ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆಗೆ ವೇಗ ನೀಡಲು ಖಾಸಗಿ ಸಂಸ್ಥೆಯನ್ನು ನೇಮಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.
ಬಿಬಿಎಂಪಿ ದಾಖಲೆಗಳಂತೆ ನಗರದಲ್ಲಿ 21ರಿಂದ 22 ಲಕ್ಷ ಆಸ್ತಿಗಳಿಗಳಿದ್ದು, ಆ ಎಲ್ಲ ಆಸ್ತಿಗಳ ಕರಡು ಇ-ಖಾತಾ ಸಿದ್ಧಪಡಿಸಲಾಗಿದ್ದು, ಇದೀಗ ಅಂತಿಮ ಇ-ಖಾತಾ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಭಾರೀ ಸಂಖ್ಯೆಯ ಆಸ್ತಿಗಳಿಗೆ ಇ-ಖಾತಾ ನೀಡಲು ಬಿಬಿಎಂಪಿ ಕಂದಾಯ ಅಧಿಕಾರಿಗಳ ಕಚೇರಿಯ ಜತೆಗೆ ಬೆಂಗಳೂರು ಒನ್ ಕೇಂದ್ರದಿಂದಲೂ ಇ-ಖಾತಾ ವಿತರಣೆಗೆ ಅವಕಾಶ ನೀಡಲಾಗಿದೆ. ಅದರೊಂದಿಗೆ ಇದೀಗ ಇ-ಖಾತಾ ವಿತರಿಸಲು ಖಾಸಗಿ ಸಂಸ್ಥೆ ನೇಮಿಸಲು ಬಿಬಿಎಂಪಿ ಮುಂದಾಗಿದೆ. ಈ ಕುರಿತು ಮುಖ್ಯ ಆಯುಕ್ತರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರದಲ್ಲಿ ಟೆಂಡರ್ ಕರೆದು ಖಾಸಗಿ ಸಂಸ್ಥೆಯನ್ನು ನೇಮಿಸಲಾಗುತ್ತದೆ.
ಪಾಸ್‌ಪೋರ್ಟ್ ವಿತರಣೆ ಮಾದರಿ ಅಳವಡಿಕೆ:ಪಾಸ್‌ಪೋರ್ಟ್‌ಗಳ ದಾಖಲೆ ಪರಿಶೀಲನೆ ಸೇರಿದಂತೆ ಮತ್ತಿತರ ಕಾರ್ಯಕ್ಕಾಗಿ ಖಾಸಗಿ ಸಂಸ್ಥೆ ನೇಮಿಸಲಾಗಿದೆ. ಅದರಿಂದಾಗಿ ಪಾಸ್‌ಪೋರ್ಟ್ ವಿತರಣೆ ವೇಗವಾಗಿ ನಡೆಯಲಿದೆ. ಅದೇ ರೀತಿಯ ವ್ಯವಸ್ಥೆಯನ್ನು ಇ-ಖಾತಾ ವಿತರಣೆಯಲ್ಲೂ ತರಲು ಬಿಬಿಎಂಪಿ ಮುಂದಾಗಿದೆ.
ಹಾಲಿ ಒಂದು ವಾರ್ಡ್‌ನಲ್ಲಿ ಸರಾಸರಿ 30ರಿಂದ 40 ಇ-ಖಾತಾ ವಿತರಣೆ ಮಾಡಲಾಗುತ್ತಿದೆ. ಸದ್ಯ ಇರುವ ಆಸ್ತಿಗಳ ಸಂಖ್ಯೆಯನ್ನು ಗಮನಿಸಿದರೆ ಈ ಸಂಖ್ಯೆ ತೀರಾ ಕಡಿಮೆಯಾಗಿದೆ. ಹೀಗಾಗಿ ಖಾಸಗಿ ಸಂಸ್ಥೆಗೆ ಇ-ಖಾತಾ ವಿತರಣೆಯ ಹೊಣೆ ವಹಿಸಿದರೆ ಶೀಘ್ರದಲ್ಲಿ ಇ-ಖಾತಾ ವಿತರಣೆ ಕಾರ್ಯ ಪೂರ್ಣಗೊಳಿಸಬಹುದು ಎಂಬ ಉದ್ದೇಶ ಬಿಬಿಎಂಪಿ ಹೊಂದಿದೆ.
ಆಸ್ತಿ ಮಾಲೀಕರು ನೇರವಾಗಿ ಇ-ಖಾತಾ ಪಡೆಯುವ ವ್ಯವಸ್ಥೆ: ಇ-ಖಾತಾ ವಿತರಣೆಯಲ್ಲಿ ವೇಗ ನೀಡಲು ಆಸ್ತಿ ಮಾಲೀಕರು ಯಾರ ನೆರವೂ ಪಡೆಯದೇ ತಾವೇ ಇ-ಖಾತಾ ಪಡೆದುಕೊಳ್ಳುವ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ. ನಿಗದಿತ ವೆಬ್‌ಸೈಟ್‌ನಲ್ಲಿ ಯಾವ ರೀತಿ ಇ-ಖಾತಾ ಪಡೆಯಬಹುದು ಎಂಬ ಬಗ್ಗೆ ಬಿಬಿಎಂಪಿ ವೆಬ್‌ಸೈಟ್‌ನಲ್ಲಿ www.bbmpeaasthi.karnataka.gov.inನಲ್ಲಿ ಮಾಹಿತಿ ನೀಡಲಾಗಿದೆ. ಅದನ್ನು ಆಧರಿಸಿ ಆಸ್ತಿ ಮಾಲೀಕರು ನಿಗದಿತ ದಾಖಲೆಗಳನ್ನು ಸಲ್ಲಿಸಿ ಇ-ಖಾತಾ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಆಮೂಲಕ ಫೇಸ್‌ಲೆಸ್, ಸಂಪರ್ಕ ರಹಿತ, ಆನ್‌ಲೈನ್ ಇ-ಖಾತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ನಗರದಲ್ಲಿ ಆಸ್ತಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಕಂದಾಯ ಅಧಿಕಾರಿಗಳ ಕಚೇರಿ, ಬೆಂಗಳೂರು ಒನ್ ಕೇಂದ್ರದ ಜತೆಗೆ ಆಸ್ತಿ ಮಾಲೀಕರೇ ಆನ್‌ಲೈನ್ ಮೂಲಕ ಇ-ಖಾತಾ ಪಡೆಯುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅದರೊಂದಿಗೆ ಇದೀಗ ಪಾಸ್‌ಪೋರ್ಟ್ ವಿತರಣೆ ವ್ಯವಸ್ಥೆಯಂತೆ ಇ-ಖಾತಾ ನೀಡುವುದಕ್ಕೆ ಖಾಸಗಿ ಸಂಸ್ಥೆ ನೇಮಿಸುವ ಚರ್ಚೆ ನಡೆಸಲಾಗಿದೆ.
-ತುಷಾರ್ ಗಿರಿನಾಥ್.ಬಿಬಿಎಂಪಿ ಮುಖ್ಯ ಆಯುಕ್ತ