ಯೋಜನೆಗಳ ತೂಗುಗತ್ತಿಯಲ್ಲಿ ಉತ್ತರ ಕನ್ನಡ

KannadaprabhaNewsNetwork |  
Published : Sep 30, 2025, 12:00 AM IST
ಜೀವ ವೈವಿಧ್ಶಯತೆಯ ಆಗರವಾದ ರಾವತಿ ಕಣಿವೆ  | Kannada Prabha

ಸಾರಾಂಶ

ಉತ್ತರ ಕನ್ನಡದ ಮೇಲೆ ಒಂದಾದ ಮೇಲೊಂದು ಯೋಜನೆಯ ತೂಗುಕತ್ತಿ ನೇತಾಡುತ್ತಿದೆ. ಜಿಲ್ಲೆಯ ಜನತೆಗೆ ಈಗ ಬದುಕಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಬದುಕಿಗಾಗಿ ಹೋರಾಡಬೇಕಾದ ಅನಿವಾರ್ಯತೆ

ಬಾಕ್ಸೈಟ್ ಗಣಿಗಾರಿಕೆಗೆ ಸಮೀಕ್ಷೆಗೆ ಖಾಸಗಿ ಕಂಪನಿಗಳು ತಯಾರಿ

ವಸಂತಕುಮಾರ್ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರ

ಉತ್ತರ ಕನ್ನಡದ ಮೇಲೆ ಒಂದಾದ ಮೇಲೊಂದು ಯೋಜನೆಯ ತೂಗುಕತ್ತಿ ನೇತಾಡುತ್ತಿದೆ. ಜಿಲ್ಲೆಯ ಜನತೆಗೆ ಈಗ ಬದುಕಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಹೊನ್ನಾವರದ ಕಾಸರಕೋಡದಲ್ಲಿ ಉದ್ದೇಶಿತ ಬಂದರು ನಿರ್ಮಾಣ ಯೋಜನೆ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಈ ಯೋಜನೆ ವಿರುದ್ಧ ಮೀನುಗಾರರು ವರ್ಷದಿಂದ ಪ್ರತಿಭಟಿಸುತ್ತಲೇ ಇದ್ದಾರೆ. ಯೋಜನೆ ಜಾರಿಗೆ ಸರ್ಕಾರ ಪ್ರಾಥಮಿಕ ಸಿದ್ಧತೆಗಳನ್ನು ನಡೆಸಿದ್ದು ಸ್ಥಳೀಯ ಜನತೆ ಈಗಲೂ ಹೋರಾಡುತ್ತಲೇ ಇದ್ದಾರೆ.

ಅಂಕೋಲಾ ತಾಲೂಕಿನ ಕೇಣಿಯಲ್ಲಿ ₹4000ಕ್ಕೂ ಹೆಚ್ಚು ಕೋಟಿ ವೆಚ್ಚದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಈಗಾಗಲೆ ಜೆಎಸ್ ಡಬ್ಲ್ಯು ಕಂಪನಿಗೆ ಟೆಂಡರ್ ಆಗಿದ್ದು, ಸಾರ್ವಜನಿಕ ಅಹವಾಲು ಸಭೆಯೂ ನಡೆದಿದೆ. ಸಭೆಯಲ್ಲಿ ಪಾಲ್ಗೊಂಡು ಬಹುತೇಕರು ಯೋಜನೆ ವಿರೋಧಿಸಿದ್ದರೂ ಯೋಜನೆ ಜಾರಿಗೆ ಸರ್ಕಾರ ಮುಂದಾಗುವ ಸಾಧ್ಯತೆ ಹೆಚ್ಚಿದೆ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಶರಾವತಿ ಕೊಳ್ಳದಲ್ಲಿ ಕೋಲಾಹಲ ಎಬ್ಬಿಸಿದೆ. ಜನತೆಗೆ ಸ್ಥಳಾಂತರದ ಭೀತಿಯ ಜೊತೆ ಸಿಂಗಳೀಕಗಳೂ ಸೇರಿದಂತೆ ಅಪರೂಪದ ಜೀವ ವೈವಿಧ್ಯತೆ ಇಲ್ಲಿದ್ದು ಅವುಗಳ ಮೇಲೆ ಭಾರಿ ಹೊಡೆತ ಬೀಳುವ ಅಪಾಯ ಎದುರಾಗಿದೆ. ಈ ಯೋಜನೆ ಬಗ್ಗೆಯೂ ಸಾರ್ವಜನಿಕ ಸಭೆ ಶಿವಮೊಗ್ಗದ ಕಾರ್ಗಲ್ ಹಾಗೂ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿ ನಡೆದು ಸಾರ್ವತ್ರಿಕವಾಗಿ ವಿರೋಧ ವ್ಯಕ್ತವಾಯಿತು. ಆದರೂ ಯೋಜನೆಯ ತೂಗುಗತ್ತಿ ನೇತಾಡುತ್ತಲೇ ಇದೆ.

ಬೇಡ್ತಿ (ಗಂಗಾವಳಿ) –ವರದಾ ನದಿ ಜೋಡಣೆಯ ಮೂಲಕ ಹಾವೇರಿ ಜಿಲ್ಲೆಗೆ ನೀರುಣಿಸುವ ಯೋಜನೆ ಸಹ ಮುನ್ನೆಲೆಗೆ ಬಂದಿದ್ದು, ಹಾವೇರಿ ಜಿಲ್ಲೆಯಲ್ಲಿ ಈ ಯೋಜನೆ ಜಾರಿಯ ಪ್ರಯತ್ನ ಆರಂಭಗೊಂಡಿದೆ. ಈ ಯೋಜನೆ ಜಾರಿಯಾದಲ್ಲಿ ಬೇಡ್ತಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿ ಕುಡಿಯುವ ನೀರಿಗಾಗಿ ಈ ನದಿಯನ್ನೇ ಅವಲಂಬಿಸಿರುವ ಕಾರವಾರ, ನೌಕಾನೆಲೆ, ಅಂಕೋಲಾ ಹಾಗೂ ಗೋಕರ್ಣದಲ್ಲಿ ನೀರಿಗೆ ಹಾಹಾಕಾರ ಆಗುವ ಸಾಧ್ಯತೆ ಇದೆ. ಜೊತೆಗೆ 40 ಸಾವಿರ ಕುಟುಂಬಗಳಿಗೆ ಸೇರಿದ ಕೃಷಿ, ತೋಟಗಾರಿಕೆ ಭೂಮಿ ನೀರಿಲ್ಲದೆ ಬಂಜರು ಬೀಳುವ ಸಾಧ್ಯತೆ ಇದೆ ಎಂದು ನದಿ ಇಕ್ಕೆಲಗಳಲ್ಲಿನ ರೈತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಇದಲ್ಲದೆ ಹೊನ್ನಾವರದಲ್ಲಿ ಬಾಕ್ಸೈಟ್ ಗಣಿಗಾರಿಕೆಗೆ ಸಮೀಕ್ಷೆ ನಡೆಸಲು ಕಂಪನಿಗಳು ಮುಂದಾಗಿವೆ. ಕಾಸರಕೋಡ, ಮೇಲಿನ ಇಡಗುಂಜಿ ಹಾಗೂ ಅಪ್ಸರಕೊಂಡ ಪ್ರದೇಶದಲ್ಲಿ 440 ಹೆಕ್ಟೇರ್ ಪ್ರದೇಶದಲ್ಲಿ ಬಾಕ್ಸೈಟ್ ಗಣಿಗಾರಿಕೆಗೆ ಸಮೀಕ್ಷೆಗೆ ಖಾಸಗಿ ಕಂಪನಿಗಳು ತಯಾರಿ ನಡೆಸಿವೆ.

ಅಘನಾಶಿನಿ, ವೇದಾವತಿ ನದಿ ಜೋಡಣೆ ಸಾಧ್ಯತಾ ವರದಿ ಸಿದ್ಧವಾಗಿದ್ದು, ₹23000 ಕೋಟಿ ಯೋಜನೆಯ ಮೂಲಕ ಚಿತ್ರದುರ್ಗಕ್ಕೆ ನೀರನ್ನು ಹರಿಸುವುದಾಗಿದೆ. ಸಿದ್ಧಾಪುರ ಬಳಿಯ ಬಾಳೆಕೊಪ್ಪದಲ್ಲಿ ಡ್ಯಾಂ ನಿರ್ಮಿಸಿ ಸಾಗರ, ಶಿವಮೊಗ್ಗ ಮೂಲಕ ವಾಣಿವಿಲಾಸ ಜಲಾಶಯಕ್ಕೆ ನೀರನ್ನು ತುಂಬಿಸುವ ಬೃಹತ್ ಯೋಜನೆ ಇದಾಗಿದೆ.

ಈಗಾಗಲೆ ಜಿಲ್ಲೆಯಲ್ಲಿ ಕಾಳಿ, ಶರಾವತಿ ವಿದ್ಯುತ್ ಯೋಜನೆಗಳು, ಕೈಗಾ ಅಣು ವಿದ್ಯುತ್ ಯೋಜನೆ, ಐಎನ್ ಎಸ್ ಕದಂಬ ನೌಕಾನೆಲೆ, ಮತ್ತಿತರ ಯೋಜನೆಗಳಿಗೆ ಸಾವಿರಾರು ಕುಟುಂಬಗಳ ಸ್ಥಳಾಂತರ, ಅರಣ್ಯ ನಾಶ ಆಗಿದೆ. ಮತ್ತೆ ಜನರ ಸ್ಥಳಾಂತರ, ಪರಿಸರ ನಾಶದ ಯೋಜನೆಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಧಾರಣಾ ಶಕ್ತಿ ಅಧ್ಯಯನ ಮಾಡಬೇಕೆಂಬ ಕೂಗು ಬಲವಾಗಿದೆ. ಎಲ್ಲ ಯೋಜನೆಗಳಿಂದ ಜಿಲ್ಲೆಯ ಭವಿಷ್ಯ ಏನಾಗಲಿದೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಈಗಾಗಲೇ ಯೋಜನೆಗಳ ಭಾರದಿಂದ ಜಿಲ್ಲೆಯ ಜನತೆ ತೊಂದರೆಗೊಳಗಾಗಿದ್ದಾರೆ. ಮತ್ತೆ ವಿನಾಶಕಾರಿ ಯೋಜನೆಗಳು ಜಿಲ್ಲೆಗೆ ಬೇಡ. ಇಲ್ಲಿನ ಜನತೆಗೆ ಆರೋಗ್ಯ, ಶಿಕ್ಷಣ, ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಜನತೆಯನ್ನು ನೆಮ್ಮದಿಯಾಗಿ ಬದುಕಲು ಬಿಡಿ ಎನ್ನುತ್ತಾರೆ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ