ಕಾಮಗಾರಿಗಳಿಗೆ ಚಾಲನೆ
ನಗರದ ಶೆಟ್ಟಿಹಳ್ಳಿ ಹಳೆಯ ರೈಲ್ವೆ ಗೇಟ್ ಬಳಿ ಪಾದಚಾರಿ ಸುರಂಗ ಮಾರ್ಗ ಕಾಮಗಾರಿಗೆ ಹಾಗೂ ಭೀಮಸಂದ್ರದ ರೈಲ್ವೆ ಕೆಳ ಸೇತುವೆ ಕಾಮಗಾರಿಗಳಿಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರು ಶನಿವಾರ ಶಿಲಾನ್ಯಾಸ ನೆರವೇರಿಸಿದರು.
ನಗರದ ಶೆಟ್ಟಿಹಳ್ಳಿ ರೈಲ್ವೆಗೇಟ್‌ನಲ್ಲಿ ಈಗಾಗಲೇ ರಸ್ತೆ ಕೆಳ ಸೇತುವೆಯನ್ನು ನಿರ್ಮಿಸಲಾಗಿದ್ದು, ಈ ಕೆಳ ಸೇತುವೆ ಮೂಲಕ ವಾಹನಗಳು ಸಂಚರಿಸುತ್ತಿವೆ. ಆದರೆ ವಾಹನ ದಟ್ಟಣೆ ಇರುವ ಕಾರಣ ಅಂಡರ್‌ಪಾಸ್‌ನಲ್ಲಿ ಪಾದಚಾರಿಗಳು ಸಂಚರಿಸುವುದು ಕಷ್ಟಕರವಾಗಿರುವುದನ್ನು ಮನಗಂಡ ಸಚಿವ ಸೋಮಣ್ಣ ಅವರು 2.49 ಕೋಟಿ ರು. ವೆಚ್ಚದಲ್ಲಿ ಪಾದಚಾರಿ ಸುರಂಗ ಮಾರ್ಗ ಕಾಮಗಾರಿಗೆ ಚಾಲನೆ ನೀಡಿದರು.ನಂತರ ಮಾತನಾಡಿದ ಸಚಿವ ಸೋಮಣ್ಣ ಅವರು, ರಾಜ್ಯದಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳಿಗೆ ಈ ಹಿಂದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಹಣ ನೀಡುತ್ತಿದ್ದವು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರಗಳು ಹಣ ಬಿಡುಗಡೆ ಮಾಡದಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ ಲೆವೆಲ್ ಕ್ರಾಸಿಂಗ್ ಮೇಲ್ಸೇತುವೆ ಮತ್ತು ಕೆಳ ಸೇತುವೆ ಕಾಮಗಾರಿಗಳಿಗೆ ಸಂಪೂರ್ಣ ಹಣವನ್ನು ಬಿಡುಗಡೆ ಮಾಡುತ್ತಿದೆ ಎಂದರು.
ಏಪ್ರಿಲ್ 30 ರೊಳಗೆ ಸುಮಾರು 700 ಕೋಟಿ ರು. ವೆಚ್ಚದಲ್ಲಿ ತುಮಕೂರು ಹಾಗೂ ಹಾಸನ ಜಿಲ್ಲೆಯ ಲೆವೆಲ್ ಕ್ರಾಸಿಂಗ್ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಈ ಕಾಮಗಾರಿಗಳನ್ನು ಮುಂಬರುವ 2027ರೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದರು.
ರೈಲ್ವೆ ಇಲಾಖೆ ರಕ್ಷಣಾ ಇಲಾಖೆಯ ಮತ್ತೊಂದು ಮುಖವಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಶನಿವಾರ ಶಿಲಾನ್ಯಾಸ ನೆರವೇರಿಸಿರುವ ಪಾದಚಾರಿ ಸುರಂಗ ಮಾರ್ಗ ಹಾಗೂ ಭೀಮಸಂದ್ರದ ಬಳಿ ರೈಲ್ವೆ ಕೆಳ ಸೇತುವೆ ಕಾಮಗಾರಿಗಳನ್ನು ಮುಂದಿನ 7 ತಿಂಗಳೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.