ಮೋದಿಜಿದು ಕಳಂಕ ವಿಲ್ಲದ ನಾಯಕತ್ವ

KannadaprabhaNewsNetwork |  
Published : Jun 13, 2025, 03:08 AM IST
ಫೋಟೋ 12hsd 1:  ದೇಶದ ಪ್ರಧಾನಿ ಮೋದಿರವರು ಹನ್ನೊಂದು ವರ್ಷಗಳ ಜನಸೇವೆಯಲ್ಲಿ ತೊಡಗಿರುವುದರ ಕುರಿತು ಛಲವಾದಿ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

11 ವರ್ಷಗಳ ಜನಸೇವೆಯಲ್ಲಿ ಕಳಂಕವಿಲ್ಲದ ನಾಯಕತ್ವದ ಮೂಲಕ ದೇಶದ ಪ್ರಧಾನಿ ನರೇಂದ್ರಮೋದಿರವರು ರಾಜನೀತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರಮೋದಿ ದೇಶದ ಪ್ರಧಾನಿಯಾಗಿ 11 ವರ್ಷಗಳಾಗಿದೆ. ಸಬ್‍ ಕಾ ಸಾತ್ ಸಬ್‍ ಕಾ ವಿಕಾಸ್ ಎನ್ನುವ ತತ್ವದಡಿ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿರುವುದರಿಂದ ದೇಶ ಸರ್ವತೋಮುಖ ಅಭಿವೃದ್ಧಿಯತ್ತ ಸಾಗುತ್ತಿದೆ. ವಿರೋಧ ಪಕ್ಷದವರು ಟೀಕಿಸುವುದು ಸಹಜ. ಸತ್ಯ ಮರೆಮಾಚಿ ಆಪಾದನೆ ಮಾಡುತ್ತಿರುವುದನ್ನು ಯಾರು ಒಪ್ಪುವುದಿಲ್ಲ.

ರಾಜ್ಯ ಕಾಂಗ್ರೆಸ್ ಸರ್ಕಾರ ದಿನಕ್ಕೊಂದು ಹಗರಣದಲ್ಲಿ ಸಿಲುಕುತ್ತಿದೆ. ವಾಲ್ಮೀಕಿ ನಿಗಮ, ಮುಡಾ ಕೇಸ್‍ನಲ್ಲಿ 100 ಕೋಟಿ ರು. ಭ್ರಷ್ಟಾಚಾರ. ಈಗ ಆರ್‌ಸಿಬಿ ಕಪ್ ಗೆದ್ದಿದ್ದಕ್ಕಾಗಿ ತರಾತುರಿಯಲ್ಲಿ ಸಂಭ್ರಮಾಚರಣೆ ನಡೆಸಿದ್ದಕ್ಕೆ 11 ಮಂದಿ ಕಾಲ್ತುಳಿತದಲ್ಲಿ ಬಲಿಯಾಗಿದ್ದಾರೆ. ಇದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಕಾಲ್ತುಳಿತದಿಂದ 10 ಜನ ಬಲಿಯಾಗಿದ್ದಕ್ಕೆ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಿರುವುದು ಯಾವ ನ್ಯಾಯ? ತಪ್ಪು ಮಾಡಿರುವುದು ಸರ್ಕಾರ. ಹೈಕಮಾಂಡ್ ಸಿದ್ದರಾಮಯ್ಯ, ಡಿ.ಕೆ.ಶಿ.ಯವರನ್ನು ದೆಹಲಿಗೆ ಕರೆಸಿಕೊಂಡು ಮರು ಜಾತಿಗಣತಿ ಮಾಡುವಂತೆ ಉಪಾಯ ಹೇಳಿಕೊಟ್ಟು ಜನರ ಗಮನವನ್ನು ಬೇರೆಡೆ ಸೆಳೆಯುವ ಕುತಂತ್ರ ಮಾಡುತ್ತಿದೆ ಎಂದು ಟೀಕಿಸಿದರು.

ಈಗಾಗಲೆ ಜಾತಿ ಗಣತಿಗೆ 250 ಕೋಟಿ ರು. ಖರ್ಚಾಗಿದೆ. ಹೈಕಮಾಂಡ್ ಹೇಳಿದಂತೆ ರಾಜ್ಯ ಸರ್ಕಾರ ಮರು ಜಾತಿಗಣತಿ ನಡೆಸುವಂತಿಲ್ಲ. ಸಂವಿಧಾನದ ಪ್ರಕಾರ ಜಾತಿ ಗಣತಿಯಾಗಬೇಕು. ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ದೇಶದ ಜನತೆಗೆ ನೀಡುತ್ತಿದೆ. ರಾಜ್ಯ ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ಅಧಿಕಾರದ ದಾಹ ಬಿಡುತ್ತಿಲ್ಲ. 40 ಕೋಟಿ ಜನರಿಗೆ ಕೇಂದ್ರ ಸರ್ಕಾರ ಜನಧನ್ ಬ್ಯಾಂಕ್ ಖಾತೆಯನ್ನು ತೆರೆದಿದೆ. ರೈತರಿಗೆ 6 ಸಾವಿರ ರು. ಪಿಂಚಣಿ ಕೊಡುತ್ತಿದೆ. ನಲ್ಸೆ ಜಲ್, ಹೆದ್ದಾರಿ ನಿರ್ಮಾಣ, ರೈಲ್ವೆ ಮತ್ತು ರೈಲು ನಿಲ್ದಾಣಗಳ ಪರಿವರ್ತನೆ, ಬೆಂಗಳೂರಿಗೆ ಮೆಟ್ರೊ, ವಿಕಸಿತ ಭಾರತ ಇವೆಲ್ಲಾ ಕೇಂದ್ರ ಸರ್ಕಾರದ ಕೊಡುಗೆಗಳು. ಬಿಜೆಪಿಗೆ ದೇಶ ಮೊದಲು. ಬ್ರಿಟೀಷ್‍ನವರು ಜನ್ಮ ಕೊಟ್ಟಿರುವ ಕಾಂಗ್ರೆಸ್ ಪಕ್ಷದಿಂದ ಜನ ಏನನ್ನು ನಿರೀಕ್ಷಿಸುವಂತಿಲ್ಲ. ಹೊರ ದೇಶದವರು ಪ್ರಶಂಶಿಸುವಷ್ಟರ ಮಟ್ಟಿಗೆ ಭಾರತ ಬೆಳೆಯುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸುರೇಶ್‍ ಸಿದ್ದಾಪುರ, ರಾಂದಾಸ್, ಜೈಪಾಲಯ್ಯ, ಲೋಕೇಶ್, ನಾಗರಾಜ್, ವಕ್ತಾರ ನಾಗರಾಜ್‍ ಬೇದ್ರೆ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''