ಡಿಸಿ ಆಗುವೆ ಎಂದ ವಿದ್ಯಾರ್ಥಿನಿಗೆ ತನ್ನ ಕುರ್ಚಿಯಲ್ಲಿ ಕೂರಿಸಿದ ಉತ್ತರಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ

KannadaprabhaNewsNetwork |  
Published : Mar 07, 2025, 11:47 PM IST
ಡಿಸಿ ಕುರ್ಚಿಯಲ್ಲಿ ಕುಳಿತಿರುವ ಸುದೀಪ್ತಾ. | Kannada Prabha

ಸಾರಾಂಶ

ವಿದ್ಯಾಭ್ಯಾಸದ ನಂತರ ಮುಂದೆ ಏನಾಗಬೇಕು ಎಂದು ಕೊಂಡಿದ್ದೀರಿ ಎಂದು ವಿಚಾರಿಸಿದರು.

ಕಾರವಾರ: ನಾನು ಕೂಡ ನಿಮ್ಮ ಹಾಗೆ ಜಿಲ್ಲಾಧಿಕಾರಿ ಆಗಬೇಕು ಎಂದ ವಿದ್ಯಾರ್ಥಿನಿಗೆ ತಾವು ಕುಳಿತಿದ್ದ ಕುರ್ಚಿಯಲ್ಲಿ ಆಕೆಯನ್ನು ಕೂರಿಸಿ ಅತ್ಯಂತ ಅಪರೂಪದ ಕ್ಷಣಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಸಾಕ್ಷಿಯಾದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಮಟ್ಟದ ವಿಚಾರಗೋಷ್ಠಿ ಕಾರ್ಯಾಗಾರ ಉದ್ಘಾಟನೆಗೆ ಆಗಮಿಸಿದ್ದ ಬಾಡದ ಮೆಟ್ರಿಕ್ ಪೂರ್ವ ಬಾಲಕಿಯರ್ ಹಾಸ್ಟೆಲ್ ವಿದ್ಯಾರ್ಥಿನಿಯರು ಡಿಸಿಯನ್ನು ಭೇಟಿ ಮಾಡಲು ಉತ್ಸುಕತೆಯಿಂದ ಅವರ ಕಚೇರಿಯ ಕೊಠಡಿಗೆ ತೆರಳಿದರು.

ವಿದ್ಯಾರ್ಥಿನಿಯರೊಂದಿಗೆ ಅವರ ವಿದ್ಯಾಭ್ಯಾಸದ ಬಗ್ಗೆ ಮತ್ತು ಆರೋಗ್ಯದ ಕುರಿತು ವಿಚಾರಿಸಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ, ವಿದ್ಯಾಭ್ಯಾಸದ ನಂತರ ಮುಂದೆ ಏನಾಗಬೇಕು ಎಂದು ಕೊಂಡಿದ್ದೀರಿ ಎಂದು ವಿಚಾರಿಸಿದರು. ತಮ್ಮ ಕನಸಿನ ಬಗ್ಗೆ ತಿಳಿಸಿದರು. ಆದರೆ ಯಲ್ಲಾಪುರ ಮೂಲದ 8ನೇ ತರಗತಿ ವಿದ್ಯಾರ್ಥಿನಿ ಸುದೀಪ್ತಾ ಶಂಕರ ಅತ್ತರವಾಲ್ ಮಾತ್ರ ನಾನು ನಿಮ್ಮ ಹಾಗೆ ಡಿಸಿ ಆಗಬೇಕು. ಅದಕ್ಕೆ ಏನು ಓದಬೇಕು ಎಂದು ಜಿಲ್ಲಾಧಿಕಾರಿಯನ್ನೇ ಪ್ರಶ್ನಿಸಿದಳು.

ಯಾವ ಕಾರಣಕ್ಕೆ ಡಿಸಿ ಆಗಬೇಕು ಎಂಬ ಜಿಲ್ಲಾಧಿಕಾರಿಯ ಪ್ರಶ್ನೆಗೆ ಉತ್ತರಿಸಿದ ವಿದ್ಯಾರ್ಥಿನಿ, ಸಮಾಜದಲ್ಲಿ ಎಲ್ಲರಿಗೂ ನ್ಯಾಯ ದೊರಕಿಸಬೇಕು. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕು. ಹಾಗಾಗಿ ಡಿಸಿ ಆಗಬೇಕು ಎಂದಳು.

ಬಾಲಕಿಯ ಪ್ರಶ್ನೆ ಮತ್ತು ಉತ್ತರಿದಂದ ಅಚ್ಚರಿಗೊಂಡ ಲಕ್ಷ್ಮೀಪ್ರಿಯಾ, ನೀನು ಇನ್ನೂ ಚಿಕ್ಕವಳಿದ್ದೀಯಾ. ಈಗಿನಿಂದಲೇ ಚೆನ್ನಾಗಿ ಓದು, ದಿನಪತ್ರಿಕೆಗಳನ್ನು ಓದಿ ಹೆಚ್ಚಿನ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ಪದವಿ ಶಿಕ್ಷಣದ ನಂತರ ಯುಪಿಎಸ್‌ಸಿ ಪರೀಕ್ಷೆಗೆ ಅಗತ್ಯ ತರಬೇತಿ ಪಡೆದು, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಆಗ ಡಿಸಿ ಆಗುತ್ತಿಯಾ, ಇದಕ್ಕಾಗಿ ನಿರಂತರವಾಗಿ ಶ್ರಮ ಪಡಬೇಕು ಎಂದರು.

ಜಿಲ್ಲಾಧಿಕಾರಿಯಾಗುವ ನಿನ್ನ ಕನಸನ್ನು ನನಸು ಮಾಡಿಕೊಳ್ಳಲು ಯಾವುದೇ ಸಂದರ್ಭದಲ್ಲೂ ಇಟ್ಟು ಕೊಂಡಿರುವ ಗುರಿಯಿಂದ ಮತ್ತು ನಿರ್ಧಾರಗಳಿಂದ ಹಿಂದೆ ಸರಿಯದಂತೆ ವಿದ್ಯಾರ್ಥಿನಿಗೆ ಕಿವಿಮಾತು ಹೇಳಿದರು. ನಿನ್ನ ಕನಸಿಗೆ ನನ್ನಿಂದ ಈಗಿನಿಂದಲೇ ಪ್ರೇರಣೆ ಸಿಗಲಿ ಎಂದು ತಾವು ಕುಳಿತಿದ್ದ ಕುರ್ಚಿಯಿಂದ ಕೆಳಗಿಳಿದು ವಿದ್ಯಾರ್ಥಿಯನ್ನು ತಮ್ಮ ಕುರ್ಚಿಯ ಮೇಲೆ ಕೂರಿಸಿದರು.

ಇತರ ವಿದ್ಯಾರ್ಥಿಗಳ ಜತೆ ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಕುಳಿತಿದ್ದ ಬಾಲಕಿಯ ಹಿಂದೆ ನಿಂತ ಲಕ್ಷ್ಮೀಪ್ರಿಯಾ ಪೋಟೊ ತೆಗೆಸಿಕೊಂಡು, ಮುಂದೆ ನಿಜವಾಗಿಯೂ ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಆಸೀನವಾಗುವಂತಾಗಲಿ ಎಂದು ಸುದೀಪ್ತಾಳಿಗೆ ಹಾರೈಸಿ, ಇತರೆ ವಿದ್ಯಾರ್ಥಿಗಳಿಗೂ ತಮ್ಮ ಗುರಿ ಸಾಧನೆಗೆ ಸತತವಾಗಿ ಪ್ರಯತ್ನಿಸುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಕುರ್ಚಿಯ ಮೇಲೆ ಕುಳಿತು ನಿಜಕ್ಕೂ ಹೆಮ್ಮೆ ಅನಿಸಿತು. ನಾನೂ ಜಿಲ್ಲಾಧಿಕಾರಿ ಆಗಿಯೇ ಆಗುತ್ತೇನೆ ಎಂಬ ದೃಢ ನಿರ್ಧಾರ ಮಾಡಿದ್ದೇನೆ ಎನ್ನುತ್ತಾರೆ ವಿದ್ಯಾರ್ಥಿನಿ ಸುದೀಪ್ತಾ ಅತ್ತರವಾಲ್.

ಜಿಲ್ಲಾಧಿಕಾರಿಯಾಗಲು ಬಯಸಿರುವ ನಮ್ಮ ಇಲಾಖೆಯ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿ ಸುದೀಪ್ತಾ ಅವರಿಗೆ ಇಲಾಖೆಯ ಮೂಲಕ ಮತ್ತು ವೈಯಕ್ತಿಕವಾಗಿ ಸದಾ ಬೆಂಬಲಕ್ಕೆ ನಿಂತು ಅಗತ್ಯವಿರುವ ಎಲ್ಲ ರೀತಿಯ ಪ್ರೋತ್ಸಾಹ ಮತ್ತು ಸಹಕಾರ ನೀಡಲಾಗುವುದು ಎನ್ನುತ್ತಾರೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಉಮೇಶ ವೈ.ಕೆ.

7ಕೆ1

ಡಿಸಿ ಕುರ್ಚಿಯಲ್ಲಿ ಕುಳಿತಿರುವ ಸುದೀಪ್ತಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ