ಹಂತ-ಹಂತವಾಗಿ ಪಶು ವೈದ್ಯರ ಹುದ್ದೆ ಭರ್ತಿ: ಸಚಿವ ಕೆ. ವೆಂಕಟೇಶ್

KannadaprabhaNewsNetwork | Published : Feb 13, 2025 12:48 AM

ಸಾರಾಂಶ

ಹಿರೇಕೆರೂರು ತಾಲೂಕಿನ ಕಚವಿ ಗ್ರಾಮದಲ್ಲಿ ಸಚಿವರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿದರು.

ಹಿರೇಕೆರೂರು: ಸಿಎಂ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜನಪರ, ಬಡವರ ಹಾಗೂ ರೈತ ಪರವಾಗಿ ಕೆಲಸ ಮಾಡುತ್ತಿದೆ ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ ಹೇಳಿದರು.

ತಾಲೂಕಿನ ಕಚವಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸರ್ಕಾರ ಜನತೆಗೆ ಅನಕೂಲವಾಗುವಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನುಗೊಳಿಸುವ ಜತೆಗೆ ಅಭಿವೃದ್ಧಿ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ. ಇದನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಕಳೆದ ಮೂರು ಉಪ ಚುನಾವಣೆಗಳಲ್ಲಿ ಕಾಂಗ್ರಸ್ ಅಭ್ಯರ್ಥಿಗಳು ಜಯಸಾಧಿಸಿದ್ದು, ನಮ್ಮ ಸರ್ಕಾರ ಮಾಡಿದ ಜನಪರ ಯೋಜನೆಗಳೇ ಸಾಕ್ಷಿಯಾಗಿವೆ ಎಂದರು.

ಈ ಭಾಗದ ಜನರ ಬಹು ದಿನದ ಬೇಡಿಕೆಯಾದ ಪಶು ಚಿಕಿತ್ಸಾಲಯದ ಸ್ಥಾಪನೆ ಇಂದು ಈಡೇರಿದೆ. ಶಾಸಕ ಯು.ಬಿ. ಬಣಕಾರ ಅವರು ಕಚವಿ ಗ್ರಾಮದಲ್ಲಿ ಪಶು ಚಿಕಿತ್ಸಾಲಯ ಅವಶ್ಯಕತೆ ಇದೆ. ಜನತೆಯ ಬಹು ದಿನದ ಬೇಡಿಕೆಯಾಗಿದ್ದು ಮತ್ತು ರೈತರಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯ ಮಾಡಿ ಮಂಜೂರು ಮಾಡಿಸಿದ್ದಾರೆ. ಬರುವ ಏಪ್ರಿಲ್ ತಿಂಗಳ ನಂತರ ಈ ಪಶು ಚಿಕಿತ್ಸಾಲಯಕ್ಕೆ ನೂತನ ಕಟ್ಟಡ ಮಂಜೂರು ಮಾಡುವುದದಾಗಿ ಭರವಸೆ ನೀಡಿದರು.

ಇಂದು ರೈತರು ಪಶುಸಂಗೋಪನೆಯಲ್ಲಿ ಬಹಳ ಅವಲಂಭಿತರಾಗಿದ್ದು, ಅವರಿಗೆ ಅನಕೂಲ ಕಲ್ಪಿಸುವ ಉದ್ದೇಶದಿಂದ ಮುಂಬರುವ ದಿನಗಳಲ್ಲಿ ಹಾಲಿನ ದರ ಹೆಚ್ಚಿಸುವ ಕುರಿತು ಚರ್ಚೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಹಾಲಿನ ದರ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುವುದು. ಈ ವರ್ಷದ ಬಜೆಟ್‌ನಲ್ಲಿ 100 ಹೊಸ ಪಶು ಆಸ್ಪತ್ರೆ ಪ್ರಾರಂಭಿಸಲು ಸಿಎಂ ಅವರಿಗೆ ಮನವಿ ಮಾಡಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಯು.ಬಿ. ಬಣಕಾರ ಮಾತನಾಡಿ, ಕಚವಿ ಗ್ರಾಮಸ್ಥರ ಬೇಡಿಕೆ ಈಡೇರಿದೆ. ಇದೊಂದು ನೆನಪಿನಲ್ಲಿಡುವ ಕಾರ್ಯವಾಗಿದೆ. ತಾಲೂಕಿನ ಗಡಿ ಭಾಗದ ಹಳ್ಳಿಗಳ ರೈತರಿಗೆ ಅನುಕೂಲವಾಗಲಿದೆ. ರೈತರು ಕೃಷಿಯೊಂದಿಗೆ ಉಪ ಕಸುಬು ಕೈಗೊಳ್ಳುವುದು ಅನಿವಾರ್ಯವಾಗಿದೆ. ಇದರಲ್ಲಿ ಹೈನುಗಾರಿಕೆ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗುವ ಜತೆಗೆ ಕೃಷಿಗೆ ಉತ್ತೇಜನ ಪಡೆದುಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ರಮೇಶ ಮಡಿವಾಳರ, ಗ್ರಾಪಂ ಅಧ್ಯಕ್ಷೆ ಲಲಿತವ್ವ ಬಾರ್ಕಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ. ಮಂಜುನಾಥ ಪಾಳೆಗಾರ, ಜಂಟಿ ನಿರ್ದೇಶಕ ಡಾ. ಬಿ.ಎಲ್. ಪರಮೆಶ್ವರ ನಾಯ್ಕ, ಉಪ ನಿರ್ದೇಶಕ ಡಾ. ಎಸ್.ವಿ. ಸಂತಿ, ತಹಸೀಲ್ದಾರ್ ಎಚ್. ಪ್ರಭಾಕರಗೌಡ, ಇಒ ಮಲ್ಲಿಕಾರ್ಜುನ ಕೆ.ಎಂ., ಮುಖ್ಯ ಪಶು ವೈದ್ಯಾಧಿಕಾರಿ ಡಾ. ಕಿರಣ್ ಎಲ್., ಹಾವೇರಿ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಪೀಕಾರ್ಡ್ ಬ್ಯಾಂಕ ಅಧ್ಯಕ್ಷ ಮಲ್ಲನಗೌಡ ನಾಗಪ್ಪನವರ, ನಿರ್ದೇಶಕ ಸಂತೋಷ ಬಾಸೂರ, ಗ್ರಾಪಂ ಉಪಾಧ್ಯಕ್ಷೆ ಹೊನ್ನಮ್ಮ ಆಲದಕಟ್ಟಿ, ಸದಸ್ಯರು ಸೇರಿದಂತೆ ಗ್ರಾಮಸ್ಥರು ಪಶುಪಾಲನಾ ಇಲಾಖೆ ಸಿಬ್ಬಂದಿ ಇದ್ದರು.

Share this article