ಕೊಪ್ಪಳ: ಜಿಲ್ಲೆಯಲ್ಲಿ ಡಿ. 21ರಿಂದ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಸಾರ್ವಜನಿಕರು ತಮ್ಮ ಹತ್ತಿರದ ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ಕಡ್ಡಾಯವಾಗಿ ಹಾಕಿಸುವ ಮೂಲಕ ಶಾಶ್ವತ ಅಂಗವಿಕಲತೆ ತರಬಲ್ಲ ಪೋಲಿಯೋ ರೋಗ ತಡೆಗಟ್ಟಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 0 ದಿಂದ 5 ವರ್ಷದೊಳಗಿನ ಮಕ್ಕಳ ಸಂಖ್ಯೆಯ ಗುರಿ ಒಟ್ಟು 1,76,580 ಆಗಿದ್ದು, ಲಸಿಕಾ ಕಾರ್ಯಕ್ರಮಕ್ಕಾಗಿ 877 ಬೂತ್‌ಗಳು, 19 ಮೊಬೈಲ್ ತಂಡಗಳು, 59 ಟ್ರಾನ್ಸಿಟ್ ತಂಡಗಳು ಹಾಗೂ 2386 ಲಸಿಕಾ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಇದಲ್ಲದೇ ಪ್ರತಿ ತಾಲೂಕಿಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಜಿಲ್ಲಾಮಟ್ಟದ ಕಾರ್ಯಕ್ರಮ ಅನುಷ್ಠಾನಾಧಿಕಾರಿ ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ವಿವಿಧ ವೃಂದದ ಅಧಿಕಾರಿ ಹಾಗೂ ಸಿಬ್ಬಂದಿ ಕ್ಷೇತ್ರ ಭೇಟಿ ಮಾಡಲು ಮೇಲ್ವಿಚಾರಕರನ್ನಾಗಿ ನಿಯೋಜಿಸಲಾಗಿದೆ. ಒಟ್ಟಿನಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ರೀತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಾರತವು ಪೋಲಿಯೋ ಮುಕ್ತ ದೇಶವಾಗಿದೆ. ಆದರೆ ನಮ್ಮ ನೆರೆಯ ರಾಷ್ಟ್ರಗಳಲ್ಲಿ ಪೋಲಿಯೋ ರೋಗವು ಇನ್ನೂ ಭೀತಿಯನ್ನುಂಟು ಮಾಡುತ್ತಿದ್ದು, ನಮ್ಮ ದೇಶದಲ್ಲೂ ಈ ರೋಗ ಮರುಕಳಿಸಬಹುದಾದ ಸಾಧ್ಯತೆ ಇದೆ.ಹಾಗಾಗಿ ಜಿಲ್ಲೆಯ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಐದು ವರ್ಷದೊಳಗಿನ ಮಗುವಿಗೆ ಪ್ರತಿ ಬಾರಿಯೂ ಎರಡು ಹನಿ ಲಸಿಕೆ ಹಾಕಿಸಿ, ಸಂಪೂರ್ಣ ರಕ್ಷಣೆ ಖಚಿತಪಡಿಸಿಕೊಳ್ಳಬೇಕು. ಪೋಲಿಯೋ ವಿರುದ್ಧ ಭಾರತ ಸಾಧಿಸಿರುವ ಗೆಲುವನ್ನು ಮುಂದುವರೆಸಲು ಕೊಪ್ಪಳ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜತೆ ಕೈಜೋಡಿಸಿ ಶಾಶ್ವತ ಅಂಗವಿಕಲತೆ ತರಬಲ್ಲ ಪೋಲಿಯೋ ಲಸಿಕೆ ಮೂಲಕ ಪ್ರತಿರೋಧಿಸೋಣ. ಈ ಹಿಂದೆ ಎಷ್ಟೇ ಬಾರಿ ಲಸಿಕೆ ಹಾಕಿಸಿದರೂ ಸಹ ಪುನಃ ಇದೇ ಡಿ.21 ರಂದು ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ತಪ್ಪದೇ ನಿಮ್ಮ 0 ದಿಂದ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ಪ್ರಕಟಣೆ ತಿಳಿಸಿದೆ.