14ರಂದು ಈದ್-ಮಿಲಾದ್ ಸಂದೇಶ ಜಾಥಾ, ಆಕರ್ಷಕ ದಫ್ ಪ್ರದರ್ಶನಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರವಾದಿ ಮೊಹಮ್ಮದ್ (ಸ.ಅ) ಅವರ ಮುಹಜಿಸತ್ತಿನಿಂದ ಪ್ರಸಿದ್ದಿ ಹೊಂದಿರುವ ದಶಕಗಳಿಂದ ವಿರಾಜಪೇಟೆ ಸಮೀಪದ ಚೋಕಂಡಳ್ಳಿಯಲ್ಲಿ ನಡೆಸಿಕೊಂಡು ಬರುತ್ತಿರುವ ‘ಚೋಕಂಡಳ್ಳಿ ಕಂದೂರಿ’ (ಈದ್-ಮಿಲಾದ್) ಕಾರ್ಯಕ್ರಮ ಸೆ.13 ಮತ್ತು 14ರಂದು ನಡೆಯಲಿದೆ ಎಂದು ಚೋಕಂಡಳ್ಳಿ ಈದ್ ಮಿಲಾದ್ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಪಿಎ ಸಿರಾಜುದ್ದೀನ್ ತಿಳಿಸಿದ್ದಾರೆ.ಚೋಕಂಡಳ್ಳಿಯ ಈದ್ ಮಿಲಾದ್ ಸಂರಕ್ಷಣಾ ಸಮಿತಿಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೋಕಂಡಳ್ಳಿಯ ಕಂದೂರಿ ಕಾರ್ಯಕ್ರಮಕ್ಕೆ ಹಲವು ದಶಕಗಳ ಇತಿಹಾಸವಿದೆ. ಕಂದೂರಿ ಕಾರ್ಯಕ್ರಮಕ್ಕೆ ಜಾತಿ, ಧರ್ಮ ಭೇದವಿಲ್ಲದೆ ಎಲ್ಲರೂ ಭಾಗವಹಿಸುತ್ತಿದ್ದಾರೆ ಎಂದರು.
ಸೆ.13ರಂದು ಅಸರ್ ನಮಾಝಿನ ಬಳಿಕ ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ. ರಫಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮದ ಮುಖ್ಯ ಪ್ರಭಾಷಣವನ್ನು ರಫೀಕ್ ಸಹದಿ ದೇಲಂಪಾಡಿ ಮಾಡಲಿದ್ದು, ಪ್ರಾರ್ಥನೆಯನ್ನು ಸೈಯದ್ ಮಹ್ ದಿ ಅಹಮ್ಮದ್ ತಂಙಲ್ ಅಂದ್ರೋತ್ ಲಕ್ಷದ್ವೀಪ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈದ್-ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ ರಫಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಚೋಕಂಡಳ್ಳಿ ಜುಮಾ ಮಸೀದಿ ಮುದರಿಸ್ ಮುಬಶ್ಶಿರ್ ಅಹ್ಸನಿ ಅಲ್ ಕಾಮಿಲ್ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.ಸೆ.14ರಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಪ್ರಭಾಷಣವನ್ನು ಕರ್ನಾಟಕ ರಾಜ್ಯ ಎಸ್‌ಎಸ್‌ಎಫ್ ಅಧ್ಯಕ್ಷ ಹಾಫಿಝ್ ಸುಫಿಯಾನ್ ಸಖಾಫಿ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ ರಫಿ ವಹಿಸಲಿದ್ದಾರೆ. ಪ್ರಾರ್ಥನ ಹಾಗೂ ಉದ್ಘಾಟನೆಯನ್ನು ಸೈಯದ್ ಮಹದಿ ತಂಙಲ್ ಅಂದ್ರೋತ್ ಲಕ್ಷದ್ವೀಪ ನೆರವೇರಿಸಲಿದ್ದಾರೆ.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ವಿರಾಜಪೇಟೆ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಚೋಕಂಡಳ್ಳಿ ಜುಮಾ ಮಸೀದಿ ಅಧ್ಯಕ್ಷ ಪಿ.ಎ ಹನೀಫ್, ರಿಫಾಯಿ ರಾತೀಬ್ ಸಂಘ ಅಧ್ಯಕ್ಷ ಡಿ.ಎಚ್. ಸೂಫಿ ಹಾಜಿ, ಬಿಳುಗುಂದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಿಲ್ಲವಂಡ ಕಾವೇರಪ್ಪ ಸೇರಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಅನ್ನದಾನ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪಿ.ಎ ಸಿರಾಜುದ್ದೀನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈದ್ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎಂ ರಫಿ, ಸಹ ಕಾರ್ಯದರ್ಶಿ ಕೆ.ವೈ. ನಾಸರ್, ಸದಸ್ಯರಾದ ಆಶಿಂ, ಇಸ್ಮಾಯಿಲ್, ಸೈಫುದ್ದೀನ್,ಶಿಹಾಬ್ ಸಹದಿ ಇದ್ದರು.