ಅಬ್ಬರದ ಮುಂಗಾರಿಗೆ ನಲುಗಿದ ಉತ್ತರ ಕನ್ನಡದ ಕರಾವಳಿ

KannadaprabhaNewsNetwork |  
Published : Jun 13, 2025, 03:09 AM ISTUpdated : Jun 13, 2025, 03:10 AM IST
ಸ | Kannada Prabha

ಸಾರಾಂಶ

ಕಾರವಾರದ ಬೈತಖೋಲದಲ್ಲಿ ಮಾಲಿನಿ ಪೆಡ್ನೇಕರ ಅವರ ಮನೆ ಭಾಗಶಃ ಕುಸಿದಿದೆ.

ಕಾರವಾರ: ಒಂದೇ ದಿನ 20 ಸೆಂ.ಮೀ.ಗೂ ಹೆಚ್ಚು ಮಳೆ. ಜಲಾವೃತಗೊಂಡ ರಸ್ತೆಗಳು, ಭಾಗಶಃ ಕುಸಿದ ಎರಡು ಮನೆಗಳು, ಜಿಲ್ಲಾ ಆಸ್ಪತ್ರೆಗೂ ನೀರು ನುಗ್ಗಿ ರೋಗಿಗಳ ಪರದಾಟ. ಹಲವು ಮನೆಗಳಿಗೆ ನುಗ್ಗಿದ ನೀರಿನಿಂದಾಗಿ ಉತ್ತರ ಕನ್ನಡದ ಕರಾವಳಿ ಗುರುವಾರ ಮಳೆಯ ಅಬ್ಬರದಲ್ಲಿ ನಲುಗಿತು.

ಕಾರವಾರದ ಬೈತಖೋಲದಲ್ಲಿ ಮಾಲಿನಿ ಪೆಡ್ನೇಕರ ಅವರ ಮನೆ ಭಾಗಶಃ ಕುಸಿದಿದೆ. ಗುಡ್ಡದ ಮೇಲಿಂದ ಹರಿದುಬಂದ ನೀರು ಮನೆಗೆ ನುಗ್ಗಿ ಗೋಡೆ ಕುಸಿಯಿತು. ಅಷ್ಟರಲ್ಲಿ ಮನೆಯಲ್ಲಿದ್ದವರು ಹೊರಗಡೆ ಓಡಿ ಅಪಾಯದಿಂದ ಪಾರಾದರು. ಬಿರುಗಾಳಿ ಮಳೆಗೆ ಹೊನ್ನಾವರದ ಬಳಕೂರು ಗ್ರಾಮದ ಧರ್ಮಿ ಹನುಮಂತ ನಾಯ್ಕ ಅವರ ಮನೆಯ ಮುಂಭಾಗದ ಚಾವಣಿಗೆ ಹಾನಿಯಾಗಿದೆ.

ಕಾರವಾರ ಹಾಗೂ ಭಟ್ಕಳದಲ್ಲಿ ಮಳೆಯ ಆರ್ಭಟ ಹೆಚ್ಚಿತ್ತು. ಬುಧವಾರ ರಾತ್ರಿಯಿಂದಲೇ ಆರಂಭವಾದ ಮಳೆ ಗುರುವಾರವಿಡೀ ಮುಂದುವರಿಯಿತು. ಗುಡುಗು, ಮಿಂಚಿನೊಂದಿಗೆ ಸುರಿದ ಭಾರಿ ಮಳೆಯಿಂದಾಗಿ ಕಾರವಾರದ ಜಿಲ್ಲಾ ಆಸ್ಪತ್ರೆಯ ವಾರ್ಡಿನೊಳಗೆ ನೀರು ನುಗ್ಗಿ ರೋಗಿಗಳು ರಾತ್ರಿಯಿಡೀ ಪರದಾಡುವಂತಾಯಿತು. ನಂತರ ಮೊದಲ ಮಹಡಿಯ ವಾರ್ಡಗಳಿಗೆ ರೋಗಿಗಳನ್ನು ಸ್ಥಳಾಂತರಿಸಲಾಯಿತು. ಕಾರವಾರದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತು.

ಕಾರವಾರದ ಸಾರಿಗೆ ಡಿಪೋದಲ್ಲಿ 2-3 ಅಡಿಯಷ್ಟು ನೀರು ನಿಂತು ಕೆರೆಯಂತೆ ಗೋಚರಿಸುತ್ತಿತ್ತು. ಹಬ್ಬುವಾಡ, ಬಾಂಡಿಸಿಟ್ಟ, ಕೆಎಚ್ ಬಿ ಕಾಲನಿ, ಹೈಚರ್ಚ ಮತ್ತಿತರ ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ವ್ಯತ್ಯಯ ಉಂಟಾಯಿತು. ಕಾರವಾರದ ರಸ್ತೆಗಳು ಹಳ್ಳಗಳಾಗಿ ಮಾರ್ಪಟ್ಟವು. ಬೈಕ್ ಸವಾರರು, ಪಾದಚಾರಿಗಳು ಸಂಚರಿಸಲಾರದೇ ಪರದಾಡುವಂತಾಯಿತು.

ಕಾರವಾರ ತಾಲೂಕಿನ ವೈಲವಾಡದಲ್ಲಿ 267 ಮಿ.ಮೀ. ದಾಖಲೆಯ ಮಳೆಯಾಗಿದೆ. ಕಾರವಾರದ ಕೆಲವೆಡೆ 200 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ.

ಭಟ್ಕಳ ತಾಲೂಕಿನಲ್ಲಿ ಬುಧವಾರ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯಿತು. ಭಟ್ಕಳದ ಕೋಗ್ತಿ ಹಾಗೂ ಮಣ್ಕುಳಿಯಲ್ಲಿ 20 ರಷ್ಟು ಮನೆಗಳಿಗೆ ನೀರು ನುಗ್ಗಿದೆ. ಚತುಷ್ಪಥ ಹೆದ್ದಾರಿಯ ರಂಗಿಕಟ್ಟೆ ಹಾಗೂ ಶಂಸುದ್ದೀನ್ ವೃತ್ತ ನದಿಯಂತಾಗಿ ಮಾರ್ಪಟ್ಟಿದ್ದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ.

ಅಂಕೋಲಾ, ಕುಮಟಾ, ಹೊನ್ನಾವರಗಳಲ್ಲಿ ಆಗಾಗ ಭಾರಿ ಮಳೆಯಾಗುತ್ತಿದ್ದರೂ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ. ಕರಾವಳಿಯಲ್ಲಿ ಇನ್ನೂ ಆರು ದಿನಗಳ ಕಾಲ ಭಾರಿ ಮಳೆ ಸುರಿಯುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''