ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಿಚಿತರ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಕಾರು ಚಾಲಕನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಅನ್ನಪೂರ್ಣೇಶ್ವರಿನಗರದ ನಿವಾಸಿ ಕೆ.ಎಸ್.ದರ್ಶನ್ (34) ಬಂಧಿತ. ಆರೋಪಿಯಿಂದ 3 ಲಕ್ಷ ರು. ಮೌಲ್ಯದ 30 ಗ್ರಾಂ ತೂಕದ ಚಿನ್ನದ ಗಟ್ಟಿ ಜಪ್ತಿ ಮಾಡಲಾಗಿದೆ. ನಂದಿನಿ ಲೇಔಟ್‌ನ ಗಣೇಶ ಬ್ಲಾಕ್‌ನ ಪರಿಚಿತ ವ್ಯಕ್ತಿಯೊಬ್ಬರ ಮನೆಗೆ ಆ.26ರಂದು ಬಂದಿದ್ದ ಆರೋಪಿಯು ಮನೆಯ ಟಿವಿ ಟೇಬಲ್ ಮೇಲೆ ಇರಿಸಿದ್ದ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಪ್ರಕರಣ ವಿವರ; ದೂರುದಾರರು ಕಳೆದ ಆ.26ರಂದು ಹಾಸನ ಜಿಲ್ಲೆಯ ಗಂಡಸಿಯ ತಮ್ಮ ತೋಟಕ್ಕೆ ತೆರಳಲು ಪರಿಚಿತ ಕಾರು ಚಾಲಕ ದರ್ಶನ್‌ನನ್ನು ಮನೆಗೆ ಕರೆಸಿಕೊಂಡಿದ್ದರು. ಅದರಂತೆ ದರ್ಶನ್ ಬೆಳಗ್ಗೆ 11.30ಕ್ಕೆ ಮನೆಗೆ ಬಂದಿದ್ದಾನೆ. ಈ ವೇಳೆ ಆತನಿಗೆ ತಿಂಡಿ ಸೇವಿಸಲು ಸೂಚಿಸಿ, ಮನೆಯ ಹಾಲ್‌ನ ಟಿವಿ ಟೇಬಲ್ ಮೇಲೆ ಚಿನ್ನಾಭರಣ ಬಿಚ್ಚಿಟ್ಟು ಸ್ನಾನಕ್ಕೆ ತೆರಳಿದ್ದಾರೆ. ಸ್ನಾನ ಮುಗಿಸಿಕೊಂಡು ಬಂದು ನೋಡಿದಾಗ ಟೇಬಲ್ ಮೇಲೆ ಚಿನ್ನಾಭರಣ ಇರಲಿಲ್ಲ. ಕಾರು ಚಾಲಕನೂ ಇರಲಿಲ್ಲ. ಹೀಗಾಗಿ ಆತನಿಗೆ ಹಲವು ಬಾರಿಗೆ ಕರೆ ಮಾಡಿದ್ದು, ಮೊಬೈಲ್ ಸ್ವಿಚ್ಡ್ ಆಫ್ ಬಂದಿದೆ. ಹೀಗಾಗಿ ಆತನ ವಿರುದ್ಧ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಚಿನ್ನ ಕರಗಿಸಿ ಗಟ್ಟಿ ಮಾಡಿಸಿದ್ದ
ದೂರಿನ ಮೇರೆಗೆ ತನಿಖೆ ಆರಂಭಿಸಿದ್ದ ಪೊಲೀಸರು, ಅನ್ನಪೂರ್ಣೇಶ್ವರಿನಗರದ ಮನೆಯಲ್ಲಿ ಕಾರು ಚಾಲಕ ದರ್ಶನ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ತಾನೇ ಚಿನ್ನಾಭರಣ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕದ್ದ ಚಿನ್ನಾಭರಣಗಳನ್ನು ಚಿನ್ನಾಭರಣ ಅಂಗಡಿಯಲ್ಲಿ ಕರಗಿಸಿ ಗಟ್ಟಿಯಾಗಿ ಮಾರ್ಪಡಿಸಿ ಮನೆಯಲ್ಲೇ ಇರಿಸಿಕೊಂಡಿರುವುದಾಗಿ ಹೇಳಿದ್ದಾನೆ. ಅದರಂತೆ ಆತನ ಪತ್ನಿಯಿಂದ 30 ಗ್ರಾಂ ತೂಕದ ಚಿನ್ನದ ಗಟ್ಟಿ ಜಪ್ತಿ ಮಾಡಲಾಗಿದೆ. ನ್ಯಾಯಾಲಯದ ಸೂಚನೆ ಮೇರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.