ಕನ್ನಡಪ್ರಭ ವಾರ್ತೆ ಕೋಲಾರ
ವಿದ್ಯುನ್ಮಾನ ಸಾಧನಗಳು ನಮ್ಮ ಜೀವನವನ್ನು ನಿಯಂತ್ರಣ ಮಾಡುವಷ್ಟು ಅವಲಂಬಿತವಾಗಬಾರದು, ಇಂಟರ್‌ನೆಟ್‌ನಿಂದ ಸಿಗುವ ಮೋಜಿಗಿಂತ ಅದರ ದುಷ್ಪರಿಣಾಮಗಳನ್ನು ಸಹ ಅರಿಯಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯಪಟ್ಟರು.ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವಿಶ್ವ ಅಂತರ್ಜಾಲ ಸುರಕ್ಷಿತ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕ್ರಿಯಾಶೀಲತೆ ಮೊಟಕುಇತ್ತೀಚೆಗೆ ಜಾಲತಾಣದಲ್ಲಿ ಮೋಸ ಮಾಡುವವರ ಹಾಗೂ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಮೊಬೈಲ್ ಕೈಗೆ ಬಂದಾಗಿನಿಂದ ನಾವು ನಮ್ಮ ಮೆದುಳನ್ನು ಬಳಸುವುದನ್ನು ಕಡಿಮೆ ಮಾಡಿದ್ದೇವೆ. ಮೊಬೈಲ್ ಮತ್ತು ಅಂರ್ತಜಾಲವು ಮನುಷ್ಯನ ಕ್ರಿಯಾಶೀಲತೆ ಹಾಗೂ ಬುದ್ಧಿಮತ್ತೆಯನ್ನು ಮೊಟಕುಗೊಳಿಸುತ್ತಿದೆ. ದಿನೇ ದಿನೇ ಕೃತಕ ಬುದ್ಧಿಮತ್ತೆಯು ಮನುಷ್ಯನನ್ನು ನಿಯಂತ್ರಿಸುತ್ತಿದೆ. ಇದು ಕಳವಳ ಉಂಟು ಮಾಡುತ್ತಿದೆ. ಅದರಲ್ಲೂ ಯುವ ಜನತೆಯಂತೂ ಪ್ರತಿ ಕ್ಷಣವೆಂಬಂತೆ ಅಂತರ್ಜಾಲದಲ್ಲಿ ಜಾಲಾಡುವುದನ್ನು ಕಾಣಬಹುದು ಎಂದರು.
ರಾಷ್ಟ್ರೀಯ ಮಾಹಿತಿ ಕೇಂದ್ರದ ಜಂಟಿ ನಿರ್ದೇಶಕ ಸ್ವಾಮಿ ಮಾತನಾಡಿ, ಪ್ರಸಕ್ತ ವಿದ್ಯಮಾನಗಳಲ್ಲಿ ಆರ್ಥಿಕ ವಂಚನೆ, ದಾಖಲೆಗಳ ದುರುಪಯೋಗ ಮುಂತಾದ ಸೈಬರ್ ಅಪರಾಧ ಹೆಚ್ಚಾಗಿವೆ. ಇದೇ ಕಾರಣಕ್ಕೆ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಜೀವನದಲ್ಲಿ ತಂತ್ರಜ್ಞಾನವು ಹಾಸುಹೊಕ್ಕಾಗಿರುವುದರಿಂದ ಸುರಕ್ಷತೆಯಿಂದ ತಂತ್ರಜ್ಞಾನ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.ಜಾಲತಾಣ ಬಳಸಿ ಮೋಸ
ಉಪನ್ಯಾಸಕ ಎಸ್.ಚಂದ್ರಪ್ಪ ಮಾತನಾಡಿ, ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ ನೀಡಿದರೂ ಆಧಾರ್, ಪ್ಯಾನ್ ಕಾರ್ಡ್, ಮೊಬೈಲ್ ಸಂಖ್ಯೆ, ಜನ್ಮ ದಿನಾಂಕ, ಬ್ಯಾಂಕ್ ಮತ್ತು ಕ್ರೆಡಿಟ್ ಕಾರ್ಡ್, ಪಾಸ್ ಪೋರ್ಟ್, ವೈದ್ಯಕೀಯ, ಬಯೋಮೆಟ್ರಿಕ್ ಇವೆಲ್ಲವನ್ನೂ ಬಳಸಿಕೊಂಡು ಜಾಲತಾಣಗಳಲ್ಲಿ ಮೋಸ ಮಾಡುತ್ತಾರೆ, ಆದ್ದರಿಂದ ಜಾಗರೂಕರಾಗಿರಬೇಕು ಎಂದು ತಿಳಿಸಿದರು.ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಂಡರೆ ನಿಮ್ಮ ಸ್ಮಾರ್ಟ್‌ಫೋನ್ ಕಾರ್ಯ ನಿಧಾನ ಆಗುತ್ತದೆ. ಐಓಎಸ್ ಐಫೋನ್‌ಗಳಿಗೆ ಹೋಲಿಸಿದರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಅಸುರಕ್ಷಿತ ಆ್ಯಪ್‌ಗಳಿಂದ ಅಪಾಯ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಆದ್ದರಿಂದ ಇಂಥ ಅಸುರಕ್ಷಿತ ಆ್ಯಪ್‌ಗಳನ್ನು ದೂರವಿಡಿ ಎಂದು ತಿಳಿಸಿದರು.
ಎಚ್ಚರಿಕೆಯಿಂದ ಬಳಸಿಸಾಮಾಜಿಕ ಮಾಧ್ಯಮಗಳಲ್ಲಿ ಸುರಕ್ಷಿತೆಯಿಂದ ಇರಬೇಕು. ಡಿಜಿಟಲ್ ನೈರ್ಮಲ್ಯವನ್ನು ಕಾಪಾಡಿಕೊಳ್ಳ್ಳಬೇಕು, ಪರವಾನಗಿ ಪಡೆದು ಸಾಫ್ಟ್‌ವೇರ್ ಬಳಸಬೇಕು, ಒಂದು ಉತ್ತಮ ಆ್ಯಂಟಿ ವೈರಸ್ ಬಳಸಬೇಕು, ವಿಶ್ವಾಸಾರ್ಹ ಮೂಲದಿಂದ ಸಾಪ್ಟ್‌ವೇರ್ ಖರೀದಿಸಿ ಡೌನ್ಲೋಡ್ ಮಾಡಿ, ಎಲ್ಲಾ ಸಾಪ್ಟ್‌ವೇರ್ ಮತ್ತು ಆ್ಯಂಟಿವೈರಸ್ ಅನ್ನು ನವೀಕೃತವಾಗಿರಿಸಿಕೊಳ್ಳಿ, ರಿಮೋಟ್ ಡೆಸ್ಕ್‌ಟಾಪ್ ನೀಡಬೇಡಿ, ಅವಧಿ ಮೀರಿದ ಸಾಪ್ಟ್‌ವೇರ್ ಮತ್ತು ಹಾರ್ಡ್‌ವೇರ್ ಬಳಸಬೇಡಿ ಎಂದರು.
ಕಾರ್ಯಾಗಾರದಲ್ಲಿ ಉಪನ್ಯಾಸಕ ಶ್ರೀನಿವಾಸಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಕುಮಾರಸ್ವಾಮಿ, ಕೌಶಲ್ಯಾಭಿವೃದ್ಧಿ ಇಲಾಖೆಯ ಶ್ರೀನಿವಾಸ್ ಇದ್ದರು.