ಹಳ್ಳಿಗಳಿಗೂ ವ್ಯಾಪಿಸಿದ ಮೀಟರ್‌ ಬಡ್ಡಿ ದಂಧೆ!

KannadaprabhaNewsNetwork |  
Published : Aug 27, 2024, 01:31 AM IST
5646 | Kannada Prabha

ಸಾರಾಂಶ

ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು ಬಡ್ಡಿ ಮಾಫಿಯಾ ಇದೀಗ ಹಳ್ಳಿಗಳಲ್ಲೂ ಅವ್ಯಾಹತವಾಗಿದೆ ಶುರುವಾಗಿದೆ. ಬಡ್ಡಿ ಕುಳಗಳಿಂದ ಸಾಲ ಪಡೆದ ಬಡವರು ಸಾಲ ಮರುಪಾವತಿಸಲು ಸಾಧ್ಯವಾಗಿದೆ ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ

ಬಡ್ಡಿ ಮಾಫಿಯಾ ಬರೀ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಗಷ್ಟೇ ಅಲ್ಲ. ಧಾರವಾಡ ಜಿಲ್ಲೆಯ ಹಳ್ಳಿಗಳಿಗೂ ವ್ಯಾಪಿಸಿದ್ದು, ಅಕ್ಷರಶಃ ಹಳ್ಳಿಗರ ರಕ್ತ ಸುಲಿಯುತ್ತಿದೆ. ಎಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಎಷ್ಟೋ ಜನ ಈ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಡ್ಡಿ ಮಾಫಿಯಾ ಅಂದರೆ ಹಾಗೆ. ಅಡಚಣೆಯಿದೆ ಎಂದು ಖಾಸಗಿ ಬಡ್ಡಿ ಮಾಫಿಯಾ ಬಳಿ ಸಾಲ ಪಡೆದರೆ ಮುಗಿಯಿತು. ಅದರ ಬಲೆಯಿಂದ ಹೊರಗೆ ಬರಲು ಸಾಧ್ಯವೇ ಆಗುವುದಿಲ್ಲ. ಕೊನೆಗೆ ತಮ್ಮ ಆಸ್ತಿ ಮಾರಾಟ ಮಾಡಬೇಕು. ಊರು ಬಿಟ್ಟು ಹೋಗಬೇಕು. ಇಲ್ಲವೇ ಆತ್ಮಹತ್ಯೆಗೆ ಶರಣಾಗಬೇಕು. ಅಂತಹ ಪರಿಸ್ಥಿತಿಯನ್ನು ಹಳ್ಳಿಗಳಲ್ಲಿ ಈ ಬಡ್ಡಿ ಮಾಫಿಯಾಗಳು ತಂದು ಇಟ್ಟಿದ್ದಾರೆ.

ಹೇಗಿದೆ ಬಡ್ಡಿ?

ಹಾಗೆ ನೋಡಿದರೆ ಫೈನಾನ್ಸ್‌ ಮಾಡಲು ಶೇ.3ರ ವರೆಗೆ ಬಡ್ಡಿ ಆಕರಿಸಬಹುದು. ಆದರೆ ಇವರು ಮಾತ್ರ ಶೇ.5, 6, 8, 10 ಹೀಗೆ ದರ ನಿಗದಿ ಮಾಡುತ್ತಾರೆ. ಸಾಲ ಪಡೆದರೆ ಅನಧಿಕೃತ ಒಪ್ಪಂದ ಪತ್ರಕ್ಕೂ ಸಹಿ ಹಾಕಬೇಕು. ಜತೆಗೆ ತಮ್ಮ ಖಾತೆಯ ಚೆಕ್‌ ನೀಡಬೇಕು. ಸಾಲದ ಸಮಯವನ್ನು ಇಂತಿಷ್ಟೇ ತಿಂಗಳು ಎಂದು ನಿಗದಿಪಡಿಸುತ್ತಾರೆ. ಬಡ್ಡಿಯಂತೂ ಪಾವತಿಸುತ್ತಲೇ ಇರಬೇಕು. ಒಂದು ವೇಳೆ ಒಂದೆರಡು ತಿಂಗಳು ಬಡ್ಡಿ ತುಂಬುವುದು ತಪ್ಪಿದರೆ ಮುಗೀತು. ಬಡ್ಡಿದರ ಏರಿಸುತ್ತಾರೆ. ಚಕ್ರಬಡ್ಡಿಯನ್ನೂ ಹಾಕುತ್ತಾರೆ. ಮನೆಗೆ ಬಂದು ಮಾನ ಹರಾಜು ಕೂಡ ಹಾಕುತ್ತಾರೆ.

ಒಂದು ವೇಳೆ ಬಡ್ಡಿ ತುಂಬುವುದು ಕಷ್ಟವಾದರೆ ಇವರಿಗೆ ಜಾಮೀನು ನೀಡಿದವರ ಬಳಿ ಇದ್ದ ಟ್ರ್ಯಾಕ್ಟರ್‌, ಬೈಕ್‌ ಹೀಗೆ ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗುತ್ತಾರೆ. ಆಗ ಸಾಲ ಕೊಡಿಸಿದವ ಹಾಗೂ ಸಾಲ ತೆಗೆದುಕೊಂಡವನ ಮಧ್ಯೆ ಜಗಳ ನಡೆಯುತ್ತದೆ. ಕೆಲವೊಮ್ಮೆ ವಿಕೋಪಕ್ಕೆ ತಿರುಗಿ ಹೊಡೆದಾಟಗಳು ನಡೆಯುತ್ತವೆ. ಇನ್ನು ಸಾಲ ತೆಗೆದುಕೊಂಡವನಿಗೆ ಪಾವತಿಸಲು ಸಾಧ್ಯವಾಗದಿದ್ದರೆ ನಿನ್ನ, ನಿನ್ನ ಕುಟುಂಬವನ್ನು ಇಂಥಲ್ಲಿ ಜೀತಕ್ಕೆ ಇಡುತ್ತೇನೆ ಬನ್ನಿ. ಜೀತಕ್ಕಿಟ್ಟು ಸಾಲ ಸರಿದೂಗಿಸುತ್ತೇನೆ ಎಂದು ಹೆದರಿಕೆ ಹಾಕುತ್ತಾರೆ. ಇದೆಲ್ಲ ಕಿರಿಕಿರಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಸಾಕಷ್ಟು ನಡೆದಿವೆ.

ಇದು ಬರೀ ಒಂದು ಊರಲ್ಲಿ ನಡೆಯುತ್ತಿದೆ ಎಂದೇನಿಲ್ಲ. ಪ್ರತಿ ಹಳ್ಳಿಗಳಲ್ಲೂ ಈ ರೀತಿ ಅನಧಿಕೃತ ಬಡ್ಡಿ ಕುಳಗಳು ಕಾಣ ಸಿಗುತ್ತಾರೆ. ಇವರು ರಾಜಕೀಯ ಪಕ್ಷ, ವಿವಿಧ ಮುಖಂಡರ ಹಿಂಬಾಲಕರಾಗಿ ಗುರುತಿಸಿಕೊಳ್ಳುತ್ತಾರೆ. ತಮ್ಮ ಕರಾಳ ದಂಧೆಗೆ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದಲೇ ಈ ರೀತಿ ಮಾಡುತ್ತಾರೆ. ಜತೆಗೆ ಊರಲ್ಲಿ ಮರಿ ಪುಡಾರಿಗಳಾಗಿ ಕಾಣಿಸಿಕೊಳ್ಳುತ್ತಾರೆ.

ಪೊಲೀಸರಿಗೂ ಮಾಮೂಲಿ:

ಇವರ ವಿರುದ್ಧ ಯಾರಾದರೂ ದೂರು ಕೊಡಲು ಬಂದರೆ ದೂರು ಕೂಡ ದಾಖಲಾಗುವುದಿಲ್ಲ. ಏಕೆಂದರೆ ಪೊಲೀಸರಿಗೂ ಇವರಿಗೆ ಹೊಂದಾಣಿಕೆ ಇರುತ್ತದೆ ಎಂಬ ಮಾತು ಹಳ್ಳಿಗಳಲ್ಲಿ ಕೇಳಿ ಬರುತ್ತದೆ. ಖಾಸಗಿ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ ಎಂದೆಲ್ಲ ಸರ್ಕಾರದ ಘೋಷಣೆಗಳೆಲ್ಲ ಬರೀ ಘೋಷಣೆಗಳೇ ಆಗುತ್ತಿವೆಯೇ ಹೊರತು ಕ್ರಮ ಮಾತ್ರ ಆಗುತ್ತಲೇ ಇಲ್ಲ. ಈಗಲೂ ಈ ಬಡ್ಡಿ ಕುಳ ಬಲೆಗೆ ಸಿಲುಕಿರುವ ಎಷ್ಟೋ ಕುಟುಂಬಗಳು ನರಳುತ್ತಲೇ ಇರುತ್ತವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷ: ದೇವಾಲಯಗಳಿಗೆ ಭಕ್ತರ ದಾಂಗುಡಿ
ಜಿ ರಾಮ್‌ ಜಿ, ಅನುದಾನ ಕಡಿತ ವಿರುದ್ಧ ಇಂದು ರಾಜ್ಯ ಸಂಪುಟದಲ್ಲಿ ನಿರ್ಣಯ?