ಕುಮಟಾ: ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಆಶ್ರಯದಲ್ಲಿ ಫೆ. ೨೧ರಂದು ಪಟ್ಟಣದ ಮೂರುಕಟ್ಟೆ ಮಹಾಲಸಾ ಕಲಾಕ್ಷೇತ್ರದಲ್ಲಿ ಬೆಳಗ್ಗೆ ೧೦ ಗಂಟೆಯಿಂದ ಜಿಲ್ಲಾಮಟ್ಟದ ದೇವಸ್ಥಾನಗಳ ಅಧಿವೇಶನ ನಡೆಯಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯಸಮನ್ವಯಕ ಗುರುಪ್ರಸಾದ ಗೌಡ ತಿಳಿಸಿದರು.
ಅಧಿವೇಶನದಲ್ಲಿ ಹಳದೀಪುರದ ಶ್ರೀ ವಾಮನಾಶ್ರಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಮುಖವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಹಾಗೂ ಶಿರಸಿ ತಾಲೂಕಿನ ೨೦೦ಕ್ಕೂ ಹೆಚ್ಚು ಆಮಂತ್ರಿತ ಪ್ರಮುಖ ದೇವಾಲಯಗಳ ಟ್ರಸ್ಟಿಗಳು, ಅರ್ಚಕರು, ಪ್ರತಿನಿಧಿಗಳು, ಪ್ರಮುಖರೊಂದಿಗೆ ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುವ ವಕೀಲರು, ಧಾರ್ಮಿಕ ಚಿಂತಕರು ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ದೇವಸ್ಥಾನಗಳನ್ನು ಸನಾತನ ಧರ್ಮಪ್ರಸಾರ ಕೇಂದ್ರಗಳನ್ನಾಗಿಸುವುದು, ದೇವಸ್ಥಾನಗಳನ್ನು ಸರ್ಕಾರೀಕರಣದಿಂದ ಮುಕ್ತಗೊಳಿಸುವುದು, ದೇವಸ್ಥಾನ-ತೀರ್ಥಕ್ಷೇತ್ರ ಪರಿಸರಗಳಲ್ಲಿ ಮದ್ಯ-ಮಾಂಸ ನಿಷೇಧ, ದೇವಸ್ಥಾನಗಳ ಜೀರ್ಣೋದ್ಧಾರ ಮುಂತಾದ ಆಯ್ದ ವಿಷಯಗಳನ್ನೂ ಚರ್ಚಿಸಲಾಗುವುದು ಎಂದರು. ಮಹಾಸಂಘವು ಕಳೆದ ೬ ತಿಂಗಳಲ್ಲಿ ದೇಶಾದ್ಯಂತ ೨೭೫ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೆ ತಂದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಅಶೋಕ ಆಚಾರ್ಯ, ಸಂದೀಪ ಭಂಡಾರಿ, ಸಂತೋಷ ಭಟ್ಕಳಕರ ಇತರರು ಇದ್ದರು.