ಧಾರವಾಡ: ಕೃತಕ ಬುದ್ಧಿಮತ್ತೆಯನ್ನು ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಬಳಸುವುದು ಕೃಷಿ ಇಲಾಖೆ ಆದ್ಯತೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಬುಧವಾರ ಇಲ್ಲಿಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಕೇಂದ್ರದ ನೂತನ ಕಟ್ಟಡ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ನೂತನ ಕಟ್ಟಡ ಮತ್ತು ಜೈವಿಕ ಗೊಬ್ಬರ ಗುಣ ನಿಯಂತ್ರಣ ಪ್ರಯೋಗಾಲಯ ಉದ್ಘಾಟಿಸಿದ ಅವರು, ಕೃತಕ ಬುದ್ಧಿಮತ್ತೆ ಕೇಂದ್ರ ಕಟ್ಟಡವನ್ನು ₹3.75 ಕೋಟಿ ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ನಿರ್ಮಿಸಲಾಗಿದೆ. ಕಟ್ಟಡದಲ್ಲಿ ವರ್ಕ್ ಸ್ಪೇಸ್ ಕ್ಯೂಬಿಕಲ್ಸ್, ಸರ್ವರ್ ಕೊಠಡಿ, ಬ್ಯಾಟರಿ ಕೊಠಡಿ, ಯುಟಿಲಿಟಿ ಮತ್ತು ಟೂಲ್ ರೂಮ್, ಕಾನ್ಫರೆನ್ಸ್ ಹಾಲ್, ಹಾಡ್ ಕ್ಯಾಬಿನ್, ಊಟದ ಕೊಠಡಿ, ಲಿಫ್ಟ್ ಇನ್ನು ಹಲವಾರು ವ್ಯವಸ್ಥೆ ಮಾಡಲಾಗಿದೆ ಎಂದರು.ಎಐದಿಂದ ವಿವಿಧ ಕ್ಷೇತ್ರಗಳ ಜ್ಞಾನ ಬಳಸಿಕೊಳ್ಳಬಹುದು. ಇತ್ತೀಚಿನ ದಿನಮಾನಗಳಲ್ಲಿ ಈ ತಂತ್ರಜ್ಞಾನ ಬಳಸಿ ಉತ್ಪಾದನಾ ಪದ್ಧತಿ ಸುಧಾರಿಸಲಾಗಿದೆ. ಇಳುವರಿ ಹೆಚ್ಚಾಗಿದೆ, ಕೃಷಿ ಕ್ಷೇತ್ರವು ವೈವಿಧ್ಯಮಯವಾಗಿದೆ. ಹೆಚ್ಚಿನ ಅಂಕಿ-ಅಂಶ ಮತ್ತು ದೊಡ್ಡ ಪ್ರಮಾಣದ ಮಾಹಿತಿ ಸಂಗ್ರಹಿಸುವುದು, ಬಳಸುವುದು, ಅವಶ್ಯವಾಗಿದೆ ಎಂದ ಅವರು, ಎಲ್ಲ ಕೆಲಸವನ್ನು ಸುಲಭವಾಗಿ ಹಾಗೂ ನಿಖರವಾಗಿ ಮಾಡಲು ಎಐ ಸಹಾಯಕವಾಗಿದೆ. ಕಾಲಕಾಲಕ್ಕೆ ಬದಲಾಗುತ್ತಿರುವ ಕೃಷಿ ವಲಯದ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೀತಿ-ನಿರ್ಧಾರ ರೂಪಿಸುವಲ್ಲಿ ಪ್ರಸ್ತುತ ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾಗಿದೆ. ವಿವಿಧ ಬೇಸಾಯ ಕ್ರಮಗಳು, ಬಿತ್ತನೆ, ನೀರಾವರಿ, ಗೊಬ್ಬರ ಬಳಕೆ, ಕ್ರಿಮಿಕೀಟಗಳ ನಿರ್ವಹಣೆ ಮುಂತಾದವುಗಳಿಗೆ ಎಐಎಸಿ ನೆರವಿಗೆ ಬರುತ್ತದೆ. ದೂರಸಂವೇದಿ ತಂತ್ರಜ್ಞಾನದೊಂದಿಗೆ ವೈಜ್ಞಾನಿಕವಾಗಿ ಸಂಪನ್ಮೂಲಗಳ ನಿರ್ವಹಣೆ ಮಾಡಬಹುದಾಗಿದೆ ಎಂದರು.
ಜೈವಿಕ ಗೊಬ್ಬರ ಬಳಕೆಯಿಂದ ಕೃಷಿಯಲ್ಲಿ ರಸಗೊಬ್ಬರ ಪ್ರಮಾಣ ಕಡಿಮೆ ಮಾಡಬಹುದು, ಉತ್ಪಾದನಾ ವೆಚ್ಚ ತಗ್ಗಿಸುವುದು, ಪರಿಸರ ಮಾಲಿನ್ಯ ನಿಯಂತ್ರಿಸಬಹುದು. ಮಾರುಕಟ್ಟೆಯಲ್ಲಿ ವಿವಿಧ ಜೈವಿಕ ಗೊಬ್ಬರಗಳು ಲಭ್ಯವಿದ್ದು, ಅವುಗಳ ಗುಣಮಟ್ಟ ಖಾತ್ರಿಪಡಿಸಿಕೊಳ್ಳುವುದು ಅವಶ್ಯಕವಾಗಿದೆ. ಜೈವಿಕ ಗೊಬ್ಬರ ಗುಣನಿಯಂತ್ರಣ ಪ್ರಯೋಗಾಲಯವು ಮಾದರಿ ವಿಶ್ಲೇಷಣೆ ಕೆಲಸ ಪೂರೈಸುತ್ತದೆ. 2019-20ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕಟ್ಟಡ ನವೀಕರಣ ಮತ್ತು ವಿಸ್ತರಣೆ ಕಾಮಗಾರಿ ಕೈಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.ಶಾಸಕ ಎನ್.ಎಚ್. ಕೋನರಡ್ಡಿ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಕೃಷಿ ಇಲಾಖೆ ಆಯುಕ್ತ ವೈ.ಎಸ್. ಪಾಟೀಲ, ನಿರ್ದೇಶಕ ಡಾ. ಜಿ.ಟಿ. ಪುತ್ರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಇದ್ದರು.