ಕಾರವಾರ: ಜಿಲ್ಲೆಯಲ್ಲಿ ಬುಧವಾರ ತನಕ ರೆಡ್ ಅಲರ್ಟ್ ಇದೆ. ಪ್ರಸ್ತುತ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ. ಘಟ್ಟದ ಮೇಲೆ ಇರುವ ತಾಲೂಕುಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಾಗುತ್ತಿದೆ. ನೀರು ಹೊರಬಿಟ್ಟಿರುವುದರಿಂದ ಎಲ್ಲ ಅಗತ್ಯ ಕ್ರಮವನ್ನು ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದ್ದಾರೆ.
ಗೇರುಸೊಪ್ಪ ಜಲಾಶಯದಿಂದ 1 ಲಕ್ಷ ಕ್ಯುಸೆಕ್‌ಗಿಂತ ಹೆಚ್ಚಿನ ನೀರನ್ನು ಬಿಟ್ಟರೆ ಜಿಲ್ಲೆಯ 18 ಗ್ರಾಪಂ ವ್ಯಾಪ್ತಿಯ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ಆದರೆ ಈ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ತುಂಬಾ ಕಡಿಮೆ ಇದೆ. ಜಲಾಶಯದಿಂದ ನೀರನ್ನು ಬಿಟ್ಟರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತಾರೆ. ಈ ಜಲಾಶಯದ ನೀರು ಜನವಸತಿ ಪ್ರದೇಶಕ್ಕೆ ತಲುಪಲು 3ರಿಂದ 4 ಗಂಟೆಗಳ ಕಾಲವಕಾಶ ಬೇಕಿದ್ದು, ಸಾಕಷ್ಟು ಸಮಯವಿರುವುದರಿಂದ ಜಿಲ್ಲಾಡಳಿದಿಂದ ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿರುವುದರಿಂದ ಕದ್ರಾ ಜಲಾಶಯದ ನೀರಿನ ಮಟ್ಟವು 30.8 ಮೀಟರ್‌ಗೆ ಏರಿದೆ. ಇಲ್ಲಿ ಪ್ರತಿ ನಿತ್ಯ ವಿದ್ಯುತ್ ಉತ್ಪಾದನೆಗೆ 20 ಕ್ಯುಸೆಕ್ ಸಾವಿರ ನೀರನ್ನು ಹೊರಬಿಡಲಾಗುತ್ತಿದ್ದು, ಮಂಗಳವಾರ ಹೆಚ್ಚುವರಿಯಾಗಿ 30 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಅಲ್ಲಿನ ಸಾರ್ವಜನಿಕರಿಗೆ ಈಗಾಗಲೇ ಸ್ಥಳಾಂತರಗೊಳ್ಳಲು ಸೂಚನೆ ನೀಡಲಾಗಿದೆ. ಒಟ್ಟು 50 ಸಾವಿರ ಕ್ಯುಸೆಕ್ ವರೆಗೂ ನೀರು ಬಿಟ್ಟರೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟರೆ ಎಂದು ಮುನ್ನೆಚ್ಚರಿಕೆಯಾಗಿ ಕಾಳಜಿ ಕೇಂದ್ರಗಳನ್ನು ಸನ್ನದ್ಧವಾಗಿಡಲಾಗಿದೆ ಎಂದು ತಿಳಿಸಿದ್ದಾರೆ.ಸನವಳ್ಳಿ, ಬಾಚಣಕಿ ಜಲಾಶಯ ಭರ್ತಿ, ರೈತರ ಹರ್ಷ
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಡಗೋಡ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ತಾಲೂಕಿನ ಸನವಳ್ಳಿ ಜಲಾಶಯ ಮತ್ತು ಬಾಚಣಕಿ ಜಲಾಶಯ ಭರ್ತಿಯಾಗಿ ಕೋಡಿ ಹರಿಯುತ್ತಿದೆ. ರೈತರು ಹಾಗೂ ಸಾರ್ವಜನಿಕರಲ್ಲಿ ಹರ್ಷವನ್ನುಂಟು ಮಾಡಿದೆ. ಆ ಭಾಗದ ರೈತರು ಸಂತಸ ವ್ಯಕ್ತಪಡಿಸಿದ್ದು, ಜಲಾಶಯಗಳಿಗೆ ಬಾಗಿನ ಅರ್ಪಿಸಲು ಸಿದ್ಧತೆ ನಡೆಸಿದ್ದಾರೆ.ಮಳೆ ಹೆಚ್ಚಿದ ಕಾರಣ ಮುಂಡಗೋಡ ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಹಾಗೂ ಚಿಕ್ಕನೀರಾವರಿ ಇಲಾಖೆ ಅಧಿಕಾರಿಗಳು ಮಂಗಳವಾರ ಸನವಳ್ಳಿ ಜಲಾಶಯಕ್ಕೆ ಭೇಟಿ ನೀಡಿ ಸನವಳ್ಳಿ ಜಲಾಶಯದ ಸುಭದ್ರತೆಯ ದೃಷ್ಟಿಯಿಂದ ಜಲಾಶಯಕ್ಕೆ ಹರಿದು ಬರುವ ದೋಣಿ ಹಳ್ಳದ ನೀರನ್ನು ಬೇರೆಡೆ ತಿರುಗಿಸಿ ನೀರಿನ ಒಳಹರಿವು ನಿಯಂತ್ರಿಸಲಾಗಿದೆ.ತಾಲೂಕಿನ ಮಳಗಿ ಧರ್ಮಾ ಜಲಾಶಯ ಈಗಾಗಲೇ ಭರ್ತಿಯಾದಂತಾಗಿದ್ದು, ಇನ್ನುಳಿದ ನ್ಯಾಸರ್ಗಿ, ಚಿಗಳ್ಳಿ, ಅತ್ತಿವೇರಿ, ರಾಮಾಪುರ, ಸಿಂಗನಳ್ಳಿ ಜಲಾಶಯಗಳಿಗೂ ಹೆಚ್ಚಿನ ನೀರು ಹರಿದುಬರುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಈ ಜಲಾಶಯಗಳು ಕೂಡ ಶೀಘ್ರದಲ್ಲಿ ಭರ್ತಿಯಾಗಲಿವೆ.