)
ಕನ್ನಡಪ್ರಭ ವಾರ್ತೆ ಬೆಂಗಳೂರುನಗರದ ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್) ವಾಹನ ದಟ್ಟಣೆ ನಿಯಂತ್ರಿಸುವ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬಿಎಂಆರ್‌ಸಿಎಲ್, ಪೊಲೀಸ್ ಇಲಾಖೆ, ಬಿಎಂಟಿಸಿ ಅಧಿಕಾರಿಗಳು, ಹೊರ ವರ್ತುಲ ರಸ್ತೆಯಲ್ಲಿರುವ ವಿವಿಧ ಕಂಪನಿಗಳ ಅಸೋಸಿಯೇಷನ್ ಸದಸ್ಯರ ಜತೆ ಬುಧವಾರ ಸಭೆ ನಡೆಸಿದರು. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಂಚಾರ ದಟ್ಟಣೆ ನಿಯಂತ್ರಿಸಲು ಕಂಪನಿಗಳು ಸಹಕಾರ ನೀಡಬೇಕು. ಅದಕ್ಕೆ ಮುಖ್ಯವಾಗಿ ಕಂಪನಿಯ ನೌಕರರು ಸ್ವಂತ ವಾಹನಗಳ ಬಳಕೆ ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆ ಬಳಸಬೇಕು ಎಂದು ತಮ್ಮ ಸಿಬ್ಬಂದಿಗೆ ಕೋರಬೇಕು. ಅಲ್ಲದೆ, ಹೊರ ವರ್ತುಲ ರಸ್ತೆಯಲ್ಲಿ ಹೊಸ ರೂಪದಲ್ಲಿ ಬಸ್ ಆದ್ಯತಾ ಪಥ ನಿರ್ಮಾಣ ಮಾಡುವುದರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ನಂತರ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಕಾರ್ತಿಕ್ ರೆಡ್ಡಿ ಮಾತನಾಡಿ, ಬಸ್ ಆದ್ಯತಾ ಪಥವನ್ನು ಹೈ ಆಕ್ಯುಪೆನ್ಸಿ ವಾಹನ (ಎಚ್‌ಒವಿ) ಮಾರ್ಗಗಳಾಗಿ ಬದಲಾವಣೆ ಮಾಡಬಹುದು. ಆಗ, ಮೂರು ಮಂದಿಗಿಂತ ಹೆಚ್ಚು ಪ್ರಯಾಣಿಕರಿರುವ ವಾಹನಗಳೂ ಈ ಮಾರ್ಗವನ್ನು ಬಳಸಬಹುದು. ಹೊರವರ್ತುಲ ರಸ್ತೆಯಲ್ಲಿ ಬಸ್ ಆದ್ಯತಾ ಪಥವು ಯಶಸ್ವಿ ಆಗಿತ್ತು. ಅದೇ ಆಧಾರದಲ್ಲಿ ಎಚ್‌ಒವಿ ಮಾರ್ಗಗಳು ಈ ಪ್ರದೇಶಕ್ಕೆ ಪರಿಹಾರ ನೀಡಬಹುದು ಎಂದರು.ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ್ ರೆಡ್ಡಿ ಮಾತನಾಡಿ, ಕೋವಿಡ್ ಲಾಕ್‌ಡೌನ್‌ಗೂ ಮೊದಲು ಬಸ್ ಆದ್ಯತಾ ಪಥಗಳು ಕಾರ್ಯ ನಿರ್ವಹಿಸುತ್ತಿದ್ದವು. ಆಗ ಬಸ್‌ಗಳು 15 ನಿಮಿಷ ಬೇಗ ತಲುಪುತ್ತಿದ್ದವು. ಇಂಧನವೂ ಉಳಿತಾಯವಾಗುತ್ತಿತ್ತು. ಪ್ರಯಾಣಿಕರ ಸಂಖ್ಯೆಯಲ್ಲೂ ಶೇ.4ರಷ್ಟು ಏರಿಕೆ ಆಗಿತ್ತು ಎಂದು ಮಾಹಿತಿ ಹಂಚಿಕೊಂಡರು. ಪ್ರಸ್ತುತ ಹೊರ ವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳು 4000 ಟ್ರಿಪ್ ಸಂಚರಿಸುತ್ತಿವೆ ಎಂದರು.
ಸಭೆಯಲ್ಲಿ ವಿವಿಧ ಐಟಿ ಕಂಪನಿಗಳ ಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ಇದೇ ವೇಳೆ ಹೇಳಿಕೊಂಡರು. ಸಂಚಾರ ವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ ಹಾಗೂ ಇತರೆ ಅಧಿಕಾರಿಗಳು ಇದ್ದರು.