ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸುಪ್ರೀಂ ತೀರ್ಪಿನಂತೆ ದಲಿತರಿಗೆ ಒಳ ಮೀಸಲಾತಿ ಜಾರಿಗೊಳಿಸಿ, ದಲಿತರಿಗೆ ಮೀಸಲಿಟ್ಟ ಹಣ ಅವರ ಅಭಿವೃದ್ಧಿಗೆ ಬಳಸಿ, ಗ್ಯಾರಂಟಿಗಳಿಗಲ್ಲಾ ಎಂದು ದಲಿತ ಸಂಘಟನೆಗಳ ಮುಖಂಡ ಬಿ.ಎನ್.ಗಂಗಾಧರಪ್ಪ ಆಗ್ರಹಿಸಿದರು.ನಗರದ ಕಾರ್ಯನಿರತ ಪತ್ರಕರ್ತರ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸರ್ವರಿಗೂ ಸಮಾನತೆ, ಸಹೋದರತ್ವ ಭಾವನೆ ಮೂಡಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡು ಮೀಸಲಾತಿ ಕಲ್ಪಿಸಿದ್ದಾರೆ. ಸಾಮಾಜಿಕ ನ್ಯಾಯವು ಯಾವಾಗಲೂ ಸಮಾನ ಅನುಪಾತ ಪರಿಹಾರದ ಕಲ್ಪನೆಗಳನ್ನು ಹುಟ್ಟುಹಾಕುತ್ತದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಅಹಿಂದ ವರ್ಗಗಳಿಂದ ಬಂದಿರುವೆನೆಂದು ಹೇಳಿಕೊಂಡು ತಾವು ಅಲ್ಪ ಸಂಖ್ಯಾತ, ಹಿಂದುಳಿದ, ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದು ಅಹಿಂದ ವರ್ಗಗಳನ್ನು ತುಳಿಯುವ ನಾಯಕರಾಗಿದ್ದೀರಿ ಎಂದರು.
ಸಂವಿಧಾನದ 13ನೇ ವಿಧಿಯನ್ವಯ ಸಂವಿಧಾನ ವಿರೋಧಿ ಕಾನೂನು ಮಾಡುವಂತಿಲ್ಲ. ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನ ವಿರೋಧಿಯಾಗಿ ದಲಿತರಿಗೆ ಮೀಸಲಿಟ್ಟಿದ್ದ ಹಣವನ್ನು ಗ್ಯಾರಂಟಿಗಳಿಗೆ ಉಪಯೋಗಿಸಿಕೊಂಡು ಸಂವಿಧಾನ ಹಾಗೂ ದಲಿತ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದ್ದೀರಿ. ತಾವು ಏಕೆ ಬೇರೆ ಬೇರೆ ಜನಾಂಗಗಳ ಅಭಿವೃದ್ಧಿ ನಿಗಮಗಳಿಗೆ ಮೀಸಲಿಟ್ಟ ಹಣವನ್ನು ಏಕೆ ಗ್ಯಾರಂಟಿಗಳಿಗೆ ಬಳಸುತ್ತಿಲ್ಲಾ. ಕೇವಲ ದಲಿತರ ಮೀಸಲು ಹಣವೇ ನಿಮಗೆ ಬೇಕೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದಲಿತರ ಹಣ ಬಳಸಿದ್ದರಿಂದ ಈಗ ವೀಲ್ಹ್ ಚೇರಿನಲ್ಲಿ ಓಡಾಡುತ್ತಿದ್ದೀರಿ ಎಂದು ಕಿಡಿಕಾರಿದರು.ರಾಜ್ಯ ಸರ್ಕಾರ ದಲಿತರಿಗೆ ಮೀಸಲಿಟ್ಟಿದ್ದ ಅನುದಾನದಲ್ಲಿ 2023- 24ರಲ್ಲಿ 11,144 ಕೋಟಿ, 2024- 25ರಲ್ಲಿ 14,282 ಕೋಟಿ ಗ್ಯಾರಂಟಿಗಳಿಗೆ ಉಪಯೋಗಿಸಿಕೊಂಡಿದೆ. ಇದೀಗ 14,488 ಕೋಟಿಗಳ ದಲಿತರ ಹಣವನ್ನು ಗ್ಯಾರಂಟಿಗಳಿಗೆ ಉಪಯೋಗಿಸಲು ಮುಂದಾಗಿದೆ. ಇದು ದಲಿತರ ಮೀಸಲಾತಿಗೆ ಬಹುದೊಡ್ಡ ಕೊಡಲಿಪೆಟ್ಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದೆರಡು ವರ್ಷಗಳಿಂದ ಬರೊಬ್ಬರಿ 25 ಸಾವಿರ ಕೋಟಿ ದಲಿತರ ಮೀಸಲಾತಿ ಹಣ ಗ್ಯಾರಂಟಿಗಳಿಗೆ ಉಪಯೋಗ ಮಾಡಿರುವ ಹಣ ಕೂಡಲೇ ಆಯಾ ಇಲಾಖೆಗಳಿಗೆ ವಾಪಸ್ ನೀಡಬೇಕು, ಮೀಸಲಾತಿ ಹಣ ಗ್ಯಾರಂಟಿಗಳಿಗೆ ಉಪಯೋಗ ಮಾಡಬಾರದು ಹಾಗೂ 1978ರ ಪಿಟಿಸಿಎಲ್ ಕಾಯ್ದೆಯನ್ನು ಯಥಾವತ್ತಾಗಿ ಜಾರಿಗೆ ತರಬೇಕು, ಕೂಡಲೇ ಒಳ ಮೀಸಲಾತಿ ಜಾರಿಗೆ ತರಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಚಿಕ್ಕಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ದಲಿತ ಮುಖಂಡರಾದ ಸುರೇಶ್, ನರಸಿಂಹಯ್ಯ, ಆದಿ, ಕಾಳಪ್ಪ, ನರಸಿಂಹಪ್ಪ, ಕೃಷ್ಣಮೂರ್ತಿ, ಮತ್ತಿತರರು ಇದ್ದರು.