-ಶಿಕ್ಷಕರ ಕಾಳಜಿಗೆ ಪೋಷಕರಿಂದ ಭಾರೀ ಮೆಚ್ಚುಗೆ
ಸ್ಥಳೀಯ ರಾಷ್ಟ್ರೀಯ ಮಾಧ್ಯಮಿಕ (ಆರ್.ಎಂ.ಎಸ್.ಎ.) ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕೆ ಮಟ್ಟ ಸುಧಾರಿಸುವ ಹಾಗೂ ಶೇ. ನೂರು ಫಲಿತಾಂಶ ಸಾಧಿಸುವ ಗುರಿ ಹೊಂದಿರುವ ಶಿಕ್ಷಕರು ದಸರಾ ರಜಾ ದಿನಗಳನ್ನು ಬಳಸಿಕೊಂಡು ವಿಶೇಷ ತರಗತಿಗಳ ನಡೆಸುವ ಮೂಲಕ ಪೋಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಖಾಸಗಿ ಶಾಲೆಗಳ ಮಾದರಿಯಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನ ಹೊಂದಿರುವ ರಾಷ್ಟ್ರೀಯ ಮಾಧ್ಯಮಿಕ ಪ್ರೌಢ ಶಾಲೆಯು ಕಳೆದ 2026ನೇ ಸಾಲಿನ ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಗಳಿಸಿದೆ. ಈ ಸಾಧನೆಯ ಹಿಂದೆ ಶಿಕ್ಷಕರ ಅವಿರತ ಪರಿಶ್ರಮವಿದೆ. ದಸರಾ ರಜೆ ಸೇರಿದಂತೆ ಬೇಸಿಗೆ ರಜೆ ದಿನಗಳಲ್ಲಿ 10ನೇ ತೆರಗತಿ ವಿದ್ಯಾರ್ಥಿಗಳಿಗೆ ವಸತಿ ಸಹಿತ ವಿಶೇಷ ತರಗತಿಗಳನ್ನ ನಡೆಸಿದ್ದು, ಪ್ರತಿಫಲ ನೀಡಿದೆ. ಅದೇ ರೀತಿ ಪ್ರಸಕ್ತ ವರ್ಷವು ಕೂಡಾ 10ನೇ ತರಗತಿಯ ವಿದ್ಯಾರ್ಥಿಗಳಿಗೆ ದಸರಾ ರಜೆಯನ್ನು ಬಳಸಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೆ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿ 15 ದಿನಗಳ ತರಗತಿ ನಡೆಸಿದ್ದಾರೆ. ಇದರಿಂದ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆ ಜೊತೆಗೆ ಪರೀಕ್ಷೆ ಸಿದ್ದತೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಪಠ್ಯಪುಸ್ತಕದಲ್ಲಿನ ಪಾಠವನ್ನ ಪುನರಾವರ್ತಿಸಿ ಅಭ್ಯಾಸವನ್ನ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಲಾಗಿದೆ. ಜೊತೆಗೆ ಸ್ಪೋಕನ್ ಇಂಗ್ಲಿಷ ತರಗತಿಗಳನ್ನು ನಡೆಸಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಶರಣು ಪೂಜಾರ ತಿಳಿಸಿದ್ದಾರೆ.ಶಿಕ್ಷಣ ಪ್ರೇಮಿಗಳ ಸಹಕಾರ:
ಬೇಸಿಗೆ ಹಾಗೂ ದಸರಾ ರಜೆಯನ್ನು ನಮ್ಮ ಶಾಲೆಯ ಶಿಕ್ಷಕರು ಪಡೆದುಕೊಳ್ಳದೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತನು, ಮನ, ಧನ ಸಹಾಯದ ಜೊತೆಯಲ್ಲಿ ನಿತ್ಯ ತರಗತಿಯಂತೆ ಪಾಠ ಭೋಧನೆ ಜರಗುತ್ತಿರುವುದರಿಂದ ಶಾಲೆಯ ಕೀರ್ತಿ ಹಾಗೂ ಮಕ್ಕಳಲ್ಲಿ ಪ್ರಗತಿ ಕಂಡಿರುವುದರಿಂದ ಪಾಲಕರಲ್ಲಿ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಎಂದು ಎಸ್‍ಡಿಎಂಸಿ ಅಧ್ಯಕ್ಷ ಮಹಾದೇವಪ್ಪ ಮಾನೇಗಾರ ಹೇಳಿದರು.ವಿದ್ಯಾರ್ಥಿಗಳಿಗೆ 10ನೇ ತರಗತಿ ಅತ್ಯಂತ ಮಹತ್ವದ ಘಟ್ಟವಾಗಿದ್ದು, ಭವಿಷ್ಯ ನಿರ್ಮಾಣಕ್ಕೆ ಅಡಿಪಾಯ ಹಾಕುವುದು ನಮ್ಮ ಕರ್ತವ್ಯವಾಗಿದೆ. ಇದಕ್ಕೆ ಶಾಲಾ ಶಿಕ್ಷಣ ಇಲಾಖೆ ಡಿಡಿಪಿಐ ಹಾಗೂ ಬಿಇಒ, ಎಸ್‍ಡಿಎಂಸಿ, ಶಿಕ್ಷಣ ಪ್ರೇಮಿಗಳು, ಶಿಕ್ಷಕರ ಸಹಕಾರದಿಂದ ಪ್ರತಿ ವರ್ಷ ವಿಶೇಷ ತರಗತಿಗಳು ನಡೆದು ಯಶಸ್ವಿಯಾಗುತ್ತಿದೆ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶರಣು ಪೂಜಾರ ತಿಳಿಸಿದ್ದಾರೆ.ಜಿಲ್ಲಾದ್ಯಂತ 324 ಪ್ರೌಢಶಾಲೆಯಲ್ಲಿ ವಿಶೇಷ ಎಸ್ಸೆಸ್ಸೆಲ್ಸಿ ತರಗತಿ ನೆಡೆದಿದ್ದು, ಪ್ರಮುಖವಾಗಿ ಮುಳಗುಂದ ಸರ್ಕಾರಿ ಶಾಲೆಯಲ್ಲಿ ಉಪಾಹಾರ, ಊಟ ವಸತಿ ಸಹಿತ ತರಗತಿಗಳು ಜರಗುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕೆ ಮತ್ತು ಫಲಿತಾಂಶವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ವಿಶೇಷ ತರಗತಿಗಳನ್ನು ಆಯೋಜಿಸಿದ ಶಾಲಾ ಶಿಕ್ಷಕರಿಗೆ, ಎಸ್‍ಡಿಎಂಸಿ ಹಾಗೂ ಶಿಕ್ಷಣ ಪ್ರೇಮಿಗಳಿಗೆ ಧನ್ಯವಾದಗಳು ಎನ್ನುತ್ತಾರೆ ಗದಗದ ಡಿಡಿಪಿಐ ಆರ್.ಎಸ್. ಬುರಡಿ.