ಕೊಟ್ಟೂರು: ವಚನ ಸಾಹಿತ್ಯ ಕೇವಲ ಸಾಹಿತ್ಯ ಪ್ರಕಾರವಾಗಿರದೇ ಅದೊಂದು ೧೨ನೇ ಶತಮಾನದಲ್ಲಿನ ಶ್ರೇಷ್ಠ ಸಾಮಾಜಿಕ ಮತ್ತು ಮಾನವೀಯ ಮೌಲ್ಯಗಳ ಕ್ರಾಂತಿಯಾಗಿದೆ ಎಂದು ಕುರುಗೋಡು ಸರ್ಕಾರಿ ಪದವಿ ಕಾಲೇಜು ಸಹ ಪ್ರಾಧ್ಯಾಪಕ ಡಾ.ತಿಪ್ಪೇರುದ್ರ ಸಂಡೂರು ಹೇಳಿದರು.
ಬಸವಾದ ಶರಣರು ರಚಿಸಿದ್ದ ವಚನಗಳೆಲ್ಲ ಸಮಾನತೆ, ಕಾಯಕ, ದಾಸೋಹ, ಸದ್ಯ ಮತ್ತು ಸದಾಚಾರ, ಮಹಿಳಾ ಸಬಲೀಕರಣ, ದಯೆ ಸೇರಿ ಅನೇಕ ಮೌಲ್ಯಗಳನ್ನು ಶರಣರು ತಮ್ಮ ವಚನಗಳಲ್ಲಿ ಸಾರಿದ್ದಾರೆ. ಒಂದೊಂದು ವಚನದಲ್ಲಿ ಅಗಾಧವಾದ ಅರ್ಥ ಹಾಗೂ ಸುಸ್ಥಿರ ಸಮಾಜ ನಿರ್ಮಾಣದ ಉತ್ತಮ ಅಂಶಗಳಿವೆ. ಆದರೆ ಎಲ್ಲ ಶರಣರು ರಚಿಸಿದ್ದ ವಚನಗಳನ್ನು ಸಾಹಿತ್ಯವಾಗಿ ನೋಡುವುದಕ್ಕಿಂದ ಅವುಗಳಲ್ಲಿರುವ ಮಾನವೀಯ ಮೌಲ್ಯಗಳನ್ನು ಪರಿಗಣಿಸುವುದು ಅವಶ್ಯವಿದೆ. ಶರಣರ ವಚನಗಳನ್ನು ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದರು.
ಜಾತಿ, ಮತ, ಕುಲ ಭೇದವನ್ನು ವಚನಕಾರರು ಪೂರ್ಣವಾಗಿ ನಿರಾಕರಿಸಿದ್ದರು. ಬಸವಣ್ಣನವರ ಇವನಾರವ ಎಂಬ ವಚನ ವಿಶ್ವ ಮಾನವ ಸಂದೇಶ ಸಾರಿದೆ. ಬದುಕುವುದಕ್ಕಾಗಿ ಮನುಷ್ಯ ನಿರ್ವಹಿಸುವ ಕಾಯಕವನ್ನು ಕೀಳಾಗಿ ಕಾಣದೇ ಪ್ರಾಮಾಣಿಕವಾಗಿ ಮಾಡುವ ಮೂಲಕ ಅದರಲ್ಲಿ ದೈವತ್ವ ಕಾಣಬೇಕು. ಮನುಷ್ಯನಾದವು ತನ್ನ ಗಳಿಕೆಯಲ್ಲಿ ಅಲ್ಪವನ್ನಾದರೂ ಅಗತ್ಯವಿರುವವರಿಗೆ ದಾಸೋಹ ಮೂಲಕ ಹಂಚಬೇಕು ಎಂಬುದು ಸೇರಿದಂತೆ ಸಮ ಸಮಾಜದ ಎಲ್ಲ ಸಾರ ಮತ್ತು ಮಾನವೀಯ ಮೌಲ್ಯಗಳ ಎಲ್ಲ ಶರಣರ ವಚನಗಳಲ್ಲಿವೆ. ೧೨ನೇ ಶತಮಾನದಲ್ಲಿ ಶರಣರು ಮಹಿಳೆಯರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದರಲ್ಲದೇ ಅವರನ್ನು ಸಬಲೀಕರಣ ಮಾಡಿದ್ದರು. ಹೀಗಾಗಿ ಶರಣರ ವಚನಗಳು ಇಂದಿಗೂ ಪ್ರಸ್ತುತ ಎನಿಸಿ ಶ್ರೇಷ್ಠ ಎನಿಸಿವೆ ಎಂದರು.ಕಾರ್ಯಕ್ರಮ ಉದ್ಘಾಸಿದ ಶ.ಸಾ.ಪ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ.ರವಿಕುಮಾರ ಮಾತನಾಡಿ, ಶರಣರ ವಚನಗಳಲ್ಲಿರುವ ಶ್ರೇಷ್ಠತೆ ಹಾಗೂ ಪರಿಣಾಮಕಾರಿ ಅಂಶಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ನಮ್ಮ ಪರಿಷತ್ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಶ.ಸಾ.ಪ.ಅಧ್ಯಕ್ಷ ದೇವರಮನಿ ಕರಿಯಪ್ಪ ಮಾತನಾಡಿ, ಪರಿಷತ್‌ನಿಂದ ದತ್ತಿ ದಾನ ಪಡೆದು ಆ ಮೂಲಕ ಉಪನ್ಯಾಸ ಆಯೋಜಿಸಿ ಶರಣರ ವಚನಗಳ ಮಹತ್ವನ್ನು ಸಾರಲಾಗುತ್ತಿದೆ ಎಂದರು.ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಸುಜಾತಮ್ಮ ಮಾತನಾಡಿದರು. ಶಿಕ್ಷಕ ಕೆ.ಟಿ. ಸಿದ್ದರಾಮೇಶ ಪ್ರಾಸ್ತಾವಿಕ ಮಾತನಾಡಿದರು. ಪರಿಷತ್ ಪ್ರಧಾನ ಕಾರ್ಯದರ್ಶಿ ಹೊಂಬಾಳೆ ಮಂಜುನಾಥ ನಿರ್ವಹಿಸಿದರು.