ಯರು, ತಜ್ಞವೈದ್ಯರು, ಇನ್ನಿತರ ಸಿಬ್ಬಂದಿಗೆ ಸಿಜೆಎಚ್‌ಎಸ್ ಅಥವಾ ಎಐಸಿಟಿಇ (ವೈದ್ಯಕೀಯ ಶಿಕ್ಷಣ ಇಲಾಖೆ ಮಾದರಿಯಲ್ಲಿ) ವೇತನ ನೀಡಬೇಕು ಎಂಬಿತ್ಯಾದಿ ಬೇಡಿಕೆಗೆ ಆಗ್ರಹಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಮತ್ತು ಇಲಾಖೆಯ ಎಲ್ಲ ವೃಂದ ಸಂಘಗಳ ಸಹಯೋಗದೊಂದಿಗೆ ಮಾ. 11ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.ಮಾ.11ರಿಂದ 15ರವೆರೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಈ ವೇಳೆ ಕೇವಲ ತುರ್ತು ಸೇವೆಗಳನ್ನು ಮಾತ್ರ ನೀಡಲಾಗುತ್ತಿದ್ದು, ಹೊರರೋಗಿಗಳಿಗೆ ಯಾವುದೇ ರೀತಿಯ ಚಿಕಿತ್ಸೆ ಸೇವೆ ನೀಡುವುದಿಲ್ಲ. ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಮಾ. 16ರಿಂದ ಅನಿರ್ದಿಷ್ಟಾವಧಿಯವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುತ್ತೇವೆ ಎಂದರು.