ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಮಹದೇವಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಂಬಾಕಿನ ದುಷ್ಪರಿಣಾಮ ಕುರಿತು ಮಕ್ಕಳ ಮನೆಯಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಮಾಡುತ್ತಿರುವ ಪೋಷಕರಿಗೆ ಪತ್ರ ಚಳವಳಿ ಮೂಲಕ ಅರಿವು ಮೂಡಿಸಲಾಯಿತು.ಆರೋಗ್ಯ ಇಲಾಖೆ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ತಂಬಾಕು ಉತ್ಪನ್ನಗಳ ಬಳಕೆಯಿಂದ ಹೃದಯಘಾತ, ಕ್ಯಾನ್ಸರ್, ಸಕ್ಕರೆ ಕಾಯಿಲೆ, ಅಧಿಕ ರಕ್ತದೋತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಕ್ಷಯರೋಗ, ಶ್ವಾಸಕೋಶ ಸಂಬಂಧಿಸಿದ ಸೋಂಕುಗಳು ಮುಂತಾದ ಮರಣಾಂತಿಕ ಕಾಯಿಲೆಗಳು ಬರುತ್ತವೆ ಮಾಹಿತಿ ನೀಡಿದರು.
ನಂತರ ಪೋಷಕರು ತಪ್ಪದೆ ಇಂತಹ ದುಶ್ಚಟದಿಂದ ದೂರ ಇರಬೇಕು ಹಾಗೂ ಕುಟಂಬದ ಸಂತೋಷಕ್ಕಾಗಿ ನೆಮ್ಮದಿಯ ಜೀವನಕ್ಕಾಗಿ ಹಾಗೂ ಆರೋಗ್ಯಕರ ಜೀವನಕ್ಕಾಗಿ ತಂಬಾಕು ಉತ್ಪನ್ನಗಳ ಬಳಕೆಯನ್ನು ಇಂದಿನಿಂದಲೇ ನಿಲ್ಲಿಸಬೇಕು ಎಂದು ಮಕ್ಕಳು ತಮ್ಮ ಪೋಷಕರಿಗೆ ಪತ್ರ ಬರೆದರು.ಈ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾಂತ ರಾಮು, ಮುಖ್ಯ ಶಿಕ್ಷಕಿ ಇಂದಿರಾ ಬಾಯಿ, ಶಿಕ್ಷಕರಾದ ಸಲ್ಮಾಬೇಗಂ, ನೇತ್ರಾವತಿ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಎ.ಎನ್ ಫಾತಿಮಾ, ಆಶಾ ಕಾರ್ಯಕರ್ತೆಯರಾದ ಮಂಜುಳಾ, ಕಲಾವತಿ, ವರಲಕ್ಷ್ಮಿ, ಕೆ.ಎಸ್ ಲಕ್ಷ್ಮಿ ಸೇರಿದಂತೆ ಇತರರು ಇದ್ದರು.
ಏ.1ರಂದು ಸಂತೆಕಸಲಗೆರೆಯಲ್ಲಿ ಅಟ್ಟುಣ್ಣುವ ಜಾತ್ರೆಮಂಡ್ಯ:
ತಾಲೂಕಿನ ಸಂತೆ ಕಸಲಗೆರೆಯಲ್ಲಿ ಏ.1ರಂದು ಶ್ರೀಭೂಮಿ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಅಟ್ಟುಣ್ಣುವ ಜಾತ್ರೆ ಅದ್ಧೂರಿಯಾಗಿ ಜರುಗಲಿದೆ. ಕಳೆದ ಐದಾರು ವರ್ಷಗಳಿಂದ ದೇವಾಲಯದ ನಿರ್ಮಾಣ ನಡೆಯುತ್ತಿದ್ದರಿಂದ ಸರಳವಾಗಿ ಹಬ್ಬ ಆಚರಣೆ ಮಾಡಲಾಗುತ್ತಿತ್ತು. ಕಳೆದ ಫೆಬ್ರವರಿ ತಿಂಗಳಲ್ಲಿ ನೂತನವಾಗಿ ದೇವಾಲಯ ಉದ್ಘಾಟನೆ ಆಗಿರುವ ಕಾರಣ ಬಹಳ ಅದ್ಧೂರಿಯಾಗಿ, ವಿಜೃಂಭಣೆಯಿಂದ ಶ್ರೀಭೂಮಿ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಜರುಗಲಿದೆ ಎಂದು ಶ್ರೀ ಭೂಮಿಸಿದ್ದೇಶ್ವರ ಅಭಿವೃದ್ಧಿ ಸಮಿತಿಯ ಜಂಟಿ ಕಾರ್ಯದರ್ಶಿ ಎಸ್. ರಾಜು ತಿಳಿಸಿದ್ದಾರೆ.ಸೋಮವಾರ ಸಂಜೆ ಬಾಯ್ ಬೀಗ ಪಂಜಿನ ಸೇವೆ ಹಾಗೂ ಮುಂತಾದ ಕಾರ್ಯಕ್ರಮ ಮತ್ತು ಮಂಗಳವಾರ ವಿಶೇಷವಾಗಿ ಮಹಿಳೆಯರು ಬಿದಿರಿನ ಎಡೆಗೆಯ ಮೂಲಕ ಅಕ್ಕಿ ಮತ್ತು ರಾಗಿಹಿಟ್ಟು ಹಾಗೂ ಮುಂತಾದ ಪದಾರ್ಥಗಳ ಜೊತೆಗೆ ಮಾಂಸಾಹಾರದ ಅಡುಗೆ ಮಾಡುವ ಮೂಲಕ ಅಟ್ಟುಣ್ಣುವ ಜಾತ್ರೆಯನ್ನು ಮಾಡಲಾಗುತ್ತದೆ.