ಜಾನುವಾರು ರೋಗ ತಡೆಗೆ ಲಸಿಕೆ ಹಾಕಿಸಿ

KannadaprabhaNewsNetwork |  
Published : Nov 05, 2025, 12:45 AM IST
ಪೋಟೊ4ಕೆಎಸಟಿ2: ಕುಷ್ಟಗಿ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಅವರು 8ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಪೋಸ್ಟರ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು. | Kannada Prabha

ಸಾರಾಂಶ

ಪ್ರತಿ ವರ್ಷವೂ ಇಲಾಖೆಯಿಂದ ಜಾನುವಾರುಗಳಿಗೆ ಎರಡು ಬಾರಿ ಲಸಿಕಾ ಅಭಿಯಾನ ನಡೆಯುತ್ತಿದ್ದು, ರೋಗ ನಿಯಂತ್ರಣಕ್ಕೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು

ಕುಷ್ಟಗಿ: ರೈತರು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಹಾಕಿಸುವ ಮೂಲಕ ಜಾನುವಾರು ರಕ್ಷಣೆ ಜತೆಗೆ ರೋಗ ಮುಕ್ತ ವಾತಾವರಣ ನಿರ್ಮಾಣಕ್ಕೆ ಮುಂದಾಗಿ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದ ತಾಲೂಕು ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 8ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿ ವರ್ಷವೂ ಇಲಾಖೆಯಿಂದ ಜಾನುವಾರುಗಳಿಗೆ ಎರಡು ಬಾರಿ ಲಸಿಕಾ ಅಭಿಯಾನ ನಡೆಯುತ್ತಿದ್ದು, ರೋಗ ನಿಯಂತ್ರಣಕ್ಕೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದರು.

ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಆನಂದ ದೇವರನಾವದಗಿ ಮಾತನಾಡಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯಡಿ 8ನೇ ಸುತ್ತಿನ ಕಾಲುಬಾಯಿ ರೋಗ ನಿರೋಧಕ ಲಸಿಕಾ ಕಾರ್ಯ ನ.3 ರಿಂದ ಡಿ. 2 ರವರೆಗೆ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನಲ್ಲಿ 60ಸಾವಿರ ಜಾನುವಾರುಗಳಿಗೆ ಲಸಿಕೆ ಹಾಕಲು 44 ಜನ ಲಸಿಕೆದಾರರನ್ನು ನಿಯೋಜನೆ ಮಾಡಲಾಗಿದೆ ಎಂದರು.

ಲಸಿಕೆದಾರರು ಗ್ರಾಮಗಳಿಗೆ ಭೇಟಿ ನೀಡಿ ಉಚಿತವಾಗಿ ಲಸಿಕೆ ಹಾಕುತ್ತಿದ್ದು, ಎಲ್ಲ ರೈತರು ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದರು.

ಕಾಲುಬಾಯಿ ಜ್ವರ ರೋಗವು ದನ, ಎಮ್ಮೆ, ಹಂದಿ, ಜಿಂಕೆ ಮತ್ತು ಇತರೆ ಸೀಳು ಗೊರಸಿನ ರಾಸುಗಳಲ್ಲಿ ಪಿಕಾರ್ನೋ ವೈರಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ರೋಗಗ್ರಸ್ತ ರಾಸುವಿನ ಸಂಪರ್ಕ, ಆಹಾರ, ಗಾಳಿ ಮತ್ತು ನೀರಿನ ಮೂಲಕ ಹರಡುತ್ತದೆ ಇದರಿಂದ ಕೆಲವೊಮ್ಮೆ ಜಾನುವಾರುಗಳು ಮರಣವನ್ನಪ್ಪುತ್ತವೆ ಎಂದರು.

ಗರ್ಭ ಕಟ್ಟುವ ತೊಂದರೆ ಉಂಟಾಗಬಹುದು ಹಾಗೂ ಗರ್ಭಪಾತಗಳು ಆಗುತ್ತವೆ. ಹೋರಿ, ಎತ್ತುಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕ್ಷೀಣಿಸುತ್ತದೆ. ರೈತರಿಗೆ ಆರ್ಥಿಕ ನಷ್ಠ ಉಂಟಾಗುತ್ತದೆ. ಆದ್ದರಿಂದ ಕಾಲುಬಾಯಿ ಜ್ವರದ ವಿರುದ್ಧ ನಿಯಮಿತವಾಗಿ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ರೋಗ ನಿಯಂತ್ರಣ ಮಾಡಬಹುದಾಗಿದೆ.

ಮೂಢನಂಬಿಕೆಗೆ ಒಳಗಾಗಬೇಡಿ:

ಕಾಲುಬಾಯಿ ಲಸಿಕೆ ಹಾಕುವುದರಿಂದ ಹಾಲು ಕಡಿಮೆಯಾಗುವುದಾಗಲಿ,ಗರ್ಭಪಾತವಾಗುವುದಾಗಲಿ ಆಗುವುದಿಲ್ಲ. ಯಾವುದೇ ಮೂಢನಂಬಿಕೆಯ ತಪ್ಪು ಗ್ರಹಿಕೆಗೆ ಒಳಗಾಗದೆ ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಕಾಲುಬಾಯಿ ರೋಗ ಹಾಗೂ ಚರ್ಮಗಂಟು ರೋಗಕ್ಕೂ ಲಸಿಕೆ ಹಾಕಲಾಗುತ್ತಿದ್ದು ಲಸಿಕೆ ಹಾಕಿಸಿ ಜಾನುವಾರುಗಳನ್ನು ರಕ್ಷಿಸಿ.

ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಮಲ್ಲಯ್ಯ, ಎಸಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ್ ಅಶೋಕ ಶಿಗ್ಗಾವಿ, ಡಾ. ಸಿದ್ದಲಿಂಗಯ್ಯ ಶಂಕೀನ್, ಡಾ.ಸದ್ದಾಂ, ಡಾ. ನಾಗಪ್ಪ ಹಾಗೂ ಪಶು ಆಸ್ಪತ್ರೆಯ ಸಿಬ್ಬಂದಿಗಳು ಸೇರಿದಂತೆ ರೈತರು ಇದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ