ಅಕ್ರಮ ಖಾತೆಗಳ ರದ್ದು ನನ್ನ ಹೋರಾಟದ ಫಲ: ಮಾಜಿ ಶಾಸಕ ಡಾ.ಕೆ.ಅನ್ನದಾನಿ

KannadaprabhaNewsNetwork |  
Published : May 15, 2025, 01:58 AM IST
೧೪ಕೆಎಂಎನ್‌ಡಿ-೧ಮಂಡ್ಯದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಳವಳ್ಳಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿದರು. | Kannada Prabha

ಸಾರಾಂಶ

ಶಾಸಕ ನರೇಂದ್ರಸ್ವಾಮಿ ಅವರು ದಾಖಲೆಗಳನ್ನಿಟ್ಟುಕೊಂಡು ಮಾತನಾಡಬೇಕೆಂದು ಹೇಳಿರುವುದರಿಂದ ದಾಖಲೆಗಳನ್ನು ಹಾಜರುಪಡಿಸಿಯೇ ಮಾತನಾಡುತ್ತಿದ್ದೇನೆ. ಗೋಮಾಳ, ಗುಂಡುತೋಪು ಸೇರಿದಂತೆ ಇನ್ನಿತರ ಸರ್ಕಾರಿ ಜಮೀನುಗಳು ಅಕ್ರಮವಾಗಿ ಖಾತೆಯಾಗಿದ್ದು ಆರ್‌ಟಿಸಿ ರದ್ದುಪಡಿಸುವಂತೆ ಒತ್ತಾಯಿಸಿ ೧೦ ಜನವರಿ ೨೦೨೪ರಂದೇ ಹೋರಾಟ ನಡೆಸಿದ್ದೇನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳವಳ್ಳಿ ತಾಲೂಕಿನಲ್ಲಿ ಸರ್ಕಾರಿ ಭೂಮಿಗಳನ್ನು ಅಕ್ರಮವಾಗಿ ಪರಭಾರೆ ಮಾಡಿರುವುದರ ವಿರುದ್ಧ ಮೊದಲು ದನಿ ಎತ್ತಿ ಹೋರಾಟ ನಡೆಸಿದವನು ನಾನು. ಅದಕ್ಕೆ ಪೂರಕ ದಾಖಲೆಗಳು ನನ್ನ ಬಳಿ ಇವೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹಾಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿಗೆ ತಿರುಗೇಟು ನೀಡಿದರು.

ನರೇಂದ್ರಸ್ವಾಮಿ ಅವರು ದಾಖಲೆಗಳನ್ನಿಟ್ಟುಕೊಂಡು ಮಾತನಾಡಬೇಕೆಂದು ಹೇಳಿರುವುದರಿಂದ ದಾಖಲೆಗಳನ್ನು ಹಾಜರುಪಡಿಸಿಯೇ ಮಾತನಾಡುತ್ತಿದ್ದೇನೆ. ಗೋಮಾಳ, ಗುಂಡುತೋಪು ಸೇರಿದಂತೆ ಇನ್ನಿತರ ಸರ್ಕಾರಿ ಜಮೀನುಗಳು ಅಕ್ರಮವಾಗಿ ಖಾತೆಯಾಗಿದ್ದು ಆರ್‌ಟಿಸಿ ರದ್ದುಪಡಿಸುವಂತೆ ಒತ್ತಾಯಿಸಿ ೧೦ ಜನವರಿ ೨೦೨೪ರಂದೇ ಹೋರಾಟ ನಡೆಸಿದ್ದೇನೆ. ಶಾಸಕರು ತಾವು ಬಂದ ಮೇಲೆ ತನಿಖೆ ನಡೆಸಿದ್ದೇನೆ, ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇನೆ ಎಂದು ಹೇಳಿರುವುದು ಬರೀ ಸುಳ್ಳಿನ ಕಂತೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಸುಳ್ಳಿದ್ದರೆ ಮಾನನಷ್ಟ ಮೊಕದ್ದಮೆ ಹಾಕಲಿ:

ಸರ್ಕಾರಿ ಭೂಮಿ ಅಕ್ರಮ ಖಾತೆಯಾಗಿರುವ ಕುರಿತು ತನಿಖೆ ನಡೆಸಿ ಖಾತೆ ರದ್ದುಗೊಳಿಸುವಂತೆ ರಾಜ್ಯಪಾಲರು, ಲೋಕಾಯುಕ್ತ, ಸರ್ಕಾರದ ಮಟ್ಟದ ಉನ್ನತಾಧಿಕಾರಿಗಿಳಿಗೆ ಪತ್ರ ಬರೆದು ಒತ್ತಾಯಿಸಿದ್ದೆವು. ನಮ್ಮ ಹೋರಾಟ ಮತ್ತು ಒತ್ತಾಯದ ಫಲವಾಗಿ ಸುಮಾರು ೩೦೫ ಎಕರೆ ಜಮೀನಿನ ಅಕ್ರಮ ಖಾತೆಗಳನ್ನು ರದ್ದುಗೊಳಿಸಲಾಗಿದೆ. ಇದಕ್ಕೆ ದಾಖಲೆಗಳನ್ನೂ ಕೊಡುತ್ತಿದ್ದೇನೆ. ಇದೇನಾದರೂ ಸುಳ್ಳಿದ್ದರೆ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಸವಾಲು ಹಾಕಿದ್ದರು.

ಅಕ್ರಮವಾಗಿ ಮನೆ ನಿರ್ಮಾಣ:

ಪೂರಿಗಾಲಿಯಲ್ಲಿ ಶಾಲಾ ಕಾಂಪೌಂಡ್ ಕೆಡವಿ, ಅಲ್ಲಿದ್ದ ವಾಟರ್ ಟ್ಯಾಂಕ್ ನೆಲಸಮಗೊಳಿಸಿ ಶಾಸಕರು ಹೊಸದಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ಇದರ ಸಂಬಂಧ ಫಣೀಶ್ ಎಂಬುವವರು ೨೦೧೭ರಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಶಾಲಾ ಕಾಂಪೌಂಡ್ ಒಡೆಸಿರುವ ಸಂಬಂಧ ಪೂರಕವಾದ ದಾಖಲೆಗಳನ್ನು ಒದಗಿಸುವುದಕ್ಕೂ ಸಿದ್ಧನಿದ್ದೇನೆ. ಇದಲ್ಲದೆ ಊರಿನಲ್ಲಿರುವ ಶಾಸಕರ ಹಳೆಯ ಮನೆಯನ್ನು ರಾಮಸ್ವಾಮಿ ನಾಲೆಯ ರಾಜಾಕಾಲುವೆ ಮೇಲೆಯೇ ನಿರ್ಮಿಸಲಾಗಿದೆ. ಇವರೇ ಅಕ್ರಮ ಮಾಡಿದ್ದಾರೆ ಎಂದು ಆರೋಪಿಸಿದರು.

ಮಳವಳ್ಳಿ ತಾಲೂಕಿನಲ್ಲಾದ ಅಭಿವೃದ್ಧಿ ಕೆಲಸಗಳು ತಮ್ಮಿಂದಲೇ ಆಗಿದೆ ಎಂದು ಮಿಸ್ಟರ್‌ ಎಂಎಲ್‌ಎ ಬಿಂಬಿಸಿಕೊಳ್ಳುತ್ತಿದ್ದು, ಅವರು ಮಂತ್ರಿಯಾಗಿ, ಶಾಸಕರಾಗಿ ಎಷ್ಟು ಅಭಿವೃದ್ಧಿ ಕೆಲಸಗಳನ್ನು ತಾಲೂಕಿಗೆ ತಂದಿದ್ದಾರೆ ಎಂಬುದರ ದಾಖಲೆ ಬಿಡುಗಡೆ ಮಾಡಿ ಚರ್ಚೆಗೆ ಬರಲಿ ಎಂದು ತಾಕೀತು ಮಾಡಿದರು.

ನಾನು ದೇವರಾಜ ಅರಸು ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿದ್ದ ವೇಳೆ ಹಿಂದುಳಿದ ವರ್ಗದ ಜನರಿಗೆ ಅನುದಾನ ಒದಗಿಸಿ, ಅಭಿವೃದ್ಧಿಯತ್ತ ಸಾಗಲು ಸಹಾಯ ಮಾಡಿದ್ದೇನೆ. ಇದರಿಂದ ಕುರುಬ, ಕುಂಬಾರ, ತಿಗಳ ಸೇರಿದಂತೆ ಹಲವು ಸಮಾಜದವರು ಮುಖ್ಯವಾಹಿನಿಗೆ ಬರುವುದಕ್ಕೆ ಸಹಕಾರಿಯಾಗಿದೆ ಎಂದು ದಾಖಲೆಗಳನ್ನು ಮುಂದಿಟ್ಟರು.

ಶ್ರೀ ಮಲ್ಲಿಕಾರ್ಜುನ ದೇಗುಲಕ್ಕೆ ಪ್ರಮಾಣಕ್ಕೆ ಬರಲಿ:

ತಾವು ಮಂತ್ರಿಯಾಗಿದ್ದ ವೇಳೆ ಏನೆಲ್ಲ ಕೆಲಸ ಮಾಡಿದ್ದಾರೆ ಎಂಬ ಸಾಧನೆ ತೆರೆದಿಡಲಿ. ಈಗ ಎರಡು ವರ್ಷಗಳಿಂದ ತಾಲೂಕಿಗೆ ಎಷ್ಟು ಹಣ ತಂದಿದ್ದಾರೆ ಎಂದು ಸಾಬೀತು ಮಾಡಲಿ ಎಂದು ಆಗ್ರಹಿಸಿದ ಅವರು, ತಮ್ಮೆಲ್ಲಾ ದಾಖಲೆಗಳ ಸಮೇತ ತಾವು ಪೂಜಿಸುವ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೆ ಬರಲಿ ಎಂದು ಸವಾಲು ಹಾಕಿದರು.

ಗೋಷ್ಠಿಯಲ್ಲಿ ಜೆಡಿಎಸ್ ಎಸ್ಸಿ ವಿಭಾಗದ ಅಧ್ಯಕ್ಷ ಎಸ್.ಡಿ.ಜಯರಾಂ, ತಾಲೂಕು ಎಸ್ಸಿ ವಿಭಾಗದ ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಶ್ರೀಧರ್, ಕಾಂತರಾಜ್, ಸಿದ್ದಾಚಾರಿ ಇದ್ದರು.

PREV

Recommended Stories

ಯಾವಾಗ ಬೇಕಿದ್ದರೂ ಸಂಪುಟ ಪುನರ್‌ ರಚನೆ : ಗುಂಡೂರಾವ್‌
9 ತಿಂಗಳಲ್ಲಿ 158 ಕಾರ್ಖಾನೆಗಳ ಮುಚ್ಚಲು ಮಂಡಳಿಯ ನೋಟಿಸ್‌