ಕುಂಭಮೇಳಕ್ಕೆ ಹೋಗಲಾಗದ್ದಕ್ಕೆ ಬಾವಿ ತೋಡಿ ಗಂಗೆ ಕಂಡ ಗೌರಿ! ಏಕಾಂಗಿಯಾಗಿ 30 ಅಡಿ ಆಳದ ಬಾವಿ ತೋಡಿದ ಮಹಿಳೆ

Nirupama ksPublished : Feb 18, 2025 11:12 AM

ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋಗಲಾಗಿಲ್ಲ ಎಂದು ಶಿರಸಿಯ ಗೌರಿ ನಾಯ್ಕ ತಮ್ಮ ಮನೆಯ ಆವರಣದಲ್ಲಿ ಮತ್ತೊಂದು ಬಾವಿ ತೋಡಿ ಗಂಗೆಯನ್ನು ಕಾಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಕಾರವಾರ : ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋಗಲಾಗಿಲ್ಲ ಎಂದು ಶಿರಸಿಯ ಗೌರಿ ನಾಯ್ಕ ತಮ್ಮ ಮನೆಯ ಆವರಣದಲ್ಲಿ ಮತ್ತೊಂದು ಬಾವಿ ತೋಡಿ ಗಂಗೆಯನ್ನು ಕಾಣಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿರಸಿಯ ಗಣೇಶನಗರದ ಜಲಸಾಧಕಿ 56 ವರ್ಷದ ಗೌರಿ ನಾಯ್ಕ, ಏಕಾಂಗಿಯಾಗಿ 30 ಅಡಿ ಆಳದ ಬಾವಿ ತೆಗೆದಿದ್ದಾರೆ. ಸತತ ಎರಡು ತಿಂಗಳ ಪ್ರಯತ್ನದ ತರುವಾಯ ಬಾವಿ ಸಂಪೂರ್ಣಗೊಂಡಿದ್ದು, ನೀರು ಬಂದಿದೆ. ‘ನಂಗೆ ಮಹಾಕುಂಭಮೇಳಕ್ಕೆ ಹೋಗಲು ಆಗುವುದಿಲ್ಲ. ಆದರೆ, ನಾನು ಈಗ ತೆಗೆದ ಬಾವಿಯಲ್ಲೇ ಗಂಗೆಯನ್ನು ನೋಡಿ ಖುಷಿಪಟ್ಟಿದ್ದೇನೆ. ನಾನು ಬಾವಿ ಕೆಲಸಕ್ಕೆ ಕೈ ಹಾಕಿದಲ್ಲೆಲ್ಲಾ ಗಂಗೆ ಸಿಕ್ಕಿದೆ. ಇದೇ ನನ್ನ ಪುಣ್ಯ’ ಎನ್ನುತ್ತಾರೆ ಗೌರಿ ನಾಯ್ಕ.

ಕಳೆದ ವರ್ಷ ಶಿರಸಿಯ ಗಣೇಶನಗರದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಮಕ್ಕಳ ಕುಡಿಯುವ ನೀರಿಗಾಗಿ ಅವರು ಬಾವಿ ತೆಗೆದಿದ್ದರು. ಅದು ತೀವ್ರ ವಿವಾದಕ್ಕೆ ಈಡಾಗಿತ್ತು. ಎರಡು ಬಾರಿ ಅದನ್ನು ಸ್ಥಗಿತಗೊಳಿಸಲು ಅಧಿಕಾರಿಗಳು ಸೂಚಿಸಿದ್ದರು. ಕೊನೆಗೂ ಗೌರಿ ಅವರ ಹಠ ಗೆದ್ದಿತ್ತು. ಶಾಲೆಯ ಮಕ್ಕಳಿಗೆ ಬಾವಿಯ ಮೂಲಕ ನೀರು ಕೊಡುವಲ್ಲಿ ಯಶಸ್ವಿಯಾಗಿದ್ದರು.