ಜ್ಞಾನ ಉಣಬಡಿಸುವ ಸಾಹಿತ್ಯವೇ ವಚನ ದರ್ಶನ

KannadaprabhaNewsNetwork | Published : Jul 15, 2024 1:46 AM

ಸಾರಾಂಶ

೧೨ನೇ ಶತಮಾನದಲ್ಲಿ ಕನ್ನಡದಲ್ಲಿ ಮೂಡಿಬಂದ ವಚನ ಸಾಹಿತ್ಯವು ವಾಙ್ಮಯ ಜಗತ್ತಿನ ಒಂದು ಅಚ್ಚರಿ

ಗದಗ: ಶರಣರ ಮೂಲ ಆದರ್ಶ ಮರೆಮಾಚದೆ ವಚನಗಳ ಮೂಲ ಆಶಯದಂತೆ ಯಥಾವತ್ತಾಗಿ ಅರ್ಥೈಸಿಕೊಳ್ಳಬೇಕಾಗಿದೆ. ಅಜ್ಞಾನ ಕಳೆದು ಜ್ಞಾನ ಉಣಬಡಿಸುವ ಸಾಹಿತ್ಯವೇ ವಚನ ದರ್ಶನ. ಅಹಂಕಾರ ಅಳಿಸುವುದೇ ವಚನ, ಮಾನವೀಯ ಮೌಲ್ಯ ಬೆಳೆಸುವುದೇ ವಚನ. ವಚನಗಳ ಸಾರ ಅರಿತು ನಡೆಯಬೇಕಾಗಿದೆ ಎಂದು ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಹೇಳಿದರು.ಅವರು ನಗರದ ಕೆವಿಎಸ್ ಆರ್ ಕಾಲೇಜು ಸಭಾಂಗಣದಲ್ಲಿ ಬಯಲು ವೇದಿಕೆ, ಕೆಎಲ್ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕನಕದಾಸ ಶಿಕ್ಷಣ ಸಮಿತಿ ಸಹಯೋಗದಲ್ಲಿ ನಡೆದ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

೧೨ನೇ ಶತಮಾನದಲ್ಲಿ ಕನ್ನಡದಲ್ಲಿ ಮೂಡಿಬಂದ ವಚನ ಸಾಹಿತ್ಯವು ವಾಙ್ಮಯ ಜಗತ್ತಿನ ಒಂದು ಅಚ್ಚರಿ. ದೇಶಾದ್ಯಂತ ನಡೆದ ಭಕ್ತಿಮಾರ್ಗದ ಪುನರುತ್ಥಾನದಲ್ಲಿ ವಚನ ಸಾಹಿತ್ಯದ ಪಾತ್ರವು ಮಹತ್ವದ್ದಾಗಿದೆ. ವಚನ ಸಾಹಿತ್ಯ ಭಕ್ತಿ ಸಾಹಿತ್ಯ, ಬಂಡಾಯ ಸಾಹಿತ್ಯವಲ್ಲ. ಪಾಶ್ಚಾತ್ಯ ಮನೋಧರ್ಮದಲ್ಲಿ ವಚನಗಳನ್ನು ಓದುವುದು ನಾವು ವಚನ ಸಾಹಿತ್ಯಕ್ಕೆ ಮಾಡುವ ಅಪಮಾನ. ವಚನ ಸಾಹಿತ್ಯವು ಕೇವಲ ಒಂದು ಜಾತಿಗೆ ಸೀಮಿತವಾದದ್ದಲ್ಲ. ಅದು ಇಡೀ ಮನುಕುಲದ ಆತ್ಮಧಾರಕ್ಕೆ ಇರುವ ಭಕ್ತಿ ಮಾರ್ಗ ಎಂದರು.

12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಸಮಸಮಾಜದ ತಳಹದಿಯಲ್ಲಿ ಕಲ್ಯಾಣ ರಾಜ್ಯ ಕಟ್ಟಿದರು. ಭಕ್ತಿ ಪಂಥದ ಮುಖಾಂತರ ಜಾತಿ ತಾರತಮ್ಯ ಹೋಗಲಾಡಿಸಲು ಹಗಲಿರುಳು ಶ್ರಮಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಆಧ್ಯಾತ್ಮಿಕ ಕ್ರಾಂತಿ ಮಾಡಿದರು. ಬಸವಣ್ಣ ಮತ್ತು ಶರಣರ ಮೂಲ ಆದರ್ಶ ಮರೆಮಾಚದೆ ಮೂಲ ವಚನಗಳ ಆಧಾರದ ಮೇಲೆ ಶರಣರು ಮತ್ತು ಬಸವಣ್ಣನ ನೈಜ ಅದರ್ಶಗಳ ಅಧ್ಯಯನಕ್ಕೆ ಹೆಚ್ಚು ಒತ್ತುಕೊಡಬೇಕಾಗಿದೆ. ಇಂದಿನ ಪೀಳಿಗೆಗೆ ವಚನ ಸಾಹಿತ್ಯ ಸಾರ ತಿಳಿಸಬೇಕಾಗಿದೆ ಎಂದರು.

ಶ್ರೀ ಡಾ.ಕಲ್ಲಯ್ಯಜ್ಜನವರು ಮಾತನಾಡಿ, ಸಮಾಜದಲ್ಲಿನ ತಾರತಮ್ಯ ಹೊಗಲಾಡಿಸುವಲ್ಲಿ ವಚನಗಳ ಪಾತ್ರ ಬಹಳ ಮಹತ್ವದಾಗಿದೆ. ಬಸವಣ್ಣನವರು ದಯವೇ ಧರ್ಮದ ಮೂಲ ಎಂದರು ಅಂದರೆ ಪ್ರತಿಯೊಬ್ಬರಲ್ಲಿ ದಯೆಯನ್ನು ತೋರಬೇಕು ಅದರೊಂದಿಗೆ ಪ್ರತಿಯೊಬ್ಬರಲ್ಲಿ ಮಾನವೀಯ ಮೌಲ್ಯ ಬೆಳೆಸಬೇಕಾಗಿದೆ. ವಚನಗಳು ಪ್ರತಿಯೊಬ್ಬರಿಗೂ ತಲುಪಲು ಸಾಹಿತಿಗಳು, ವಿದ್ವಾಂಸರು ಶ್ರಮಿಸಬೇಕಾಗಿದೆ ಎಂದರು.

ನಿವೃತ್ತ ಪ್ರಾಧ್ಯಾಪಕಿ ಪ್ರೊ. ಶಕುಂತಲಾ ಸಿಂಧೂರ ಹಾಗೂ ಪ್ರಾ. ಮಾರುತಿ. ಸಿ.ಕಟ್ಟಿಮನಿ ಹಾಗೂ ಕನಕದಾಸ ಶಿಕ್ಷಣ ಸಮಿತಿ ಜಂಟಿ ಕಾರ್ಯದರ್ಶಿ ಡಾ. ಪುನಿತ ಕುಮಾರ ಮಾತನಾಡಿದರು.

ಕನಕದಾಸ ಶಿಕ್ಷಣ ಸಮಿತಿ ಕಾರ್ಯದರ್ಶಿ ರವೀಂದ್ರನಾಥ. ಬಿ.ದಂಡಿನ, ಉಮೇಶ ಹಿರೇಮಠ, ಡಾ. ಜಿ.ಸಿ. ಜಂಪಣ್ಣವರ, ಸುಧೀರ ಘೋರ್ಪಡೆ, ಸಾಮಾಜಿಕ ಹೋರಾಟಗಾರ ರವಿಕಾಂತ ಅಂಗಡಿ, ಕಸಾಪ ತಾಲೂಕಾಧ್ಯಕ್ಷೆ ಡಾ. ರಶ್ಮಿ ಅಂಗಡಿ ಹಾಗೂ ಸಾಹಿತಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾಲೇಜಿನ ಸಿಬ್ಬಂದಿ ವರ್ಗ ಇದ್ದರು.

Share this article