ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ವೇದಿಕೆಗಳ ಉದ್ಘಾಟನೆ । ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪದವಿಯ ಹಂತದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಎಂ.ಜಿ.ನಾಗರಾಜ್ ಹೇಳಿದರು.
ಶನಿವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025–26ನೇ ಸಾಲಿನ ಐಕ್ಯೂಎಸಿ, ಸಾಂಸ್ಕೃತಿಕ, ಕ್ರೀಡೆ, ಎನ್ ಎಸ್ ಎಸ್, ರೆಡ್ ಕ್ರಾಸ್, ರೋವರ್ಸ್ ಮತ್ತುರೇಂಜರ್ಸ್, ವಿವಿಧ ವೇದಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.ಸಾಂಸ್ಕೃತಿಕ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳು ಸಮುದಾಯದ ಜತೆ ಬೆಸೆಯುತ್ತವೆ. ಯುವಜನಾಂಗ ಮನಸ್ಸು ಮಾಡಿದರೆ ಸದೃಢ ದೇಶಕಟ್ಟಲು ಸಾಧ್ಯ. ತಂದೆ,ತಾಯಿ, ನೆರೆಹೊರೆ, ಸ್ನೇಹಿತರು, ಸಮೂಹ ಮಾಧ್ಯಮ ಎಲ್ಲಾ ಕಡೆ ವಿದ್ಯಾರ್ಥಿಗಳು ಕಲಿಯುವುದು ಇರುತ್ತದೆ. ಪ್ರಸ್ತುತ ಯುವ ಜನಾಂಗದ ಮನಸ್ಸು ಚಂಚಲತೆಯಿಂದ ಕೂಡಿದ್ದು ಸಮಯ, ಜ್ಞಾನದ ಪರಿವಿಲ್ಲದೆ ವಿವೇಚನೆಯಿಂದ ಕೆಲಸ ಮಾಡಿಕೊಳ್ಳುತ್ತಿಲ್ಲ. ದುಡುಕಿನಿಂದ ತೀರ್ಮಾನ ಕೈಗೊಳ್ಳದೆ ವಿವೇಚನೆಯಿಂದ ತೀರ್ಮಾನ ತೆಗೆದುಕೊಳ್ಳಬೇಕು. ದೇವರು ದುಡಿಯುವರ ಕೈಗಳಲ್ಲಿದ್ದಾನೆ. ಕಾಯಕವನ್ನು ಸರಿಯಾಗಿ ಮಾಡಿದರೆ ಯಶಸ್ಸು ಸಾಧಿಸಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, ಕಾಲೇಜು ಒಂದು ಕುಟುಂಬವಿದ್ದಂತೆ. ತಂದೆ,ತಾಯಿ ಮಕ್ಕಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಕಾಲೇಜಿಗೆ ಕಳುಹಿಸುತ್ತಾರೆ. ಅವರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಸೇವಾ ಮನೋಭಾವನೆ, ಸಮಾಜ ಮುಖಿ ಚಿಂತನೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಎಲ್ಲಾ ರೀತಿ ಸಹಕಾರ ನೀಡಲಾಗುವುದು. ಕಾಲೇಜು ಮುಂಭಾಗದಿಂದ ಪಟ್ಟಣದವರೆಗೆ ರಸ್ತೆ ವಿಸ್ತರಣೆಗೆ ಶಾಸಕರ ಸಹಕಾರ ದಿಂದ ಲೋಕೋಪಯೋಗಿ ಸಚಿವರು 54 ಲಕ್ಷ ಅನುದಾನ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.ಜಿಪಂ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ವಿದ್ಯಾರ್ಥಿಗಳು ಸಾಕಷ್ಟು ನಿರೀಕ್ಷೆ ಹಾಗೂ ಗುರಿಗಳನ್ನು ಇಟ್ಟು ಕೊಂಡು ಕಾಲೇಜಿಗೆ ಸೇರಿದ್ದು ಅದರ ಈಡೇರಿಕೆಗೆ ಶ್ರಮಿಸಬೇಕು. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿ ಕೊಂಡು ಭವಿಷ್ಯದ ಬಗ್ಗೆ ಉತ್ತಮ ತೀರ್ಮಾನ ತೆಗೆದುಕೊಂಡು ಸಮಾಜದಲ್ಲಿ ಮಾದರಿಯಾಗಿ ಬದುಕ ಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಧನಂಜಯ ಮಾತನಾಡಿ, ಕಾಲೇಜಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಉತ್ತಮ ಸಹಕಾರ ನೀಡುತ್ತಿದೆ. ವಿದ್ಯಾರ್ಥಿಗಳು ಮಹಾತ್ಮರ ಚರಿತ್ರೆ ಓದಬೇಕು. ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಉಪನ್ಯಾಸಕರ ಮಾರ್ಗದರ್ಶನ ಪಡೆದು ಕಾಲೇಜಿನಲ್ಲಿ ದೊರೆಯುವ ಎಲ್ಲಾ ಸೌಲಭ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.
ಮೆಣಸೂರು ಗ್ರಾಪಂ ಸದಸ್ಯರಾದ ಬಿನು ಜೋಸೆಫ್, ಶಿಲ್ಪ ಅನಿಲ್ ಮಾತನಾಡಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕ ಜೆ.ಎಸ್.ಶಂಕರನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಿರಣ್, ಕನ್ನಡ ವಿಭಾಗದ ಮುಖ್ಯಸ್ಥೆ ಜಿ.ಸವಿತಾ, ವಿದ್ಯಾರ್ಥಿಗಳಾದ ಸಾನಿಯಾ, ಸ್ಫೂರ್ತಿ ಇದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.