ಹೆಲ್ಮೆಟ್‌ ಧರಿಸದ್ದಕ್ಕೆ ಟಿಪ್ಪರ್‌ಗೆ ಚಾಲಕನಿಗೆ ದಂಡ!

ಸಾರಾಂಶ

ಟಿಪ್ಪರ್‌ ಚಾಲಕರೊಬ್ಬರು ಹೆಲ್ಮೆಟ್‌ ಧರಿಸಿಲ್ಲವೆಂದು ಇಲ್ಲಿನ ಪೊಲೀಸರು ದಂಡ ವಿಧಿಸಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹೊನ್ನಾವರ:  ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸುವುದು ಸಾಮಾನ್ಯ. ಆದರೆ ಪಟ್ಟಣದಲ್ಲಿ ಟಿಪ್ಪರ್‌ ಚಾಲಕರೊಬ್ಬರು ಹೆಲ್ಮೆಟ್‌ ಧರಿಸಿಲ್ಲವೆಂದು ಇಲ್ಲಿನ ಪೊಲೀಸರು ದಂಡ ವಿಧಿಸಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪೊಲೀಸರು ದಂಡ ವಿಧಿಸಿರುವ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೆಲ್ಮೆಟ್ ಧರಿಸಿಲ್ಲ ಎಂದು ಟಿಪ್ಪರ್ ಚಾಲಕ ಚಂದ್ರಕಾಂತ ಎಂಬವರಿಗೆ ₹500 ದಂಡ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಹೊನ್ನಾವರದಲ್ಲಿ ಟಿಪ್ಪ‌ರ್ ಮಾಲೀಕ ತನ್ನ ವಾಹನವನ್ನು ಮರಳು ಸಾಗಾಟಕ್ಕೆ ಕಳುಹಿಸಿದ್ದ. ಈ ವೇಳೆ ಟಿಪ್ಪರ್‌ ತಡೆದ ಹೊನ್ನಾವರ ಪೊಲೀಸರು ಚಾಲಕ ಚಂದ್ರಕಾಂತ ಎಂಬವರಿಂದ ₹500 ದಂಡ ವಸೂಲಿ ಮಾಡಿದ್ದಾರೆ. ರಶೀದಿ ನೋಡಿದ ಚಾಲಕನಿಗೆ ಶಾಕ್ ಆಗಿದೆ. ಪೊಲೀಸರೆ ನೀಡಿರುವ ರಶೀದಿ ಪ್ರಕಾರ ಇನ್ನು ಮುಂದೆ ಹೊನ್ನಾವರಲ್ಲಿ ಟಿಪ್ಪರ್ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸದೆ ಇದ್ದರೆ ದಂಡ ಬೀಳುವುದಂತೂ ಗ್ಯಾರಂಟಿ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಿಎಸ್‌ಐ ಸಂತೋಷಕುಮಾರ ಅವರು, ಟಿಪ್ಪರ್‌ ಚಾಲಕ ಸಮವಸ್ತ್ರ ಧರಿಸಿರಲಿಲ್ಲ. ಹೀಗಾಗಿ ₹500 ದಂಡ ವಿಧಿಸಲಾಗಿದೆ. ಆದರೆ ಕಣ್ತಪ್ಪಿನಿಂದ ಹೆಲ್ಮೆಟ್‌ ಧರಿಸದ್ದರಿಂದ ದಂಡ ಎಂದು ರಶೀದಿ ನೀಡಲಾಗಿದೆ ಎಂದಿದ್ದಾರೆ.

Share this article