- ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ತರಬೇತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕೊಪ್ಪಪರಿಸರದ ಮೇಲೆ ದುಷ್ಪರಿಣಾಮ ಬೀರದ ನವೀಕರಿಸಬಹುದಾದ ಇಂಧನ ಶಕ್ತಿ ಬಳಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಭದ್ರಾ ಕಾಡಾ ನಿಗಮದ ಅಧ್ಯಕ್ಷ ಕೆ.ಪಿ. ಅಂಶುಮಂತ್ ಹೇಳಿದರು.ಪಟ್ಟಣದಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ (ಬಿಇಇ), ಭಾರತ ಸರ್ಕಾರದ ಇಂಧನ ಮಂತ್ರಾಲಯದ ಸ್ಟ್ಯಾಂಡರ್ಡ್ ಮತ್ತು ಲೇಬಲಿಂಗ್ ಯೋಜನೆಯಡಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಆಯೋಜಿಸಿದ್ದ ವಿದ್ಯುತ್ ಹಾಗೂ ವಿದ್ಯುನ್ಮಾನ ಉಪಕರಣ ವ್ಯಾಪಾರಿಗಳ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವ್ಯವಸ್ಥೆ ಹಂತ ಹಂತವಾಗಿ ಆಧುನಿಕರಣಗೊಳ್ಳುವ ಹೊತ್ತಿನಲ್ಲಿ ೨೦೦೬ ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನವೀಕರಿಸುವ ಇಂಧನ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ಆರಂಭಿಸಿದರು. ನವೀಕರಿಸಬಹುದಾದ ಇಂಧನ ಅಭಿವೃದ್ಧಿ(ಕ್ರೆಡೆಲ್) ನಿಗಮದ ಅಧ್ಯಕ್ಷರಾಗಿ ಶಾಸಕ ರಾಜೇಗೌಡ ಪ್ರಪಂಚದ ತಂತ್ರಜ್ಞಾನ ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದರು.ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಶ್ ಮಾತನಾಡಿ, ಈ ಹಿಂದೆ ಮೂಲಭೂತ ಸೌಕರ್ಯಗಳಲ್ಲಿ ಗಾಳಿ, ನೀರು, ಆಹಾರ ಅಷ್ಟೇ ಎಂಬುದಿತ್ತು. ಆದರೆ, ಈಗ ವಿದ್ಯುತ್ ಕೂಡ ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿದೆ. ಮನುಷ್ಯನ ಹುಟ್ಟಿ ನಿಂದ ಅಂತ್ಯದವರೆಗೆ ವಿದ್ಯುತ್ ಬಳಕೆ ಅತ್ಯಂತ ಅವಶ್ಯವಾಗಿದೆ. ಆದ್ದರಿಂದ ವಿದ್ಯುತ್ ಉಳಿತಾಯ ಮುಖ್ಯ. ಗ್ರಾಹಕರಿಗೆ ೫ ಸ್ಟಾರ್ ಹೊಂದಿರುವ ವಿದ್ಯುತ್ ಉಪಕರಣ ಬಳಸಲು ಮಾಹಿತಿ ನೀಡುವ ಮೂಲಕ ವಿದ್ಯುತ್ ಉಳಿತಾಯ ಮಾಡಲು ಇಲಾಖೆ ಜತೆಗೆ ಕೈ ಜೋಡಿಸಬೇಕು ಎಂದರು.ಕಾರ್ಯಕ್ರಮ ಅನುಷ್ಠಾನ ಎಜೆನ್ಸಿ ಡಿಟುಓ ಸಂಸ್ಥೆಯ ಪ್ರೀತಿಗುಪ್ತಾ ಮಾತನಾಡಿ, ನವೀಕರಿಸಬಹುದಾದ ಇಂಧನ ಬಳಕೆ ಇದೊಂದು ಆಯ್ಕೆ ಅಲ್ಲ, ಬದಲಿಗೆ ಪ್ರತಿಯೊಬ್ಬರ ಜವಾಬ್ದಾರಿ. ಗ್ರಾಹಕರೊಂದಿಗೆ ಅಂಗಡಿ ಮಾಲೀಕರು ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಗ್ರಾಹಕರಿಗೆ ಶಕ್ತಿ ಉಳಿತಾಯ ಉಪಕರಣದ ಬಗ್ಗೆ ಗೊತ್ತಿರುವುದಿಲ್ಲ, ಅಂಗಡಿ ಮಾಲೀಕರು ಈ ಮಾಹಿತಿ ನೀಡಬೇಕು. ೫ಸ್ಟಾರ್ ವಸ್ತುಗಳನ್ನು ಬಳಸುವುದು ದುಬಾರಿ ಎನಿಸಿದರೂ ಕೂಡ ಹೂಡಿಕೆ ಹಣ 2 ವರ್ಷಗಳಲ್ಲಿ ವಾಪಾಸ್ ಬಂದಿರುತ್ತದೆ ಎಂದರು.
ಶಿವಮೊಗ್ಗದ ಜೆಎಂಎನ್ ಕಾಲೇಜು ಪ್ರಾದ್ಯಾಪಕ ಪ್ರೊ.ಸುರೇಶ್ ವಿದ್ಯುತ್‌ಶಕ್ತಿ ಉಳಿತಾಯ ಮಾಡುವ ಉಪಕರಣಗಳು ಮತ್ತು ಅವುಗಳ ಬಳಕೆ ಬಗ್ಗೆ ಉಪನ್ಯಾಸ ನೀಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಕುಕ್ಕುಡಿಗೆ, ಎಪಿಎಂಸಿ ಅಧ್ಯಕ್ಷ ರಾಜೇಂದ್ರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್. ಇನೇಶ್, ಜಿಪಂ ಮಾಜಿ ಅಧ್ಯಕ್ಷ ಎನ್.ಆರ್.ಪುರದ ಸದಾಶಿವ, ಬಗರ್ ಹುಕುಂ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್, ನುಗ್ಗಿ ಮಂಜುನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸುಂದ್ರೇಶ್, ಕೆಡಿಪಿ ಸದಸ್ಯ ರಾದ ರಾಜಶಂಕರ್, ಬಿ.ಪಿ.ಚಿಂತನ್, ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಸಿ.ರಾಜೇಂದ್ರ, ಕ್ರೆಡೆಲ್‌ನ ಸರಳ, ಗೀತಾ, ಮೆಸ್ಕಾಂ ಇಲಾಖೆ ಅಧಿಕಾರಿಗಳು, ವಿದ್ಯುತ್ ಉಪಕರಣ ಮಾರಾಟಗಾರರು ಭಾಗವಹಿಸಿದ್ದರು.