ಕಲಿತ ತರಬೇತಿಯ ಉಪಯೋಗ ಮುಖ್ಯ: ಪಿ.ಎಸ್. ಉಮೇಶ್‌

KannadaprabhaNewsNetwork | Published : Apr 25, 2025 11:48 PM

ಸಾರಾಂಶ

ಸ್ವಯಂ ಉದ್ಯೋಗ ಆರಂಭಿಸುವವರಿಗೆ ಸರ್ಕಾರದಲ್ಲಿ ಹಲವಾರು ಯೋಜನೆಗಳಿವೆ. ಇಲ್ಲಿ ತರಬೇತಿ ಪಡೆದವರು ಯೋಜನೆಯನ್ನು ರೂಪಿಸಿ, ಸರ್ಕಾರದ ಧನಸಹಾಯವನ್ನು ಸಮಪರ್ಕಕವಾಗಿ ಬಳಸಿಕೊಳ್ಳಬೇಕು. ಕಲಿಕೆ ನಿರಂತರ. ಕಲಿತ ತರಬೇತಿಯ ಉಪಯೋಗ ಮುಖ್ಯ.

ಕನ್ನಡಪ್ರಭ ವಾರ್ತೆ ಮೈಸೂರು

ಕಲಿಕೆ ನಿರಂತರ. ಕಲಿತ ತರಬೇತಿಯ ಉಪಯೋಗ ಮುಖ್ಯ ಎಂದು ಕೆನರಾ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಪಿ.ಎಸ್‌. ಉಮೇಶ್‌ ಹೇಳಿದರು.

ಹಿನ್ಕಲ್‌ನ ರುಡ್‌ಸೆಟ್‌ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಿಟಿಪಿ ತರಬೇತಿ ಪಡೆದವರಿಗೆ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ 2024-25ನೇ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಯಾವುದೇ ತರಬೇತಿಯೂ ಜೀವನ ರೂಪಿಸಿಕೊಳ್ಳಲು ಉಪಯೋಗವಾಗಬೇಕು ಎಂದರು.

ಸ್ವಯಂ ಉದ್ಯೋಗ ಆರಂಭಿಸುವವರಿಗೆ ಸರ್ಕಾರದಲ್ಲಿ ಹಲವಾರು ಯೋಜನೆಗಳಿವೆ. ಇಲ್ಲಿ ತರಬೇತಿ ಪಡೆದವರು ಯೋಜನೆಯನ್ನು ರೂಪಿಸಿ, ಸರ್ಕಾರದ ಧನಸಹಾಯವನ್ನು ಸಮಪರ್ಕಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ವಿ.ಎನ್‌. ನಾಗೇಶ್‌ ಮಾತನಾಡಿ, ವಿದ್ಯೆಯ ಜೊತೆಗೆ ಕೌಶಲ್ಯ ಮುಖ್ಯ. ವಿದ್ಯೆ ಜ್ಞಾನ ನೀಡಿದರೆ ಕೌಶಲ್ಯ ಅನ್ನಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಗುರಿ ಇಟ್ಟುಕೊಂಡು, ಆತ್ಮವಿಶ್ವಾಸ ಹಾಗೂ ಶಿಸ್ತಿನಿಂದ ಕೆಲಸ ಮಾಡಬೇಕು. ಸೋಮಾರಿತನ ಬಿಡಬೇಕು ಎಂದರು.

ಡಿಟಿಪಿ ತರಬೇತಿ ಪಡೆದವರು ಕೃತಕ ಬುದ್ಧಿಮತ್ತೆಯ ಬಗ್ಗೆ ಕೂಡ ತಿಳಿದುಕೊಳ್ಳಿ. ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಸರಿಯಾದ .ಯೋಜನಾ ವರದಿ ತಯಾರಿಸಿಕೊಂಡು ಹೋದಲಿ ಯಾವುದೇ ಬ್ಯಾಂಕ್‌ ಆದರೂ ಸಾಲಸೌಲಭ್ಯ ನೀಡುತ್ತದೆ ಎಂದರು.

ಮುಖ್ಯಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ಡಿಟಿಪಿ, ಹೊಲಿಗೆ ತರಬೇತಿ ಪಡೆದವರಿಗೆ ಬಹಳಷ್ಟು ಬೇಡಿಕೆ ಇದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಹಿನ್ಕಲ್‌ ಕೆನರಾ ಬ್ಯಾಂಕ್‌ ಹಿರಿಯ ವ್ಯವಸ್ಥಾಪಕ ಪ್ರದೀಪ್‌, ಬೆಂಗಳೂರು ನೇಸರ ಸಂಸ್ಥೆಯ ಎಂ. ಲಿಂಗಣ್ಣ ಮಾತನಾಡಿದರು. ಎಸ್‌ಬಿಐನ ಲಕ್ಷ್ಮೀ ಇದ್ದರು. ರುಡ್‌ಸೆಟ್‌ ಸಂಸ್ಥೆಯ ನಿರ್ದೇಶಕಿ ಕೆ.ಎಸ್. ಸರಿತಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಉಪನ್ಯಾಸಕ ಆರ್‌. ಪಾಲ್‌ ರಾಜ್‌ ಸ್ವಾಗತಿಸಿದರು. ಹಿರಿಯ ಉಪನ್ಯಾಸಕಿ ಲತಾಮಣಿ ವಂದಿಸಿದರು.

Share this article