ಆಚರಣೆಗಳಲ್ಲಿ ಧ್ವನಿವರ್ಧಕ ಬಳಕೆ ಮಿತಿಯಲ್ಲಿರಲಿ: ನಗರದ ಪೊಲೀಸ್‌ ಕಮಿಷನರ್‌

KannadaprabhaNewsNetwork |  
Published : Sep 13, 2025, 02:05 AM IST
ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಕಾರ್ಯಕ್ರಮದಲ್ಲಿ ಬಳಸುವ ಧ್ವನಿವರ್ಧಕ ಇತರರಿಗೆ ತೊಂದರೆಯಾಗಬಾರದು ಎಂಬದಷ್ಟೇ ನಮ್ಮ ಕಾಳಜಿ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಮಂಗಳೂರು: ಯಾವುದೇ ಹಬ್ಬಗಳ ಸಾರ್ವಜನಿಕ ಆಚರಣೆ, ಉತ್ಸವಗಳಿಗೆ ಪೊಲೀಸ್‌ ಇಲಾಖೆ ಅಡ್ಡಿ ಪಡಿಸುವುದಿಲ್ಲ. ಆದರೆ ಧ್ವನಿವರ್ಧಕ ಬಳಕೆಯ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾರ್ಯಕ್ರಮದಲ್ಲಿ ಬಳಸುವ ಧ್ವನಿವರ್ಧಕ ಇತರರಿಗೆ ತೊಂದರೆಯಾಗಬಾರದು ಎಂಬದಷ್ಟೇ ನಮ್ಮ ಕಾಳಜಿ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ದಸರಾ ಆಚರಣೆಗೆ ಇಲಾಖೆಯಿಂದ ಸಮಯ, ಧ್ವನಿವರ್ಧಕ ಬಳಕೆ ಕುರಿತಂತೆ ನಿಯಮ ಯಾವ ರೀತಿ ಇರಲಿದೆ ಎಂಬ ಬಗ್ಗೆ ವಿವರಿಸಿದರು. ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಾಕಷ್ಟು ಗಣೇಶೋತ್ಸವ ಮೆರವಣಿಗೆಗಳು ತಡರಾತ್ರಿವರೆಗೆ ನಡೆದಿದೆ. ಎಲ್ಲಿಯೂ ಪೊಲೀಸರು ಸಮಸ್ಯೆ ಕೊಟ್ಟಿಲ್ಲ. ಆದರೆ ಸೌಂಡ್‌ಗೆ ಮಾತ್ರ ಮಿತಿಯನ್ನು ಹಾಕಲಾಗಿತ್ತು. ಗಣೇಶೋತ್ಸವ ಕಾರ್ಯಕ್ರಮದ ಮೆರವಣಿಗೆ ಅಚ್ಚುಕಟ್ಟಾಗಿ ಆಯೋಜನೆಗೊಂಡಿದ್ದು, ಟ್ಯಾಬ್ಲೋಗಳಲ್ಲಿ ಕೂಡಾ ನಾವು ಸೂಚಿಸಿದಷ್ಟೇ ಸೌಂಡ್‌ ಬಳಕೆ ಮಾಡಿದ್ದಾರೆ. ಮುಂಜಾನೆ 2.30ರ ವರೆಗೆ ಮೆರವಣಿಗೆ ನಡೆದಿದ್ದು, ಯಾರಿಗೂ ಸಮಸ್ಯೆಯೂ ಆಗಿಲ್ಲ ಎಂದರು.

ನಾಟಕ, ಯಕ್ಷಗಾನಕ್ಕೂ ಅನ್ವಯ: ನಾಟಕ, ಯಕ್ಷಗಾನಗಳಿಗೂ ಇದೇ ಮಾರ್ಗಸೂಚಿಯಿದ್ದು, ಎಲ್ಲಿ ಎಷ್ಟು ಬೇಕಾದರೂ ಸೌಂಡ್‌ ಇಡುವ ಅವಕಾಶ ಇಲ್ಲ. ಒಳಾಂಗಣ ಮತ್ತು ಹೊರಾಂಗಣ ಕಾರ್ಯಕ್ರಮಗಳ ವ್ಯಾಪ್ತಿ ಎಷ್ಟು? ಎಷ್ಟು ಮಂದಿ ಸೇರುತ್ತಾರೆ ಎನ್ನುವುದನ್ನು ಆಧರಿಸಿ ಅದನ್ನು ಅನುಗುಣವಾಗಿ ಮೈಕ್‌ ಬಳಕೆ ಮಾಡಬೇಕು. ಈ ಬಗ್ಗೆ ಸ್ಥಳೀಯ ಠಾಣೆಗಳಲ್ಲಿ ಅನುಮತಿ ಪಡೆಯುವಾಗಲೇ ಠಾಣಾ ನಿರೀಕ್ಷಕರು ಈ ಬಗ್ಗೆ ಪರಿಶೀಲಿಸಿ ಎಷ್ಟು ಡೆಸಿಬಲ್‌ ಬಳಕೆ ಮಾಡಬಹುದು. 100 ಮಂದಿ ಸೇರುವಲ್ಲಿ 2,000 ಮಂದಿಗೆ ಕೇಳಿಸುವಷ್ಟು ಧ್ವನಿವರ್ಧಕ ಅಳವಡಿಸಿ ಇತರರಿಗೆ ತೊಂದರೆ ಮಾಡಲು ಯಾವುದೇ ರೀತಿಯಲ್ಲಿ ಅವಕಾಶ ನೀಡುವುದಿಲ್ಲ. ಪೊಲೀಸ್‌ ಇಲಾಖೆಯು ಈಗಾಗಲೇ ಸೌಂಡ್‌ ಪತ್ತೆ ಹಚ್ಚುವ ‘ಮೈಕ್‌ ಮೀಟರ್‌’ಗಳನ್ನು ಕೂಡಾ ಇರಿಸಿಕೊಂಡಿದ್ದು, ಎಸಿಪಿಗಳಿಗೆ ಒದಗಿಸಲಾಗಿದೆ. ಅನುಮತಿ ಪಡೆದ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಧ್ವನಿವರ್ಧಕ ಬಳಸಿ ಉಲ್ಲಂಘನೆ ಮಾಡಿದಾಗ ಮಾತ್ರವೇ ಕ್ರಮಕೈಗೊೂಳ್ಳಬೇಕಾಗುತ್ತದೆ ಎಂದವರು ಹೇಳಿದರು.ಯಕ್ಷಗಾನಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಪೊಲೀಸರು ಧ್ವನಿವರ್ಧಕ ತೆಗೆಯುವ ವೀಡಿಯೋ ವೈರಲ್‌ ಆದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ವೀಡಿಯೋ ನಮ್ಮ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲ ಎಂದು ಹೇಳಿದರು.1.7 ಕೋಟಿ ರು. ದಂಡ ವಸೂಲಿ:

ನಿಯಮ ಉಲ್ಲಂಘನೆಯ ದಂಡವನ್ನು ಶೇ.50ರ ರಿಯಾಯಿತಿ ದರದಲ್ಲಿ ಪಾವತಿಸುವ ಅವಕಾಶ ನೀಡಲಾದ ಹಿನ್ನೆಲೆಯಲ್ಲಿ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಆ.23 ರಿಂದ ಸೆ.12ರ ವರೆಗೆ 42,600 ಮಂದಿ 1.7 ಕೋಟಿ ರು. ದಂಡ ಪಾವತಿ ಪಾವತಿ ಮಾಡಿದ್ದಾರೆ. ಸೆ.13ರಂದು ನ್ಯಾಯಾಲಯದಲ್ಲಿ ಲೋಕ ಅದಾಲತ್‌ನಲ್ಲಿ ಪಾವತಿಸಲು ಅವಕಾಶವಿದೆ. ಇದರಿಂದ ದಂಡದ ಮೊತ್ತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್‌ ರೆಡ್ಡಿ ತಿಳಿಸಿದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ