ಶಿರಹಟ್ಟಿಯಲ್ಲಿ ಕಸದ ತೊಟ್ಟಿಯಾದ ಖಾಲಿ ನಿವೇಶನಗಳು!

KannadaprabhaNewsNetwork |  
Published : Aug 06, 2026, 02:30 AM IST
ಶಿರಹಟ್ಟಿಯ ಸಿದ್ರಾಮೇಶ್ವರ ನಗರದ ಬಡಾವಣೆಯ ನಿವೇಶನದಲ್ಲಿ ಕಸ ಹಾಕಿರುವುದು. | Kannada Prabha

ಸಾರಾಂಶ

ಮುಖ್ಯ ರಸ್ತೆಗಳು, ವಸತಿ ಪ್ರದೇಶ, ಮಾರುಕಟ್ಟೆ ಹಾಗೂ ಚರಂಡಿ ಪಕ್ಕದಲ್ಲಿ ಕಸದ ರಾಶಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಳೆ ನೀರಿನೊಂದಿಗೆ ಕಸ ಕೊಳೆತು ದುರ್ವಾಸನೆ ಹರಡುತ್ತಿದ್ದು, ಸೊಳ್ಳೆ, ನೊಣ ಹಾಗೂ ಇತರೆ ಕೀಟಗಳ ಕಾಟ ಹೆಚ್ಚಾಗಿದೆ.

ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಪಟ್ಟಣದಲ್ಲಿ ಸ್ವಚ್ಛತಾ ಸಿಬ್ಬಂದಿ ಹಾಗೂ ಕಸ ವಿಲೇವಾರಿ ವಾಹನಗಳ ಕೊರತೆಯಿಂದ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ. ಅದರಲ್ಲೂ ಖಾಲಿ ನಿವೇಶನಗಳು ಕಸದ ತೊಟ್ಟಿಗಳಾಗುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಪಟ್ಟಣ ಪಂಚಾಯಿತಿಯಲ್ಲಿ ೨೧ ಜನ ಕಾಯಂ ಪೌರಕಾರ್ಮಿಕರು, ೧೦ ಜನ ಹೊರಗುತ್ತಿಗೆ ಕೆಲಸಗಾರರು ಇದ್ದು, ಇವರಲ್ಲಿ ೮ ಜನ ವಾಹನ ಚಾಲಕರು, ಓರ್ವ ವಾಚ್‌ಮನ್, ಮತ್ತೋರ್ವ ಮಷಿನ್ ನಿರ್ವಹಣೆಯವರು ಇದ್ದಾರೆ. ಪಟ್ಟಣ ಪಂಚಾಯಿತಿಯ ೧೮ ವಾರ್ಡಗಳಿಗೆ ಸಧ್ಯ ಕೇವಲ ಎರಡು ಕಸ ವಿಲೇವಾರಿ ವಾಹನಗಳಿವೆ.

ಮುಖ್ಯ ರಸ್ತೆಗಳು, ವಸತಿ ಪ್ರದೇಶ, ಮಾರುಕಟ್ಟೆ ಹಾಗೂ ಚರಂಡಿ ಪಕ್ಕದಲ್ಲಿ ಕಸದ ರಾಶಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಳೆ ನೀರಿನೊಂದಿಗೆ ಕಸ ಕೊಳೆತು ದುರ್ವಾಸನೆ ಹರಡುತ್ತಿದ್ದು, ಸೊಳ್ಳೆ, ನೊಣ ಹಾಗೂ ಇತರೆ ಕೀಟಗಳ ಕಾಟ ಹೆಚ್ಚಾಗಿದೆ.

ಕಸವನ್ನು ನಿಗದಿತ ಸಮಯಕ್ಕೆ ಸಂಗ್ರಹಿಸದಿರುವುದು, ಮನೆ ಮನೆಗೆ ಕಸ ಸಂಗ್ರಹ ವಾಹನಗಳು ನಿಯಮಿತವಾಗಿ ಬರುತ್ತಿಲ್ಲ. ಹೀಗಾಗಿ ಖಾಲಿ ನಿವೇಶನಗಳಲ್ಲಿ ಹಲವರು ಕಸ ಎಸೆಯುತ್ತಿದ್ದಾರೆ. ಹಲವೆಡೆ ರಸ್ತೆಬದಿಯಲ್ಲೂ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಸಮರ್ಪಕ ಕಸ ವಿಲೇವಾರಿಗೆ ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ.ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಲು ಪಟ್ಟಣ ಪಂಚಾಯಿತಿ ತುರ್ತು ಕ್ರಮವಾಗಿ ಕಸ ವಿಲೇವಾರಿ ಮಾಡಬೇಕು. ಚರಂಡಿಗಳ ಸ್ವಚ್ಛತೆ, ಸೊಳ್ಳೆ ನಿಯಂತ್ರಣ ಔಷಧ ಸಿಂಪಡಣೆ ಹಾಗೂ ಸ್ವಚ್ಛತಾ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕೂಡಲೇ ಹೆಚ್ಚುವರಿ ಕಸ ಸಾಗಣೆ ವಾಹನಗಳನ್ನು ಒದಗಿಸಿ, ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳನ್ನು ಭರ್ತಿ ಮಾಡಿ, ಪಟ್ಟಣದಾದ್ಯಂತ ನಿಯಮಿತ ಸ್ವಚ್ಛತಾ ಕಾರ್ಯ ನಡೆಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಕಸ ವಿಲೇವಾರಿಗೆ ಕ್ರಮ: ಪಪಂ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ೪ ವಾಹನಗಳಿದ್ದು, ಸಧ್ಯ ೨ ವಾಹನಗಳು ಮಾತ್ರ ಓಡುತ್ತಿವೆ. ಇನ್ನೆರಡು ರಿಪೇರಿಗೆ ಕಳುಹಿಸಲಾಗಿದೆ. ೨ ಟ್ರ್ಯಾಕ್ಟರ್ ಇದ್ದು, ಒಂದು ರಿಪೇರಿಗೆ ಹೋಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ನಿಲೇಶ ಹಾದಿಮನಿ ತಿಳಿಸಿದರು.

ದುರ್ವಾಸನೆ: ವಾರ್ಡ್ ನಂ. ೧೬ರ ಸಿದ್ರಾಮೇಶ್ವರ ನಗರದಲ್ಲಿ ೨- ೩ ದಿನಕ್ಕೊಮ್ಮೆ ಕಸ ವಿಲೇವಾರಿ ವಾಹನ ಬರುತ್ತಿದೆ. ಪ್ರಮುಖ ರಸ್ತೆಗೆ ಹೊಂದಿಕೊಂಡಿರುವ ಮನೆಗಳ ಕಸವನ್ನು ಸಂಗ್ರಹಿಸುತ್ತಿದ್ದು, ಉಳಿದ ಮನೆಗಳಿಗೆ ಹೋಗದೇ ಇರುವುದರಿಂದ ಮನೆಯ ಮಾಲೀಕರು ಕಸವನ್ನು ಖಾಲಿ ಇರುವ ನಿವೇಶನದಲ್ಲಿ ಹಾಕುತ್ತಿದ್ದು, ಕಸ ಕೊಳೆತು ದುರ್ವಾಸನೆ ಬೀರುತ್ತಿದೆ ಎಂದು ಬಡಾವಣೆಯ ನಿವಾಸಿ ಹಸನ್ ತಹಸೀಲ್ದಾರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ, ಬೆಳೆ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ವರದಿ: ನರೇಂದ್ರಸ್ವಾಮಿ
ರ್‍ಯಾಗಿಂಗ್‌ ನಿಯಂತ್ರಣಕ್ಕೆ ಸರ್ಕಾರ ವಿಫಲ: ಡಾ.ಭರತ್‌ ಶೆಟ್ಟಿ ಟೀಕೆ