ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇರ್ ಟೇಕರ್ ಕೆಲಸಕ್ಕೆ ಸೇರಿದ ಎರಡನೇ ದಿನವೇ ವೃದ್ಧರೊಬ್ಬರ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದ ಮಹಿಳೆಯನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧಿತೆ ಚಿಕ್ಕಬಳ್ಳಾಪುರ ಮೂಲದ ಕಾಳಮ್ಮ(30) ಎಂಬಾಕೆಯಿಂದ 2.50 ಲಕ್ಷ ರು. ಮೌಲ್ಯದ 26 ಗ್ರಾಂ ತೂಕದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಆರೋಪಿ ಆರ್.ಟಿ ನಗರದ 2ನೇ ಬ್ಲಾಕ್‌ನ ಅಪಾರ್ಟ್‌ಮೆಂಟ್ ವೊಂದರಲ್ಲಿ ವೃದ್ಧರೊಬ್ಬರ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದಳು. ಸೆ.17ರಂದು ವೃದ್ಧನನ್ನು ಸ್ನಾನ ಮಾಡಿಸುವಾಗ ಕತ್ತಿನಲ್ಲಿದ್ದ ಚಿನ್ನದ ಸರ ಬಿಚ್ಚಿಕೊಂಡು ಪರಾರಿಯಾಗಿದ್ದಳು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಘಟನೆ ವಿವರ:ದೂರುದಾರರು ಬಾಬುಸಾಬ್ ಪಾಳ್ಯದ ಕಲ್ಯಾಣನಗರದಲ್ಲಿ ಹೆಲ್ತ್‌ಕೇರ್ ಸಂಸ್ಥೆ ನಡೆಸುತ್ತಿದ್ದಾರೆ. ವಯಸ್ಸಾದವರ ಮನೆಗಳಲ್ಲಿ ಕೇರ್ ಟೇಕರ್ ಕೆಲಸಕ್ಕೆ ಜನರನ್ನು ನಿಯೋಜಿಸುವ ಕೆಲಸ ಮಾಡುತ್ತಿದ್ದಾರೆ. ಆರ್.ಟಿ.ನಗರದ 2ನೇ ಬ್ಲಾಕ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ವೃದ್ಧರೊಬ್ಬರ ಕೇರ್ ಟೇಕರ್ ಕೆಲಸ ಮಾಡುತ್ತಿದ್ದ ಮಹಿಳೆ ಕೆಲಸ ಬಿಟ್ಟಿದ್ದರು. ಹೀಗಾಗಿ ಆ ಮಹಿಳೆಯ ಜಾಗಕ್ಕೆ ಕಾಳಮ್ಮನನ್ನು ನಿಯೋಜಿಸಲಾಗಿತ್ತು.ಸ್ನಾನ ಮಾಡಿಸುವಾಗ ಸರ ಬಿಚ್ಚಿದಳು:ಅದರಂತೆ ಸೆ.17ರಂದು ಬೆಳಗ್ಗೆ ಈ ಕಾಳಮ್ಮ ಊರಿನಲ್ಲಿ ತಂಗಿ ಮೃತಪಟ್ಟಿದ್ದಾಳೆ ಎಂದು ವೃದ್ಧನಿಗೆ ಹೇಳಿದ್ದರು. ಊರಿಗೆ ಹೋಗುವ ಮುನ್ನ ವೃದ್ಧನನ್ನು ಸ್ನಾನದ ಮನೆಗೆ ಕರೆದೊಯ್ದು ಸ್ನಾನ ಮಾಡಿಸಿದ್ದಳು. ಈ ವೇಳೆ ವೃದ್ಧನ ಕತ್ತಿನಲ್ಲಿದ್ದ ಚಿನ್ನದ ಸರ ತೆಗೆದುಕೊಂಡು ಪರಾರಿಯಾಗಿದ್ದಳು. ಈ ಸಂಬಂಧ ವೃದ್ಧ ಹೇಲ್ತ್‌ಕೇರ್ ಸಂಸ್ಥೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸಂಸ್ಥೆಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಸರದ ಜತೆಗೆ ಸಿಕ್ಕಿಬಿದ್ದಳು!ಖಚಿತ ಮಾಹಿತಿ ಮೇರೆಗೆ ಬಳ್ಳಾರಿ ಮುಖ್ಯರಸ್ತೆಯ ಸಿಬಿಐ ಬಸ್ ಸ್ಟಾಪ್ ಬಳಿಯ ಮನೆಯೊಂದರಲ್ಲಿ ಕೇರ್ ಟೇಕರ್ ಕೆಲಸ ಮಾಡುತ್ತಿದ್ದ ಕಾಳಮ್ಮನನ್ನು ವಶಕ್ಕೆ ಪಡೆಯಲಾಯಿತು. ವಿಚಾರಣೆ ವೇಳೆ ಚಿನ್ನದ ಸರ ಕಳವು ಮಾಡಿದ್ದನ್ನು ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ಬಳಿಯೇ ಇದ್ದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.