ಮಂಗಳೂರು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಅವಿರತ ಸೇವೆಯಿಂದ ಸರಕಾರದ ಯೋಜನೆಗಳು ಜನರಿಗೆ ತಲುಪುತ್ತಿದೆ. ನಿಮ್ಮ ಕೆಲಸವನ್ನು ಅಭಿನಂದಿಸುತ್ತೇನೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಸ್ವಸ್ಥ ಸಮಾಜ, ಬಲಿಷ್ಠ ದೇಶ ಕಟ್ಟುವಲ್ಲಿ ಅಂಗವಾಡಿಗಳು ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಇಂದು ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳು ಕಾಣದೇ ಇರಲು ಅಂಗನವಾಡಿ ಸಿಬ್ಬಂದಿಗಳು ಕಾರಣ. ಆರೋಗ್ಯವಂತ ತಾಯಿ, ಮಗು ನಿಮ್ಮ ಗುರಿಯಾಗಿದ್ದು, ಅಂಗನವಾಡಿಯವರು ಊರಿನ ಮನೆಗಳ ಸಹೋದರಿಯರಂತೆ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಸೇವೆಯಿಂದ ಕ್ರಾಂತಿಕಾರಿ ಬದಲಾವಣೆ ಆಗಿದೆ. ನೀವು ನಿರ್ವಹಿಸುವ ಕೆಲಸವನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳಿ ಎಂದರು.
ಸಚಿವರ ನೇತೃತ್ವದಲ್ಲಿ ಕಾರ್ಯಕ್ರಮಇಂದಿನ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಬರಬೇಕಿತ್ತು. ಅನಿವಾರ್ಯ ಕಾರಣದಿಂದ ಅವರು ಬಂದಿಲ್ಲ. ಅಂಗನವಾಡಿ ಸಿಬ್ಬಂದಿಗಳ ಸಮಸ್ಯೆಗಳನ್ನು ಕೂತು ಚರ್ಚಿಸುವ ಬಗ್ಗೆ ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ನಿಮ್ಮನ್ನೆಲ್ಲ ಸೇರಿಸಿಕೊಂಡು ಅದ್ಧೂರಿ ಕಾರ್ಯಕ್ರಮ ಆಯೋಜಿಸುವ ಬಗ್ಗೆಯೂ ನನ್ನಲ್ಲಿ ತಿಳಿಸಿದ್ದಾರೆ ಎಂದು ಖಾದರ್ ಪ್ರಸ್ತಾಪಿಸಿದರು.
ಅಂಗನವಾಡಿ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವಂತೆ, 2023ರ ಮೊದಲು ನಿವೃತ್ತಿಯಾದ ಕಾರ್ಯಕರ್ತೆ ಮತ್ತು ಸಹಾಯಕಿರಿಗೆ ಗ್ರಾಚುಟಿ ಒದಗಿಸುವಂತೆ ಸಂಘದ ವತಿಯಿಂದ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಯಿತು. ನಿಮ್ಮೆಲ್ಲ ಬೇಡಿಕೆಗಳಿಗ ನನ್ನ ಸಹಕಾರ ಇದೆ ಎಂದು ಯು,ಟಿ,ಖಾದರ್ ತಿಳಿಸಿದರು.