ಮದುವೆ ಮಾಡುವ ಹಣವನ್ನೇ ಬದುಕು ಕಟ್ಟಿಕೊಳ್ಳಲು ಬಳಸಿ

KannadaprabhaNewsNetwork |  
Published : Apr 06, 2025, 01:45 AM IST
ಚಿತ್ರದುರ್ಗ  | Kannada Prabha

ಸಾರಾಂಶ

ಚಿತ್ರದುರ್ಗ ಬಸವ ಕೇಂದ್ರ ಮುರುಘಾ ಮಠದಲ್ಲಿ ಶನಿವಾರ ನಡೆದ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 14 ಜೋಡಿ ವಧು-ವರರು ದಾಂಪತ್ಯಕ್ಕೆ ಅಡಿ ಇಟ್ಟರು.

ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಡಾ.ಬಸವಕುಮಾರ ಸ್ವಾಮೀಜಿ ಸಲಹೆಕನ್ನಡಪ್ರಭವಾರ್ತೆ ಚಿತ್ರದುರ್ಗ

ಮಧ್ಯಮ ವರ್ಗದ ಜನತೆ ಅದ್ಧೂರಿ ಮದುವೆ ಮಾಡಿ, ಸಾಲದಲ್ಲಿ ಮುಳುಗುವ ಬದಲು ಮಕ್ಕಳ ಭವಿಷ್ಯ ಕಟ್ಟಲು ಆ ವೆಚ್ಚ ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ನುಡಿದರು.

ನಗರದ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದಲ್ಲಿ ಶನಿವಾರ ನಡೆದ 35ನೇ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕವಾಗಿ ಗುರುತಿಸಿಕೊಂಡಿರುವುದರಿಂದ ಮುರುಘಾ ಮಠವು ಜನಸಾಮಾನ್ಯರಿಗೆ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ಪ್ರತಿ ತಿಂಗಳು ನಡೆಸುತ್ತಿದೆ. ದುಂದುವೆಚ್ಚ ಮಾಡದೇ, ಆದರ್ಶ ವಿವಾಹಕ್ಕೆ ಒಳಗಾಗಿರುವ ಇಂದಿನ ನವಜೋಡಿಗಳು ಮುಂದಿನ ಜನರಿಗೆ ದಾರಿದೀಪವಾಗಬೇಕು. ಮುರುಘಾ ಮಠದಲ್ಲಿ ಮದುವೆಯಾದ ಸಾವಿರಾರು ಜೋಡಿಗಳು ಉತ್ತಮ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ. ಪಿ.ಎಸ್. ಶಂಕರ್ ಮಾತನಾಡಿ, 12ನೇ ಶತಮಾನದ ವಚನಕಾರರು ಕಾಯಕ, ದಾಸೋಹಕ್ಕೆ ಪ್ರಾಧಾನ್ಯತೆ ನೀಡಿ, ಸಮ ಸಮಾಜಕ್ಕಾಗಿ ಪ್ರಯತ್ನಿಸಿದರು. ದುಡಿಯುವ ವರ್ಗದಲ್ಲಿ ಜಾತಿ ಅಸ್ಪೃಶ್ಯತೆ ಇರುವುದಿಲ್ಲ. ಪ್ರತಿಯೊಬ್ಬರು ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಕಾಯಕದಲ್ಲಿ ಪ್ರಾಮಾಣಿಕತೆ ಇದ್ದಾಗ ಮಾತ್ರ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.

ವಿವಾಹಗಳು ಸರಳವಾಗಿರಬೇಕು. ಬದುಕನ್ನು ಸರಳಗೊಳಿಸಿಕೊಳ್ಳಬೇಕು. ಉತ್ತಮ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಶ್ರೇಷ್ಠ ದಾರಿ ಮಾಡಿಕೊಡಬೇಕು. ಬಸವಾದಿ ಪ್ರಮಥರ ಆಶಯಗಳನ್ನು ಇಂದು ಈಡೇರಿಸಬೇಕಿದೆ. ಬಸವ ಪರಂಪರೆಯ ಮಠಗಳು ವಚನಕಾರರ ವಿಚಾರಧಾರೆಗಳನ್ನು ಸಮಾಜಕ್ಕೆ ನೀಡುತ್ತಿವೆ ಎಂದರು.

ಶ್ರೀಮಠದಲ್ಲಿ 35 ವರ್ಷಗಳಿಂದ ನಿರಂತರವಾಗಿ ವಿವಾಹ ಕಾರ್ಯಕ್ರಮ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ. ವ್ಯಕ್ತಿಯ ವರ್ತನೆ, ಅಂತರಂಗದ ಆಲೋಚನೆಗಳು ಇತರರಿಗೆ ನೋವಾಗದಂತಿರಬೇಕು. ಮಾನವ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಬೇಕು. ವಚನ ಸಾಹಿತ್ಯ ಇಂದಿಗೂ ಸಹ ನಮ್ಮನ್ನು ಬೆಳಕಿನೆಡೆಗೆ, ಉತ್ತಮ ಬದುಕಿನ ಕಡೆಗೆ ಕರೆದುಕೊಂಡು ಹೋಗುತ್ತಿದೆ ಎಂದರು. ಡಾ.ಬಸವಪ್ರಭು ಸ್ವಾಮಿಗಳು ಮಾತನಾಡಿ, ಸಂಸಾರ ಎನ್ನುವುದು ಸಾಗರ ಇದ್ದ ಹಾಗೆ. ಸಂಸಾರದಲ್ಲಿ ಪ್ರೀತಿ, ನಂಬಿಕೆ, ವಿಶ್ವಾಸ ಇರಬೇಕು ಎಂದರು.

ಶ್ರೀ ಬಸವನಾಗಿದೇವ ಸ್ವಾಮಿಗಳು ಮಾತನಾಡಿ, ಬಸವಣ್ಣನವರು ಮಹಾಮನೆಯಲ್ಲಿ ಎಲ್ಲರನ್ನು ನಮ್ಮವರು ಎಂದು ಭಾವಿಸುತ್ತಿದ್ದರು. ಇಂತಹ ಸಾಮೂಹಿಕ ಮಹೋತ್ಸವವು ಕೂಡ ಅದಕ್ಕೆ ಉದಾಹರಣೆಯಾಗುತ್ತದೆ. ಬದುಕಿನಲ್ಲಿ ಸಹೋದರತೆ, ಸಮಾನತೆಯಿಂದ ವರ್ತಿಸಬೇಕು. ಯಾವುದೇ ಕಾಯಕ ಕೀಳಲ್ಲ. ಈ ದೇಹ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಯಿಂದ ಕೂಡಿರಬೇಕು. ಅಂತರಂಗವನ್ನು ಒಲಿಸಿಕೊಳ್ಳಬೇಕು. ಅರಿವನ್ನು ಆಚರಣೆಗೆ ತರಬೇಕು ಎಂದರು. ಕಲ್ಯಾಣ ಮಹೋತ್ಸವದಲ್ಲಿ ಮಧುರಂಜನ್ (ಶೆಟ್ಟಿ ಬಣಜಿಗ)- ಮೇಘ ಎಸ್.(ಆದಿಕರ್ನಾಟಕ), ಎಂ.ಪುನೀತ (ನಾಯರ್)- ಸಿಂಚನ (ಆದಿಕರ್ನಾಟಕ) ಎರಡು ಜೊತೆ ಅಂತರ್ಜಾತಿ ಹಾಗೂ ಆಂಧ್ರಪ್ರದೇಶದ ಒಂದು ಜೋಡಿ ಸೇರಿದಂತೆ ಒಟ್ಟು 14 ಜೋಡಿಗಳ ವಿವಾಹ ನೆರವೇರಿಸಲಾಯಿತು. ಜಮುರಾ ಕಲಾವಿದ ಉಮೇಶ್ ಪತ್ತಾರ್ ಪ್ರಾರ್ಥನೆ ಮಾಡಿದರು. ವಿಜಯದೇವರು ಸ್ವಾಗತಿಸಿದರು. ಟಿ.ಪಿ. ಜ್ಞಾನಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ
ನಾಳೆ ಸಿದ್ದರಾಮಯ್ಯ ಬಜೆಟ್‌ : ವಲಯವಾರು ನಿರೀಕ್ಷೆಗಳೇನು?