ತಂತ್ರಜ್ಞಾನ ಸದುಪಯೋಗಪಡಿಸಿ: ಡಾ. ಮಂತರ್ ಗೌಡ ಕಿವಿಮಾತು

KannadaprabhaNewsNetwork |  
Published : Jan 15, 2024, 01:45 AM IST
ಮಡಿಕೇರಿ ಸರ್ಕಾರಿ ಪಿಯು ಕಾಲೇಜಿಗೆ ಇನ್ಫೋಸಿಸ್, ವೀರಲೋಕ ಪ್ರತಿಷ್ಠಾನದಿಂದ ಕಂಪ್ಯೂಟರ್ ಕೊಡುಗೆ | Kannada Prabha

ಸಾರಾಂಶ

ಮಡಿಕೇರಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಇನ್ಫೋಸಿಸ್ ಹಾಗೂ ವೀರಲೋಕ ಪ್ರತಿಷ್ಠಾನದ ಮೂಲಕ ಉನ್ನತೀಕರಣಗೊಂಡಿರುವ ಕಂಪ್ಯೂಟರ್ ಪ್ರಯೋಗಾಲಯ ಕೊಠಡಿ ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ ಮಡಿಕೇರಿಆಧುನಿಕ ತಂತ್ರಜ್ಞಾನದಿಂದ ಒಳಿತು, ಕೆಡುಕು ಎರಡೂ ಇರುತ್ತದೆ. ಹಾಗಾಗಿ ಮೊಬೈಲ್, ಕಂಪ್ಯೂಟರ್‌ಗಳನ್ನು ಒಳ್ಳೆಯ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಮಡಿಕೇರಿ ಶಾಸಕ ಮಂತರ್ ಗೌಡ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಡಿಕೇರಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಇನ್ಫೋಸಿಸ್ ಹಾಗೂ ವೀರಲೋಕ ಪ್ರತಿಷ್ಠಾನದ ಮೂಲಕ ಉನ್ನತೀಕರಣಗೊಂಡಿರುವ ಕಂಪ್ಯೂಟರ್ ಪ್ರಯೋಗಾಲಯ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ತಾಂತ್ರಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಕಾಲೇಜಿನಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅಷ್ಟೂ ವಿದ್ಯಾರ್ಥಿಗಳಿಗಾಗಿ ಕೇವಲ 9 ಕಂಪ್ಯೂಟರ್ ಮಾತ್ರ ಇತ್ತು. ಇದರಿಂದಾಗಿ ಮಕ್ಕಳ ಕಲಿಕೆಗೂ ಸಮಸ್ಯೆಯಾಗ್ತಿತ್ತು. ಇದನ್ನು ಗಮನಿಸಿದ ಕಾಲೇಜಿನ ಪ್ರಾಂಶುಪಾಲ ಪಿ.ಆರ್ ವಿಜಯ್ ಅವರು ಕೊಡಗು ಜಾನಪದ ಪರಿಷತ್ ಮಡಿಕೇರಿಯಲ್ಲಿ ವೀರಲೋಕ ಪ್ರಕಾಶನದ ಮೂಲಕ ಕಥಾ ಕಮ್ಮಟ ಹಮ್ಮಿಕೊಂಡಿದ್ದ ವೇಳೆ ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಗಮನಕ್ಕೆ ತಂದು ಕಂಪ್ಯೂಟರ್‌ಗಳ ಬೇಡಿಕೆ ಇರಿಸಿದ್ದರು. ಅನಂತಶಯನ ಅವರ ಪರಿಶ್ರಮದಿಂದ ಇನ್ಫೋಸಿಸ್ ಹಾಗೂ ವೀರಲೋಕ ಪ್ರತಿಷ್ಠಾನದ ಮೂಲಕ ಇದೀಗ ಕಾಲೇಜಿಗೆ 15 ಕಂಪ್ಯೂಟರ್‌ಗಳನ್ನು ನೀಡಲಾಗಿದ್ದು, ಕಂಪ್ಯುಟರ್ ಪ್ರಯೋಗಾಲಯವನ್ನು ಉನ್ನತೀಕರಣಗೊಳಿಸಲಾಗಿದೆ.ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಿ ಮಾತನಾಡಿದ ಇನ್ಫೋಸಿಸ್ ಸಂಸ್ಥೆಯ ಮಿತ್ರ, ಸಮರ್ಪಣ ಟ್ರಸ್ಟಿನ ಮುಖ್ಯಸ್ಥ ಸಾಗರ್ ಸಾಬೋಜಿ, ಕಾಲೇಜಿಗೆ ಇನ್ನೂ ಅವಶ್ಯವಿರುವ ಪ್ರಾಜೆಕ್ಟರ್, ಸ್ಕ್ರೀನ್ ಇತ್ಯಾದಿ ಸಲಕರಣೆಗಳನ್ನು ಒದಗಿಸುವ ಭರವಸೆ ನೀಡಿದರು.ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಕಾಲೇಜಿನ ಪ್ರಾಂಶುಪಾಲರ ಆಸಕ್ತಿ, ಶ್ರೀನಿವಾಸ್ ಅವರ ಯತ್ನ, ಇನ್ಫೋಸಿಸ್ ಸಹಕಾರದಿಂದ ಬಂದಿರುವ ಕಂಪ್ಯೂಟರ್‌ಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಬೇಕು ಎಂದರು.ಬೆಂಗಳೂರಿನಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಆಗಿರುವ ಎಲ್.ವೈ.ರಾಜೇಶ್ ಮಾತನಾಡಿ, ಇಂಟರ್‌ನೆಟ್‌ನ ಅವೈಜ್ಞಾನಿಕ ಬಳಕೆಯಿಂದಾಗುವ ಅಪಾಯಗಳ ಕುರಿತು ಮಾಹಿತಿ ನೀಡಿದರು.ವೀರಲೋಕ ಪ್ರತಿಷ್ಠಾನದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಬಡತನದಿಂದ ಬಂದು, ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಓದಿದವರು ಮುಂದೆ ಸಮಾಜಕ್ಕೆ ಮಾದರಿಯಾದವರ ಕುರಿತು ವಿವರಿಸಿ, ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮತ್ತು ಛಲ ಇರಬೇಕೆಂದರು.ಪ್ರಾಂಶುಪಾಲ ಪಿ.ಆರ್. ವಿಜಯ್ ಮಾತನಾಡಿ, ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 15 ಕಂಪ್ಯೂಟರ್‌ಗಳನ್ನು ಇನ್ಫೋಸಿಸ್ ಸಂಸ್ಥೆ ಮೂಲಕ ನೀಡಿರುವುದು ನಿಜಕ್ಕೂ ಇಲ್ಲಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯವಾಗಲಿದೆ ಎಂದರು.ಉದ್ಯಮಿ ಚೇತನ್ ಪಟೇಲ್ ಹಾಗೂ ಹಾಸನ ಆಹಾರ ಸುರಕ್ಷತಾ ಸಮಿತಿಯ ಕೆ. ವಿನಯ್, ಉಪನ್ಯಾಸಕರಾದ ಚಿದಾನಂದ, ಕೆ.ಬಿ.ಗೌರಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ