ಬೆಂಗಳೂರು : ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜಲಾಶಯಗಳಿಂದ ಭೀಮಾನದಿಗೆ 5.10 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಲ್ಯಾಣ ಕರ್ನಾಟಕದ ಯಾದಗಿರಿ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಇಬ್ಬರು ಸಾವಿಗೀಡಾಗಿದ್ದಾರೆ.
2018ರ ನಂತರ ಇದೇ ಮೊದಲ ಬಾರಿಗೆ ಯಾದಗಿರಿ ನಗರಕ್ಕೆ ಭೀಮಾ ನದಿಯ ನೀರು ನುಗ್ಗಿದೆ. ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ 95ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿದ್ದು, ಮುಂಜಾಗ್ರತಾ ಕ್ರಮವಾಗಿ 210 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 58 ಕಾಳಜಿ ಕೇಂದ್ರಗಳಲ್ಲಿ 7,104 ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. ಮಳೆಯಿಂದಾಗಿ 2.60 ಲಕ್ಷ ಹೆಕ್ಟೇರ್‌ನಷ್ಟು ಬೆಳೆಹಾನಿ ಸಂಭವಿಸಿದೆ. ಈ ಮಧ್ಯೆ, ಪ್ರವಾಹದ ನೀರಿಗೆ ಸಿಲುಕಿ ಕಲಬುರಗಿ ತಾಲೂಕಿನ ಸೋಮನಾಥದಲ್ಲಿ ಕೃಷಿ ಕಾರ್ಮಿಕ ಅಶೋಕ ದೊಡ್ಡಮನಿ (50), ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗೋನಾಳದಲ್ಲಿ ಬಸಪ್ಪ (65) ಎಂಬುವರು ಮೃತಪಟ್ಟಿದ್ದಾರೆ.
ಯಾದಗಿರಿ ನಗರಕ್ಕೇ ನುಗ್ಗಿದ ನೀರು:
ಕಳೆದ ಆರು ದಿನಗಳಲ್ಲಿ ಭೀಮಾ ನದಿಗೆ ಒಟ್ಟಾರೆ 24 ಲಕ್ಷ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದು ಬಂದಿದೆ. ಇದರಿಂದಾಗಿ 2018ರ ನಂತರ ಇದೇ ಮೊದಲ ಬಾರಿಗೆ ಪ್ರವಾಹದ ನೀರು ಯಾದಗಿರಿ ನಗರಕ್ಕೆ ನುಗ್ಗಿದೆ. ಭೀಮಾ ನದಿಯಿಂದ ಯಾದಗಿರಿ ನಗರದವರೆಗೆ ಸುಮಾರು 2 ಕಿ.ಮೀ. ದೂರ ಪ್ರವಾಹದ ನೀರು ಆವರಿಸಿಕೊಂಡಿದೆ. ಇದರಿಂದಾಗಿ ನಗರದ ಹಲವೆಡೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ನಗರದ ಕಂಗಳೇಶ್ವರ, ವೀರಾಂಜನೇಯ ದೇವಸ್ಥಾನ, ಹೈಟೆಕ್ ಮೀನು ಮಾರುಕಟ್ಟೆ, ನೂತನವಾಗಿ ನಿರ್ಮಾಣವಾದ ಬಡಾವಣೆಗಳಿಗೆ ನೀರು ನುಗ್ಗಿದ್ದು, ಕೆಲವು ಬಡಾವಣೆಗಳು ಕೆರೆಯಂಗಳದಂತೆ ಕಾಣಿಸುತ್ತಿವೆ. 600ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಯಾದಗಿರಿ ಜಿಲ್ಲೆಯ ರೋಜಾ ಗ್ರಾಮ ಜಲಾವೃತವಾಗಿದ್ದು, ಗ್ರಾಮದ ಗರ್ಭಿಣಿಯರು, ಬಾಣಂತಿಯರು, ವೃದ್ಧರನ್ನು ಸ್ಥಳಾಂತರಿಸಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಭೀಮಾ, ಕಾಗಿಣ, ಕಮಲಾವತಿ ಸೇರಿದಂತೆ ಹಲವು ನದಿಗಳಲ್ಲಿ ಪ್ರವಾಹ ಮುಂದುವರಿದಿದ್ದು, ಬೀದರ್-ಶ್ರೀರಂಗಪಟ್ಟಣ, ಕಲಬುರಗಿ-ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಕಾಗಿಣಾ ನದಿಯ ಪ್ರವಾಹ ಶಹಾಬಾದ್ ಸಮೀಪದ ವಿಶ್ವರಾಧ್ಯ ಹಿರಡೇಶ್ವರ ಪುಣ್ಯಾಶ್ರಮಕ್ಕೆ ನುಗ್ಗಿದ್ದು, ಅಲ್ಲಿದ್ದ ಚಂದ್ರಶೇಖರ ಶರಣರು, ಪತ್ನಿ, ಮಕ್ಕಳನ್ನು ದೋಣಿ ಮೂಲಕ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
ಪ್ರವಾಹದಿಂದಾಗಿ ಭೀಮಾ ತೀರದ ವ್ಯಾಪ್ತಿಯಲ್ಲಿ 350ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, 95ಕ್ಕೂ ಹೆಚ್ಚು ಗ್ರಾಮಗಳಿಗೆ ನೀರು ನುಗ್ಗಿದೆ. 72 ಪ್ರಾಣಿಗಳು ಸಾವನ್ನಪ್ಪಿವೆ. 210 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 58 ಕಾಳಜಿ ಕೇಂದ್ರಗಳಲ್ಲಿ 7,104 ಸಂತ್ರಸ್ತರಿಗೆ ರಕ್ಷಣೆ ನೀಡಲಾಗಿದೆ. ಮಳೆಯಿಂದಾಗಿ ಒಟ್ಟಾರೆ 2.60 ಲಕ್ಷ ಹೆಕ್ಟೇರ್‌ನಷ್ಟು ಬೆಳೆಹಾನಿ ಸಂಭವಿಸಿದೆ.
ಈ ಮಧ್ಯೆ, ಯಾದಗಿರಿ, ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ವಿಜಯಪುರ, ರಾಯಚೂರು, ಗದಗ ಸೇರಿ ಉತ್ತರ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದೆ.
ಪರಿಸ್ಥಿತಿ ಮೇಲೆ ನಿಗಾ ವಹಿಸಿ: ಸಿದ್ದು ತಾಕೀತು
ಬೆಂಗಳೂರು : ಭೀಮಾ ನದಿ ತೀರ ಹಾಗೂ ಬೆಣ್ಣೆತೊರಾದಲ್ಲಿ ಉಂಟಾಗಿರುವ ಪ್ರವಾಹದ ಪರಿಸ್ಥಿತಿ ಮೇಲೆ ತೀವ್ರ ನಿಗಾವಹಿಸಿ ಅಗತ್ಯ ರಕ್ಷಣಾ ಮತ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ, ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ, ಮಹಾರಾಷ್ಟ್ರದ ಉಜನಿ ಹಾಗೂ ನೀರ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಿಟ್ಟಿರುವ ಪರಿಣಾಮ ಭೀಮಾ ನದಿ ತೀರದಲ್ಲಿ ಹಾಗೂ ಬೆಣ್ಣೆತೊರಾದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ನಿರ್ದೇಶನ ನೀಡಿರುವ ಸಿದ್ದರಾಮಯ್ಯ ಅವರು, ಜನ ಹಾಗೂ ಜಾನುವಾರುಗಳಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಕಲಬುರಗಿ ಸೇರಿ ಸಂಬಂಧಪಟ್ಟ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಸಿಇಒ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಕ್ಷಣ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆಗಳನ್ನು ನೀಡಬೇಕು ಎಂದು ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಸಂತ್ರಸ್ತರಿಗೆ ಆಹಾರ ವ್ಯವಸ್ಥೆ ಮಾಡಿ:ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಸಂತ್ರಸ್ತರು, ಜಾನುವಾರುಗಳ ಪ್ರಾಣ ಹಾನಿ ಆಗದಂತೆ ಕ್ರಮಕೈಗೊಳ್ಳಬೇಕು. ಸಂತ್ರಸ್ತರಿಗೆ ಆಹಾರ ಕೇಂದ್ರಗಳು, ಜಾನುವಾರುಗಳಿಗೆ ಅಗತ್ಯ ಮೇವಿನ ವ್ಯವಸ್ಥೆ ಮಾಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
95 ಗ್ರಾಮ: ಮೂರೂ ಜಿಲ್ಲೆಗಳಲ್ಲಿ ಜಲಾವೃತವಾಗಿರುವ ಹಳ್ಳಿಗಳು7104 ಮಂದಿ: ನಿರಾಶ್ರಿತ ಶಿಬಿರದಲ್ಲಿ ಆಶ್ರಯ ಪಡೆದಿರುವ ಜನರು2.60 ಲಕ್ಷ ಹೆಕ್ಟೇರ್: ನೆರೆಯಿಂದಾಗಿ ಬೆಳೆ ನಷ್ಟ ಆಗಿರುವ ಪ್ರದೇಶ350 ಮನೆಗಳು: ಮಳೆ, ಪ್ರವಾಹಕ್ಕೆ ಹಾನಿಗೊಳಗಾದ ಮನೆಗಳು58 ಕೇಂದ್ರ: ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿರುವ ಕಾಳಜಿ ಕೇಂದ್ರಗಳು