ಮನೆಯಲ್ಲೇ ಶೌಚಾಲಯವಿದ್ದರೂ ಸುಲಭ ಶೌಚಾಲಯಕ್ಕೇ ಹೋಗಬೇಕು!

KannadaprabhaNewsNetwork |  
Published : Jun 13, 2025, 03:09 AM IST
ಗಣೇಶ ನಗರದ ಮನೆಗಳಲ್ಲಿ ತುಂಬಿರುವ ಮಳೆ ನೀರು. | Kannada Prabha

ಸಾರಾಂಶ

ಬುಧವಾರ ಸುರಿದ ಧಾರಾಕಾರ ಮ‍ಳೆಗೆ ಗಣೇಶನಗರದ ಮನೆಗಳಲ್ಲಿ ಮೊಣಕಾಲುದ್ದ ನೀರು ತುಂಬಿಕೊಂಡಿದ್ದರಿಂದ ಇಲ್ಲಿನ ಮನೆಗಳಲ್ಲಿ ಇಬ್ಬರು ಬಾಣಂತಿಯರು ನೀರಲ್ಲೆ ಕಾಲ ಕಳೆಯುವಂತಾಯಿತು. ಮ‍ಳೆ ನಿಂತ ಬಳಿಕ ಅವರನ್ನು ಬೇರೆಡೆ ಇರುವ ಸಂಬಂಧಿಕರ ಮನೆಗೆ ಕಳುಹಿಸಲಾಯಿತು.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ: ಸುಸಜ್ಜಿತ ಮ‍ನೆ, ಶೌಚಾಲಯಗಳಿದ್ದರೂ ಇಲ್ಲಿನ ಜನ ಮಳೆ ಬಂದರೆ ಸಾಕು ನೈಸರ್ಗಿಕ ಕರೆ ಪೂರೈಸಿಕೊಳ್ಳಲು ಸಿದ್ಧಾರೂಢ ಮಠದ ಬ‍ಳಿಯ ಸುಲಭ ಶೌಚಾಲಯಕ್ಕೇ ಹೋಗಬೇಕಾದ ಅನಿವಾರ್ಯತೆ..!

ಇದು ಸಿದ್ಧಾರೂಢ ಮಠದ ಬಳಿಯ ಗಣೇಶನಗರದ ದುಸ್ಥಿತಿ. ಇಲ್ಲಿ ಸುಸಜ್ಜಿತ ರಸ್ತೆ ಇದೆ, 200ಕ್ಕೂ ಅಧಿಕ ಆರ್‌ಸಿಸಿ ಮನೆಗಳಿವೆ, ಈ ಮನೆಗಳಲ್ಲಿ ಶೌಚಾಲಯವೂ ಇವೆ. ಆದರೆ, ಮಳೆ ಬಂದರೆ ಸಾಕು ಸುಲಭ ಶೌಚಾಲಯದ ಮುಂದೆ ಪಾಳಿ ಹಚ್ಚಬೇಕಿದೆ. ಒಂದೆರಡು ಗಂಟೆ ಮಳೆ ಬಂದರೆ ಇಲ್ಲಿನ ರಸ್ತೆ ತುಂಬ ನೀರು ತುಂಬಿಕೊಂಡು ಮನೆಗಳಿಗೆ ನುಗ್ಗುತ್ತದೆ. ಒಳ ಚರಂಡಿ ವ್ಯವಸ್ಥೆ ಸರಿ ಇಲ್ಲದಿರುವುದರಿಂದ ಇಲ್ಲಿನ ಎಲ್ಲ ಮನೆಗಳ ಶೌಚಾಲಯದಲ್ಲಿ ನೀರು, ಗಲೀಜು ಉಕ್ಕೇರುತ್ತದೆ. ಹೀಗಾಗಿ, ಇಲ್ಲಿನ ಜನ ಶೌಚಕ್ಕೆ ಮಠದ ಪಕ್ಕದಲ್ಲಿರುವ ಸುಲಭ ಶೌಚಾಲಯಕ್ಕೆ ತೆರಳಬೇಕಿದೆ.

ಏನಿದು ಸಮಸ್ಯೆ?: ಕಳೆದೊಂದು ವರ್ಷದ ಹಿಂದೆ ಮೇಲ್ಭಾಗದಿಂದ ಬರುವ ನೀರು ತಗ್ಗು ಪ್ರದೇಶದಲ್ಲಿರುವ ಇದೇ ಗಣೇಶನಗರಕ್ಕೆ ನುಗ್ಗಿ ಇದು ಪೂರ್ತಿ ಕೆರೆಯಂತಾಗುತ್ತಿತ್ತು. ಈ ವೇಳೆ ಜನರ ಆಕ್ರೋಶ, ಎಚ್ಚೆತ್ತ ಪಾಲಿಕೆ. ಚರಂಡಿ ಮತ್ತು ಸಿಡಿ ನಿರ್ಮಿಸಿ ಬೇರೆ ಪ್ರದೇಶದಿಂದ ಇಲ್ಲಿಗೆ ಬರುತ್ತಿದ್ದ ನೀರು ತಡೆಯಿತು. ಇನ್ನೇನು ಸಮಸ್ಯೆ ಸರಿ ಹೋಯಿತು ಎಂದು ಇಲ್ಲಿನ ಜನ ಖುಷಿಪಟ್ಟಿದ್ದರು. ಆದರೆ, ಆ ಖುಷಿ ಬಹಳ ದಿನಗಳ ಕಾಲ ಉ‍‍ಳಿಯಲ್ಲಿಲ್ಲ.

ಹೊರಗಿನ ನೀರು ಬರುವುದೇನೋ ನಿಂತಿತು. ಆದರೆ, ಮುಖ್ಯರಸ್ತೆಯಲ್ಲಿ ಎತ್ತರದಲ್ಲಿ ನಿರ್ಮಿಸಿರುವ ಚರಂಡಿಯಿಂದಾಗಿ ಇದೇ ಓಣಿಯ ನೀರು ಹೊರಹೋಗದೆ ಹೊಂಡದಂತೆ ನಿಲ್ಲುತ್ತಿದೆ. ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಮಳೆ ಸುರಿದು ಮಾರನೇ ದಿನದವರೆಗೆ ಈ ಓಣಿಯಲ್ಲಿ ನೀರು ನಿಂತಿರುತ್ತದೆ. ಮಳೆ ಬಂದ ವೇಳೆ ಇಲ್ಲಿನವರು ಯಾರೂ ತಮ್ಮ ಮನೆಗಳಲ್ಲಿರುವ ಶೌಚಾಲಯ ಬಳಸುವಂತಿಲ್ಲ. ಒಳಚರಂಡಿ ಸಮಸ್ಯೆಯಿಂದಾಗಿ ಶೌಚಾಲಯದಿಂದ ಗಲೀಜು ನೀರು ಉಕ್ಕಿ ಮನೆಯಲ್ಲಿ ನಿಲ್ಲುತ್ತಿದೆ. ಮನೆ ಮುಂದಿನ ನೀರು ಹೋಗುವ ವರೆಗೂ ಇಲ್ಲಿನವರು ಸ್ನಾನ ಮಾಡಬೇಕಾದರೆ ನೂರು ಬಾರಿ ಯೋಚಿಸಬೇಕು. ಸ್ನಾನ ಮಾಡಿದ ನೀರು ಹೊರಹೋಗುವ ಬದಲು ಮತ್ತಷ್ಟು ನೀರು ಮನೆಗೆ ನುಗ್ಗುತ್ತದೆ.

ನೀರಲ್ಲಿ ನೆನೆದ ಬಾಣಂತಿಯರು: ಬುಧವಾರ ಸುರಿದ ಧಾರಾಕಾರ ಮ‍ಳೆಗೆ ಗಣೇಶನಗರದ ಮನೆಗಳಲ್ಲಿ ಮೊಣಕಾಲುದ್ದ ನೀರು ತುಂಬಿಕೊಂಡಿದ್ದರಿಂದ ಇಲ್ಲಿನ ಮನೆಗಳಲ್ಲಿ ಇಬ್ಬರು ಬಾಣಂತಿಯರು ನೀರಲ್ಲೆ ಕಾಲ ಕಳೆಯುವಂತಾಯಿತು. ಮ‍ಳೆ ನಿಂತ ಬಳಿಕ ಅವರನ್ನು ಬೇರೆಡೆ ಇರುವ ಸಂಬಂಧಿಕರ ಮನೆಗೆ ಕಳುಹಿಸಲಾಯಿತು. ಸಾಕಷ್ಟು ಬಾರಿ ನಮ್ಮ ಸಮಸ್ಯೆ ಹೇಳಿಕೊಂಡರೂ ನಿವಾರಣೆಯಾಗಿಲ್ಲ. ನಿವಾರಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳಿಯರು ಎಚ್ಚರಿಕೆ ನೀಡಿದ್ದಾರೆ.

ಒಳಚರಂಡಿ ವ್ಯವಸ್ಥೆಗೆ ಪಾಲಿಕೆ ಅನುಮೋದನೆ ನೀಡುತ್ತಿಲ್ಲ. ಫಂಡ್‌ ಇಲ್ಲ ಎಂದು ಸಬೂಬು ಹೇಳುತ್ತಾರೆ ಎಂದು ಜನರು ಆರೋಪಿಸುತ್ತಾರೆ.

ಪಾಲಿಕೆಗೆ ತಪ್ಪದೆ ಆಸ್ತಿ ತೆರಿಗೆ, ನೀರಿನ ಕರವನ್ನೆಲ್ಲ ಪಾವತಿಸಲಾಗುತ್ತಿದೆ. ಆದರೆ, ಸೌಲಭ್ಯ ಮಾತ್ರ ಪಾಲಿಕೆ ಕೊಡುತ್ತಿಲ್ಲ ವಾರ್ಡ್‌ ಸದಸ್ಯ, ಮೇಯರ್, ಆಯುಕ್ತರು, ಶಾಸಕರು ಸೇರಿದಂತೆ ಜನಪ್ರತಿನಿಧಿಗ‍ಳಿಗೆ ಮನವಿ ಕೊಟ್ಟಿದ್ದೇವೆ. ಭರವಸೆ ಸಿಗುತ್ತಿದೆಯೇ ಹೊರತು ಸಮಸ್ಯೆ ಬಗೆಹರಿದಿಲ್ಲ ಎಂದು ಸ್ಥಳೀಯ ನಿವಾಸಿ ಪುಷ್ಪಾ ಹೇಳಿದರು.

ಪಾಲಿಕೆಯಿಂದ ₹20 ಲಕ್ಷ ಕೊಡುತ್ತೇವೆ ವಾರ್ಡ್‌ ಫಂಡ್‌ನಲ್ಲಿ ₹17.5 ಲಕ್ಷ ಕೊಡುವುದಾಗಿ ಹೇಳಿದ್ದರು. ಮುಂದೆ ಜನರೊಂದಿಗೆ ಮತ್ತೆ ಆಯುಕ್ತರನ್ನು ಭೇಟಿಯಾದಾಗ ಪಾಲಿಕೆಯಿಂದ ಅನುದಾನ ನೀಡುವುದಿಲ್ಲ. ವಾರ್ಡ್‌ ಫಂಡ್‌ನಲ್ಲೇ ಕಾಮಗಾರಿ ಮಾಡಿಸಿ ಎಂದು ಆಯುಕ್ತರು ಹೇಳುತ್ತಾರೆ. ವಾರ್ಡ್‌ ಫಂಡ್‌ನಲ್ಲಿ ಮಾತ್ರ ಈ ಕಾಮಗಾರಿ ಆಗುವುದಿಲ್ಲ ಎಂದು ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''