ಕಳೆ ನಿರ್ವಹಣೆಗೆ ಬ್ಯಾಟರಿ ಚಾಲಿತ ಎಡೆಕುಂಟೆ ಯಂತ್ರ ಬಳಸಿ: ಡಾ. ಎ.ಎಚ್. ಬಿರಾದಾರ

KannadaprabhaNewsNetwork |  
Published : Dec 18, 2025, 02:15 AM IST
ಫೋಟೊ ಶೀರ್ಷಿಕೆ: 17ಆರ್‌ಎನ್‌ಆರ್4ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ಬ್ಯಾಟರಿ ಚಾಲಿತ ಎಡೆಕುಂಟೆ ಯಂತ್ರ ಬಳಕೆ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.  | Kannada Prabha

ಸಾರಾಂಶ

ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಾವೇರಿ ಜಿಲ್ಲೆಯ ರೈತರಿಗೆ ಬ್ಯಾಟರಿ ಚಾಲಿತ ಎಡೆಕುಂಟೆ ಯಂತ್ರ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ರಾಣಿಬೆನ್ನೂರು: ಇಂದಿನ ದಿನಗಳಲ್ಲಿ ಎತ್ತುಗಳ ಬಳಕೆ ಕಡಿಮೆಯಾಗುತ್ತಿರುವುದು ಹಾಗೂ ಕೃಷಿ ಕಾರ್ಮಿಕರ ಅಭಾವವಿರುವುದರಿಂದ ಬ್ಯಾಟರಿ ಚಾಲಿತ ಎಡೆಕುಂಟೆಗಳನ್ನು ಬಳಸುವ ಮುಖಾಂತರ ಕಳೆ ನಿರ್ವಹಣೆ ಮಾಡಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಎ.ಎಚ್. ಬಿರಾದಾರ ಹೇಳಿದರು.

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಂಗಳೂರಿನ ಸೂರ್ಯ ನಿರ್ಭರ್ ಅಗ್ರೀಟೆಕ್ ಕಂಪನಿ, ರಾಣಿಬೆನ್ನೂರಿನ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ರೈತರಿಗೆ ಬ್ಯಾಟರಿ ಚಾಲಿತ ಎಡೆಕುಂಟೆ ಯಂತ್ರ ಬಳಕೆ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ತರಹದ ಕೃಷಿ ಬೆಳೆಗಳಿಗೆ ಈ ಯಂತ್ರವನ್ನು ಉಪಯೋಗಿಸುವುದರಿಂದ ಸಮಯದ ಉಳಿತಾಯವಾಗುತ್ತದೆ ಹಾಗೂ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೂರ್ಯ ನಿರ್ಭರ್ ಅಗ್ರೀಟೆಕ್‌ನ ಸಂಸ್ಥಾಪಕಿ ಅಶ್ವಿನಿ ವಿಕಾಸ್, ಈ ಬ್ಯಾಟರಿ ಚಾಲಿತ ಎಡೆಕುಂಟೆ ಯಂತ್ರವನ್ನು ಮಹಿಳೆಯರೂ ಸುಲಭವಾಗಿ ಉಪಯೋಗಿಸಬಹುದು. ಕಳೆನಾಶಕಗಳನ್ನು ಬಳಕೆ ಮಾಡುವುದರಿಂದ ಅಧಿಕ ಖರ್ಚು ಮತ್ತು ಕಡಿಮೆ ಇಳುವರಿ ಬರುತ್ತದೆ. ಅದರ ಬದಲಾಗಿ ಈ ಬ್ಯಾಟರಿ ಚಾಲಿತ ಎಡೆಕುಂಟೆ ಯಂತ್ರ ಉಪಯೋಗಿಸುವುದರಿಂದ ಶೇ. 5 ಕಡಿಮೆ ಉತ್ಪಾದನಾ ವೆಚ್ಚ ಮತ್ತು ಹೆಚ್ಚು ಇಳುವರಿ ಬರುತ್ತದೆ. ಇದರ ಜತೆಗೆ ವಾತಾವರಣಕ್ಕೆ ಯಾವುದೇ ತರಹದ ತೊಂದರೆ ಉಂಟಾಗುವುದಿಲ್ಲ ಎಂದು ಮಾಹಿತಿ ನೀಡಿದರು.

ಸೂರ್ಯ ನಿರ್ಭರ್ ಅಗ್ರೀಟೆಕ್‌ನ ಸಹ ಸಂಸ್ಥಾಪಕ ಸೂರ್ಯ ಉಡುಪ ಮಾತನಾಡಿ, ಸಣ್ಣ ಹಿಡುವಳಿ ರೈತರು ತಮ್ಮ ಸ್ವತಃ ಜಮೀನಿನಲ್ಲಿ ಬಳಕೆ ಮಾಡಿ, ಆನಂತರ ಅದರಿಂದ ಈ ಯಂತ್ರವನ್ನು ಬಾಡಿಗೆ ಆಧಾರಿತ ಸೇವೆಯ ಮೇಲೆ ಮಾಡುವ ಮೂಲಕ ತಮ್ಮ ಸ್ವ-ಉದ್ಯೋಗ ಕೂಡಾ ಮಾಡಬಹುದು ಎಂದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಸಂತೋಷ ಎಚ್.ಎಂ., ಡಾ. ಮಹೇಶ ಕಡಗಿ, ಡಾ. ಸಿದ್ಧಗಂಗಮ್ಮ ಕೆ.ಆರ್., ಡಾ. ಅಕ್ಷತಾ ರಾಮಣ್ಣನವರ, ತಾಂತ್ರಿಕ ಅಧಿಕಾರಿಗಳಾದ ಚಂದ್ರಕಾಂತ ಕೊಟಬಾಗಿ, ಡಾ. ಕೃಷ್ಣಾನಾಯಕ ಎಲ್., ವನಸಿರಿ ಸಂಸ್ಥೆಯ ಯೋಜನಾ ನಿರ್ದೇಶಕ ಸಿ.ಪಿ. ನದಾಫ್‌, ಭೂಮಿಕಾ ಎಫ್.ಪಿ.ಒ., ನಿರ್ದೇಶಕ ಮಹದೇವಪ್ಪ ನೆಗಳೂರು ಹಾಗೂ ಕೃಷಿ ವಿಜ್ಞಾನ ಕೇಂದ್ರ, ಸೂರ್ಯ ನಿರ್ಭರ್ ಅಗ್ರೀಟೆಕ್, ವನಸಿರಿ ಗ್ರಾಮಾಭಿವೃದ್ಧಿ ಸಂಸ್ಥೆಗಳ ಸಿಬ್ಬಂದಿ ವರ್ಗ ಹಾಜರಿದ್ದರು.

ತರಬೇತಿ ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಂದ್ರಮೌಳೇಶ್ವರ ಸನ್ನಿಧಾನದಲ್ಲಿ ಪ್ರದೋಷ ಸಪ್ತರ್ಷಿ ಪೂಜೆ
ಪರಮೇಶ್ವರ್ ಸಿಎಂ ಆಗಲಿ: ಮಠಾಧೀಶರ ಒತ್ತಾಯ