ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕೆರೆಯಲ್ಲಿ ಹೂಳು ತೆಗೆಯಲು ನಡೆದ ನರೇಗಾ ಕಾಮಗಾರಿಯಲ್ಲಿ ಭಾರೀ ಅಕ್ರಮಗಳು ನಡೆದಿದ್ದು, ತನಿಖೆ ನಡೆಸುವಂತೆ ಚಿಕ್ಕಮಂದಗೆರೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಮಂದಗೆರೆ ಗ್ರಾಪಂ ವ್ಯಾಪ್ತಿಗೆ ಸೇರಿರುವ ಬೇವಿನಹಳ್ಳಿ ಹೆಸರಿನಕೆರೆ ಹೂಳು ತೆಗೆಯಲು ನರೇಗಾ ಕಾಮಗಾರಿಯಲ್ಲಿ ಕ್ರಿಯಾ ಯೋಜನೆಯಲ್ಲಿ ರೂಪಿಸಲಾಗಿತ್ತು. ನರೇಗಾ ಜಾಬ್ ಕಾರ್ಡ್‌ದಾರರು ಕಾಮಗಾರಿ ಮಾಡಬೇಕಿತ್ತು. ಆದರೆ, ಮಾನವನ ಕೆಲಸದ ಬದಲು ಜೆಸಿಬಿ ಯಂತ್ರವನ್ನು ಬಳಸಿ ಕೆರೆ ಹೂಳು ತೆಗೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲಸ ಮಾಡದವರ ಹೆಸರಿನ ಜಾಬ್ ಕಾರ್ಡುದಾರರ ಹೆಸರಿನಲ್ಲಿ ನರೇಗಾ ಕಾಮಗಾರಿ ಹಣವನ್ನು ಪ್ರಭಾವಿಗಳು, ಅಧಿಕಾರಿಗಳು ವ್ಯವಸ್ಥಿತವಾಗಿ ನುಂಗುತ್ತಿದ್ದಾರೆ ಎಂದು ದೂರಿದರು.ಅಧಿಕಾರಿಗಳು ತನಿಖೆ ಹೆಸರಿನಲ್ಲಿ ಒಂದೆರಡು ತಿಂಗಳು ಕಳೆದ ತರುವಾಯ ಬಂದರೆ ಮಳೆಗೆ ಕೆರೆಗೆ ತುಂಬಲಿದೆ. ಕೆರೆ ತುಂಬಿದ ನಂತರ ಅಕ್ರಮ ಪತ್ತೆಯಾಗಲ್ಲ. ಚಿಕ್ಕಮಂದಗೆರೆ ಹೆಸರಿನಲ್ಲಿ ಯಾವುದೇ ಕೆರೆ ಇಲ್ಲ. ಬೇವಿನಹಳ್ಳಿ ಹೆಸರಿನಲ್ಲಿದೆ. ಕಾಮಗಾರಿಯ ಹಣ ಪಡೆಯಬೇಕು ಎಂಬ ಉದ್ದೇಶದಿಂದ ಚಿಕ್ಕಮಂದಗೆರೆ, ಚಿಕ್ಕಮಂದಗೆರೆ ಕೊಪ್ಪಲು, ಬೇವಿನಹಳ್ಳಿ ಹೆಸರಿನಲ್ಲಿ ಕೆರೆಗಳ ಹೆಸರು ನಮೂದಿಸಿ ಕೊಂಡಿದ್ದಾರೆ ಎಂದು ಆರೋಪಿಸಿದರು.
ಕೆರೆಯಲ್ಲಿ ವಿವಿಧ 3 ಗ್ರಾಮಗಳ ಕೆರೆ ಹೆಸರಿನಲ್ಲಿ ನರೇಗಾ ಕಾಮಗಾರಿ ಹೆಸರಿನ ನಾಮಫಲಕ ನಿರ್ಮಿಸಿಕೊಂಡು ಹೂಳು ತೆಗೆಯಲಾಗಿದೆ. ಕೆರೆ ಒಂದೇ ಜಾಗದಲ್ಲಿ 3 ಕ್ರಿಯಾ ಯೋಜನೆ ರೂಪಿಸಿಕೊಂಡು ದಾಖಲೆ ಸೃಷ್ಟಿಸಿಕೊಂಡು ವ್ಯವಸ್ಥಿತವಾಗಿ ಗ್ರಾಪಂ ಅಧಿಕಾರಿಗಳು, ಇಂಜಿನಿಯರ್, ನರೇಗಾ ಮೇಟಿ ಮುಖಂಡರು ಹಣ ನುಂಗುತ್ತಿದ್ದಾರೆ ಎಂದು ಕಿಡಿಕಾರಿದರು.ಅಕ್ರಮಗಳನ್ನು ಪ್ರಶ್ನಿಸಿದರೆ ಕಾರ್ಮಿಕ ಸಂಘಟನೆ ಹೆಸರಿನಲ್ಲಿ ಇಲ್ಲಸಲ್ಲದ ದೂರು ನೀಡುವುದು, ಜಾತಿನಿಂದನೆ ಹೆಸರಿನಲ್ಲಿ ಸುಳ್ಳು ದೂರಿನ ಬೆದರಿಕೆ ಹಾಕುವ ದೌರ್ಜನ್ಯ ಎಸಗುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದರು.
ಇದರ ಬಗ್ಗೆ ಪ್ರಶ್ನೆ ಮಾಡಿದ ಮಂದಗೆರೆ ಗ್ರಾಪಂ ಅಧ್ಯಕ್ಷೆ ನಂದಿನಿ ಮಂಜೇಗೌಡ ಬಿಲ್ ಮಾಡಲು ಆಕ್ಷೇಪ ವ್ಯಕ್ತಪಡಿಸಿದಾಗ ಇವರ ವಿರುದ್ಧವೇ ಹಲವು ಸಂಘಟನೆ ಹೆಸರಿನಲ್ಲಿ ಸುಳ್ಳು ಆರೋಪ ಮಾಡಿದ್ದಾರೆ. ನರೇಗಾ ಕಾಮಗಾರಿ ಮಾಡಲು ಹಲವರು ಜಾಬ್‌ಕಾರ್ಡು ಮಾಡಿಸಿಕೊಂಡಿದ್ದಾರೆ. ಆದರೆ, ಯಾವುದೇ ಕೆಲಸ ಮಾಡದಿದ್ದರೂ ಕೂಲಿಕಾರರ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆ. ಈ ಹಣವನ್ನು ಕೆಲಸದ ಮೇಠಿಗಳು(ಮುಖಂಡ) ಸ್ವಲ್ಪ ಹಣ ತೆಗೆದುಕೊಡಲು ಉಳಿಕೆ ಹಣಕೊಡಲು ತಿಳಿಸಿದಾಗ ಪ್ರಕರಣ ಗ್ರಾಮಸ್ಥರಿಗೆ ಬಯಲಾಗಿದೆ ಎಂದರು.10 ಲಕ್ಷ ರು. ಮೀರಿದರೆ ಟೆಂಡರ್ ಕರೆಯಬೇಕು ಎಂದು ತುಂಡು ಗುತ್ತಿಗೆ ನೆಪದಲ್ಲಿ ಕ್ರಿಯಾಯೋಜನೆ ರೂಪಿಸಿಕೊಂಡು ಸರ್ಕಾರದ ಹಣ ನುಂಗಲಾಗುತ್ತಿದೆ. ಈ ಸಂಬಂಧ ಯಾವುದೇ ಮಾಹಿತಿ ನೀಡುವಂತೆ ಆಗ್ರಹಿಸಿದರೂ ಗ್ರಾಪಂ ಪಿಡಿಒ ಸುವರ್ಣಾ ಯಾವುದೇ ಕರೆ ಸ್ವೀಕರಿಸದೆ ನಿರಾಕರಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.ನರೇಗಾ ಕಾಮಗಾರಿಯಲ್ಲಿ ಯಂತ್ರೋಪಕರ ಬಳಸದೆ ಮಾನವ ಕೆಲಸ ಮಾತ್ರ ಮಾಡಬೇಕು. ಕೆಲಸ ಮಾಡದವರ ಹೆಸರಿನಲ್ಲಿ ಹಣ ಬಿಡುಗಡೆ ಮಾಡುವುದು ಕಾನೂನು ಬಾಹಿರ. ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದರೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಸುಷ್ಮಾ ತಾಪಂ ಇಒ