ಭಾರತವನ್ನು ದುರ್ಬಲಗೊಳಿಸಲು ಡ್ರಗ್‌ ಅಸ್ತ್ರ ಬಳಕೆ

KannadaprabhaNewsNetwork |  
Published : Jan 10, 2026, 01:30 AM IST
9ಕೆಡಿವಿಜಿ3, 4, 5-ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಶುಕ್ರವಾರ ಹಿಂದೂ ಜಾಗರಣ ವೇದಿಕೆ, ಪರಿವರ್ತನಾ ಟ್ರಸ್ಟ್ ಮೈಸೂರಿನಿಂದ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಡ್ರಗ್ಸ್ ಮುಕ್ತ ಜನಜಾಗೃತಿ ಅಭಿಯಾನ ಸ್ವಾಗತಿಸಿ ಮಾತನಾಡಿದ ಮಾಜಿ ಮೇಯರ್ ಎಸ್.ಟಿ.ವೀರೇಶ. | Kannada Prabha

ಸಾರಾಂಶ

ವಿಶ್ವದ ಪ್ರಬಲ ಶಕ್ತಿಯಾಗಲು ಮುನ್ನುಗ್ಗುತ್ತಿರುವ ಭಾರತವನ್ನು ಮಾದಕ ವಸ್ತುಗಳ ಮೂಲಕ ದುರ್ಬಲಗೊಳಿಸಲು ಶತ್ರುರಾಷ್ಟ್ರಗಳು ನಿರಂತರ ಪ್ರಯತ್ನಿಸುತ್ತಿವೆ. ದೇಶದ ಭವಿಷ್ಯ ಮತ್ತು ಶಕ್ತಿಯಾಗಿರುವ ವಿದ್ಯಾರ್ಥಿ, ಯುವಜನತೆ ಸೇರಿದಂತೆ ಪ್ರತಿಯೊಬ್ಬರೂ ಮಾದಕ ವಸ್ತುಗಳ ಬಗ್ಗೆ ಜಾಗೃತರಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ, ಮಾಜಿ ಮೇಯರ್ ಎಸ್.ಟಿ.ವೀರೇಶ ಮನವಿ ಮಾಡಿದ್ದಾರೆ.

- ಯುವಜನರ ಮೇಲೆ ದುಷ್ಟರ ಕಣ್ಣು: ಮಾಜಿ ಮೇಯರ್ ವೀರೇಶ ಆಕ್ರೋಶ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿಶ್ವದ ಪ್ರಬಲ ಶಕ್ತಿಯಾಗಲು ಮುನ್ನುಗ್ಗುತ್ತಿರುವ ಭಾರತವನ್ನು ಮಾದಕ ವಸ್ತುಗಳ ಮೂಲಕ ದುರ್ಬಲಗೊಳಿಸಲು ಶತ್ರುರಾಷ್ಟ್ರಗಳು ನಿರಂತರ ಪ್ರಯತ್ನಿಸುತ್ತಿವೆ. ದೇಶದ ಭವಿಷ್ಯ ಮತ್ತು ಶಕ್ತಿಯಾಗಿರುವ ವಿದ್ಯಾರ್ಥಿ, ಯುವಜನತೆ ಸೇರಿದಂತೆ ಪ್ರತಿಯೊಬ್ಬರೂ ಮಾದಕ ವಸ್ತುಗಳ ಬಗ್ಗೆ ಜಾಗೃತರಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ಮುಖಂಡ, ಮಾಜಿ ಮೇಯರ್ ಎಸ್.ಟಿ.ವೀರೇಶ ಮನವಿ ಮಾಡಿದರು.

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಶುಕ್ರವಾರ ಹಿಂದೂ ಜಾಗರಣ ವೇದಿಕೆ ಮತ್ತು ಪರಿವರ್ತನಾ ಟ್ರಸ್ಟ್ ಮೈಸೂರಿನಿಂದ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಡ್ರಗ್ಸ್ ಮುಕ್ತ ಜನಜಾಗೃತಿ ಅಭಿಯಾನ ಸ್ವಾಗತಿಸಿ ಅವರು ಮಾತನಾಡಿದರು. ಭಾರತದ ಯುವಶಕ್ತಿಯನ್ನು ಹಾಳುಗೆಡವಲು ಪಾಕಿಸ್ತಾನ, ಚೀನಾ, ಬಾಂಗ್ಲಾದಂಥ ಶತ್ರುರಾಷ್ಟ್ರಗಳು ಮಾದಕ ವಸ್ತುಗಳನ್ನೇ ತಮ್ಮ ಅಸ್ತ್ರವಾಗಿ ಬಳಸುತ್ತಿವೆ ಎಂದರು.

ದಾವಣಗೆರೆಯಲ್ಲೂ ಡ್ರಗ್ಸ್ ಜಾಲ ಪತ್ತೆಯಾಗಿದೆ. ಇನ್ನೂ ಸಾಕಷ್ಟು ಜನರ ಪಟ್ಟಿ ಸಿದ್ಧಪಡಿಸಿಕೊಂಡು ಪೊಲೀಸರು ಅಂತಹವರ ಮೇಲೆ ಕಣ್ಣಿಟ್ಟಿದ್ದಾರೆ. ಅಲ್ಲದೇ, ಗಾಂಜಾ, ಮಾದಕ ವಸ್ತುಗಳ ಮಾರಾಟ, ಸಾಗಾಟ, ಬಳಕೆ ಮಾಡುವವರು ನಿಮ್ಮ ಗಮನಕ್ಕೆ ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವ ಕೆಲಸ ಆಗಬೇಕಾಗಿದೆ ಎಂದು ತಿಳಿಸಿದರು.

ಡ್ರಗ್ಸ್ ವಿರುದ್ಧ ಪ್ರತಿಯೊಬ್ಬರೂ ಜಾಗೃತರಾಗಿ ಹೋರಾಡಬೇಕಾಗಿದೆ. ಡ್ರಗ್ಸ್ ದಂಧೆಗೆ ಶಾಲಾ-ಕಾಲೇಜು-ಹಾಸ್ಟೆಲ್ ವಿದ್ಯಾರ್ಥಿಗಳೇ ಟಾರ್ಗೆಟ್ ಆಗಿರುತ್ತವೆ. ಹಾಗಾಗಿ, ಡ್ರಗ್ಸ್ ಮುಕ್ತ ಜನಜಾಗೃತಿ ಅಭಿಯಾನದಡಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ದಾವಣಗೆರೆ ಜಿಲ್ಲಾ ಕೇಂದ್ರದ 6 ವಿವಿಧ ಕಾಲೇಜುಗಳಿಗೆ ಅಭಿಯಾನ ಭೇಟಿ ನೀಡಲಿದೆ. ಡ್ರಗ್ಸ್ ಮತ್ತದರ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿ, ಯುವಜನರು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು. ಪ್ರತಿಯೊಬ್ಬರೂ ಜಾಗೃತರಾಗಿ, ನಾಗರೀಕರೂ ಅಭಿಯಾನಕ್ಕೆ ಕೈ ಜೋಡಿಸಬೇಕು ಎಂದು ವೀರೇಶ ಮನವಿ ಮಾಡಿದರು.

ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಿ.ಎಸ್.ಹೇಮಂತ್‌, ಆಡಳಿತ ಮಂಡಳಿಯ ಡಾ. ಡಿ.ಎಸ್. ಜಯಂತ್‌, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ದೇವರಮನಿ ಗಿರೀಶ, ಯುವ ಭಾರತ್ ಬ್ರಿಗೇಡ್‌ನ ನಾಗರಾಜ ಸುರ್ವೆ, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಶ್ರೀಕಾಂತ, ಕರುನಾಡ ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಸುರೇಶ ಐಗೂರು, ಎಸ್.ವೀರೇಶ ಇತರರು ಇದ್ದರು.

ಅಭಿಯಾನದ ರಥಯಾತ್ರೆಯನ್ನು ಹಿಂದು ಜಾಗರಣ ವೇದಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸ್ವಾಗತಿಸಿದರು. ಅನಂತರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಮೂಲಕ ಹೊನ್ನಾಳಿ, ಹರಿಹರ ಮಾರ್ಗವಾಗಿ ದಾವಣಗೆರೆಗೆ ಅಭಿಯಾನ ಆಗಮಿಸಿತು.

- - -

(ಬಾಕ್ಸ್‌) * ನಮ್ಮ ಭವಿಷ್ಯ ಸುರಕ್ಷಿತವಾಗಿ ಇರಬೇಕು: ಸತೀಶ ಪೂಜಾರಿ ಹಿಂ.ಜಾ.ವೇ. ದಕ್ಷಿಣ ಪ್ರಾಂತ್ಯ ಸಂಚಾಲಕ ಸತೀಶ ಪೂಜಾರಿ ಮಾತನಾಡಿ, ಮೈಸೂರಿನಿಂದ ಡಿ.9ರಂದು ಅಭಿಯಾನ ಆರಂಭವಾಗಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಸಂಚರಿಸಿ, ಇದೀಗ ದಾವಣಗೆರೆ ಬಂದಿದೆ. ಬೆಂಗಳೂರಿನಲ್ಲಿ ಅಭಿಯಾನವು ಮುಕ್ತಾಯವಾಗಲಿದೆ. ದೇಶ ರಕ್ಷಣೆ, ಸ್ವಸ್ಥ ಸಮಾಜ ನಿರ್ಮಾಣ ಅಭಿಯಾನದ ಗುರಿಯಾಗಿದೆ. ಭಾರತದ ಭವಿಷ್ಯವನ್ನು ಕೊಲ್ಲುವ ಮಾದಕ ವಸ್ತುಗಳ ಬಳಕೆ, ಸಾಗಾಟ, ಮಾರಾಟದ ವಿರುದ್ಧ ಅರಿವು ಮೂಡಿಸುವ ಕೆಲಸ ಇದಾಗಿದೆ. ಗಾಂಜಾ, ಮಾದಕ ವಸ್ತು ಮಾರಾಟ, ಸಾಗಾಟ, ಬಳಕೆ ವಿರುದ್ಧ ಜಾಗೃತಿ ಮೂಡಿಸುವ ಜೊತೆಗೆ ನಮ್ಮ ಭವಿಷ್ಯವನ್ನೂ ಸುರಕ್ಷಿತವಾಗಿ ಇಟ್ಟುಕೊಳ್ಳೋಣ ಎಂಬುದಾಗಿ ಅರಿವು ಮೂಡಿಸಲಾಗುತ್ತಿದೆ ಎಂದರು. ಡ್ರಗ್ಸ್ ದಂಧೆಯನ್ನು ಬೇರು ಮಟ್ಟದಿಂದ ನಿರ್ಮೂಲನೆಗೊಳಿಸಲು ಕೇಂದ್ರ ಸರ್ಕಾರ ಅತ್ಯಂತ ಕಠಿಣ ಕಾನೂನು ಜಾರಿಗೊಳಿಸಬೇಕು. ಮಾದಕ ವಸ್ತುಗಳ ಮಾರಾಟ ಮಾಡುವವರು, ಕಳ್ಳ ಸಾಗಾಣಿಕೆ ಮಾಡುವವರಿಗೆ ಕನಿಷ್ಠ 5 ವರ್ಷ ಅತ್ಯಂತ ಕಠಿಣ ಜೈಲುಶಿಕ್ಷೆ, ₹10-₹15 ಲಕ್ಷ ದಂಡ ವಿಧಿಸುವುದೂ ಸೇರಿದಂತೆ ಅಗತ್ಯ ಕಾನೂನುಗಳನ್ನು ಜಾರಿಗೆ ತರಬೇಕು. ಸಂಬಂಧಿಸಿದ ಇಲಾಖೆ ಜೊತೆಗೆ ಸಾರ್ವಜನಿಕರೂ ಮಾದಕ ವಸ್ತುಗಳ ವಿರುದ್ಧ ಹೋರಾಟ ನಡೆಸಲು ಮುಂದಾಗಬೇಕು ಎಂದು ಸತೀಶ ಪೂಜಾರಿ ಕರೆ ನೀಡಿದರು.

- - -

-9ಕೆಡಿವಿಜಿ3, 4, 5:

ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಶುಕ್ರವಾರ ಹಿಂದೂ ಜಾಗರಣ ವೇದಿಕೆ, ಪರಿವರ್ತನಾ ಟ್ರಸ್ಟ್ ಮೈಸೂರಿನಿಂದ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಡ್ರಗ್ಸ್ ಮುಕ್ತ ಜನಜಾಗೃತಿ ಅಭಿಯಾನವನ್ನು ಮಾಜಿ ಮೇಯರ್ ಎಸ್.ಟಿ.ವೀರೇಶ ನೇತೃತ್ವದಲ್ಲಿ ಸ್ವಾಗತಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ