ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಎಸ್‌ಯುಸಿಐ ಪ್ರತಿಭಟನೆ

KannadaprabhaNewsNetwork |  
Published : Mar 14, 2026, 02:00 AM IST
ಅಮೆರಿಕಾ ಮತ್ತು ಇಸ್ರೇಲ್ ಕೂಟಗಳು ಇರಾನ್ ವಿರುದ್ಧ ನಡೆಸಿದ ಬಾಂಬ್ ದಾಳಿಯನ್ನು ಖಂಡಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಬಳ್ಳಾರಿಯ ಗಡಗಿಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ಜರುಗಿತು. | Kannada Prabha

ಸಾರಾಂಶ

ಪಶ್ಚಿಮ ಏಷ್ಯಾದ ಮೇಲೆ ಸಾಮ್ರಾಜ್ಯಶಾಹಿ ಪ್ರಾಬಲ್ಯವನ್ನು ಮತ್ತೆ ಸ್ಥಾಪಿಸುವುದು, ತೈಲ ಮತ್ತು ಯುರೇನಿಯಂ ನಿಕ್ಷೇಪವನ್ನು ಕೊಳ್ಳೆ ಹೊಡೆಯುವುದು...

ಬಳ್ಳಾರಿ: ಅಮೆರಿಕಾ ಮತ್ತು ಇಸ್ರೇಲ್ ಕೂಟಗಳು ಇರಾನ್ ವಿರುದ್ಧ ನಡೆಸಿದ ಬಾಂಬ್ ದಾಳಿಯನ್ನು ಖಂಡಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ನಗರದ ಗಡಗಿಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ಜರುಗಿತು.

ಪಶ್ಚಿಮ ಏಷ್ಯಾದ ಮೇಲೆ ಸಾಮ್ರಾಜ್ಯಶಾಹಿ ಪ್ರಾಬಲ್ಯವನ್ನು ಮತ್ತೆ ಸ್ಥಾಪಿಸುವುದು, ತೈಲ ಮತ್ತು ಯುರೇನಿಯಂ ನಿಕ್ಷೇಪವನ್ನು ಕೊಳ್ಳೆ ಹೊಡೆಯುವುದು, ಹಿಂದುಳಿದ ರಾಷ್ಟ್ರಗಳಲ್ಲಿ ಯುದ್ಧದ ಭೀತಿ ಸೃಷ್ಟಿಸಿ ಶಸ್ತ್ರಾಸ್ತ್ರ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳುವುದು ಸಾಮ್ರಾಜ್ಯಶಾಹಿ ಅಮೆರಿಕನ್ ದುಷ್ಟಕೂಟದ ಉದ್ದೇಶ. ಹೀಗಾಗಿಯೇ ಪದೇಪದೇ ಯುದ್ಧಕೋರತನ ಪ್ರದರ್ಶಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.ಅಮೆರಿಕ-ಇಸ್ರೇಲ್ ಯುದ್ಧ ಪಿಪಾಸು ರಾಷ್ಟ್ರಗಳು ಇರಾನ್ ಮೇಲೆ ಬಾಂಬ್ ದಾಳಿ ನಡೆಸಿವೆ. ಇದು ಇರಾನಿನ ಸಾರ್ವಭೌಮತ್ವ ಮತ್ತು ವಿಶ್ವಸಂಸ್ಥೆಯ ಸನ್ನದಿನ (ಚಾರ್ಟರ್‌ನ) ಗಂಭೀರ ಉಲ್ಲಂಘನೆಯಾಗಿದೆ. ಜಗತ್ತಿನಾದ್ಯಂತ ಉದ್ವಿಗ್ನತೆ ಹೆಚ್ಚಿಸುತ್ತದೆ. ಪಶ್ಚಿಮ ಏಷ್ಯಾವನ್ನು ಅಸ್ಥಿರಗೊಳಿಸುತ್ತದೆ. ತೀವ್ರ ಆರ್ಥಿಕ ದುಷ್ಪರಿಣಾಮಗಳನ್ನು ಬೀರುತ್ತದೆ. ಈ ಎಲ್ಲ ಸಂಗತಿಗಳ ಹೊರತಾಗಿಯೂ ಯಾವುದೇ ರಾಜತಾಂತ್ರಿಕ ಪ್ರಕ್ರಿಯೆಯ ಬಗ್ಗೆ ಗಮನವನ್ನೇ ಹರಿಸದೆ, ಇರಾನ್ ಮತ್ತು ಇಡೀ ಪಶ್ಚಿಮ ಏಷ್ಯಾ ಪ್ರದೇಶದ ಮೇಲೆ ಯುದ್ಧ ಹೇರುವುದೇ ಅಮೆರಿಕ-ಇಸ್ರೇಲ್‌ಗಳ ಉದ್ದೇಶ ಎಂಬುದನ್ನು ಸ್ಪಷ್ಟವಾಗಿ ಇದು ತೋರಿಸುತ್ತದೆ ಎಂದು ಟೀಕಿಸಿದರು.

ಅಮೆರಿಕ ಹಾಗೂ ಇಸ್ರೇಲ್ ದೇಶಗಳ ಯುದ್ಧನೀತಿಯು ಜಾಗತಿಕ ಶಾಂತಿ ಮತ್ತು ಜನಸಾಮಾನ್ಯರ ಬದುಕು ಮತ್ತು ಜೀವನೋಪಾಯಗಳ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ತೈಲ ಆಮದು ಮತ್ತು ವಲಸೆ ಕಾರ್ಮಿಕರಿಗೆ ಅವಕಾಶಗಳಿಗಾಗಿ ಪಶ್ಚಿಮ ಏಷ್ಯಾವನ್ನು ಹೆಚ್ಚು ಅವಲಂಬಿಸಿರುವ ಭಾರತದಂತಹ ದೇಶಗಳ ಮೇಲೆ ದುಷ್ಪರಿಣಾಮ ಬೀರಲಿವೆ. ಹೀಗಾಗಿ ಭಾರತ ಸರ್ಕಾರವು ತನ್ನ ಅಮೆರಿಕ ಪರ, ಇಸ್ರೇಲ್ ಪರ ವಿದೇಶಾಂಗ ನೀತಿ ನಿಲುವನ್ನು ತಕ್ಷಣವೇ ತ್ಯಜಿಸಿ ಯುದ್ಧವನ್ನು ನಿಲ್ಲಿಸುವ ಜಾಗತಿಕ ಪ್ರಯತ್ನಗಳೊಂದಿಗೆ ಕೈಜೋಡಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್‌ಯುಸಿಐ(ಸಿ) ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಹಾಗೂ ಜಿಲ್ಲಾ ಸಮಿತಿ ಸದಸ್ಯ ಆರ್. ಸೋಮಶೇಖರ ಗೌಡ ಅವರು ಒತ್ತಾಯಿಸಿದರು. ಪಕ್ಷದ ಜಿಲ್ಲಾ ಪ್ರಮುಖರಾದ ಎ.ದೇವದಾಸ್, ಮಂಜುಳಾ, ಶಾಂತಾ, ಗೋವಿಂದ್, ರಾಜ, ಜಗದೀಶ್ ಮತ್ತಿತರರು ಭಾಗವಹಿಸಿದ್ದರು.

ಅಮೆರಿಕ, ಇಸ್ರೇಲ್ ಕೂಟಗಳು ಇರಾನ್ ವಿರುದ್ಧ ನಡೆಸಿದ ಬಾಂಬ್ ದಾಳಿಯನ್ನು ಖಂಡಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದಿಂದ ಬಳ್ಳಾರಿಯ ಗಡಗಿಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯ ರಂಗಭೂಮಿ ಕಲಾವಿದ ರಮೇಶಗೌಡ ಪಾಟೀಲ್ ಇನ್ನಿಲ್ಲ
ಸೋಮವಾರದಿಂದಲೇ ತಂಬಾಕುಖರೀದಿ: ಕೇಂದ್ರ ಸರ್ಕಾರ ಭರವಸೆ