ವಚನ ಸಾಹಿತ್ಯ ಕನ್ನಡ ನಾಡಿನ ದೊಡ್ಡ ಸಾಂಸ್ಕೃತಿಕ ಆಸ್ತಿ: ಸಾಹಿತಿ ಮಾ.ರೇಚಣ್ಣ

KannadaprabhaNewsNetwork |  
Published : Nov 25, 2024, 01:00 AM IST
ವಚನ ಸಾಹಿತ್ಯವು ಕನ್ನಡ ನಾಡಿನ ಬಹುದೊಡ್ಡ ಸಾಂಸ್ಕೃತಿಕ ಆಸ್ತಿ  | Kannada Prabha

ಸಾರಾಂಶ

ಕನ್ನಡಿಗರದೇ ಧರ್ಮ, ಕನ್ನಡದ ಸ್ವಂತ ಸಾಹಿತ್ಯ ಪ್ರಕಾರ, ಗದ್ಯ ಮತ್ತು ಪದ್ಯ ಎರಡೂ ಲಕ್ಷಣಗಳನ್ನು ಹೊಂದಿರುವ ವಚನ ಸಾಹಿತ್ಯವು ಕನ್ನಡ ನಾಡಿನ ಬಹುದೊಡ್ಡ ಸಾಂಸ್ಕೃತಿಕ ಆಸ್ತಿ ಎಂದು ಸಾಹಿತಿ ಮಾ.ರೇಚಣ್ಣ ಅಭಿಪ್ರಾಯಪಟ್ಟರು. ಕೊಳ್ಳೇಗಾಲದಲ್ಲಿ ‘ಕನ್ನಡ ಮಾಸಾಚರಣೆ ೨೦೨೪’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕನ್ನಡ ಮಾಸಾಚರಣೆ-2024 । ಕನ್ನಡತತಾಯಿ ಭಾವಚಿತ್ರಕ್ಕೆ ಪುಷ್ಪನಮನ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕನ್ನಡಿಗರದೇ ಧರ್ಮ, ಕನ್ನಡದ ಸ್ವಂತ ಸಾಹಿತ್ಯ ಪ್ರಕಾರ, ಗದ್ಯ ಮತ್ತು ಪದ್ಯ ಎರಡೂ ಲಕ್ಷಣಗಳನ್ನು ಹೊಂದಿರುವ ವಚನ ಸಾಹಿತ್ಯವು ಕನ್ನಡ ನಾಡಿನ ಬಹುದೊಡ್ಡ ಸಾಂಸ್ಕೃತಿಕ ಆಸ್ತಿ ಎಂದು ಸಾಹಿತಿ ಮಾ.ರೇಚಣ್ಣ ಅಭಿಪ್ರಾಯಪಟ್ಟರು.

ತಾಲೂಕಿನ ಹೊಸಮಾಲಂಗಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಆಯೋಜಿಸಿದ್ದ ‘ಕನ್ನಡ ಮಾಸಾಚರಣೆ ೨೦೨೪’ ಕಾರ್ಯಕ್ರಮವನ್ನು ಕನ್ನಡತಾಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಭಾರತವು ಬಹು ಸಂಸ್ಕೃತಿಯ ಸಂಗಮ. ಅನೇಕ ಭಾಷೆಗಳಲ್ಲಿ ಹತ್ತು ಹಲವಾರು ಸಾಹಿತ್ಯ ಪ್ರಕಾರಗಳು ಜನ್ಮ ತಾಳಿ ಪ್ರಪಂಚವನ್ನು ಬೆಳಗುವ ಕಾರ್ಯ ಮಾಡಿವೆ. ಪ್ರಬುದ್ಧವಾದ ಮತ್ತು ಸತ್ವ ಪೂರ್ಣವಾದ ಸಂದೇಶಗಳಿಂದ ಅವು ಮಾನವ ಕುಲವನ್ನು ಅಂದಿನಿಂದ ಇಂದಿನವರೆಗೂ ಕೈ ಹಿಡಿದು ನಡೆಸುತ್ತಿವೆ. ಸಾಹಿತ್ಯದಂತೆಯೂ, ಶಾಸ್ತ್ರದಂತೆಯೂ ತೋರುವ ಬಸವಾದಿ ಶರಣರ ಅನುಭವದ ಅಭಿವ್ಯಕ್ತಿಯನ್ನು ಶರಣ ಸಾಹಿತ್ಯ ಎಂತಲೂ, ವಚನ ಸಾಹಿತ್ಯ ಅಂತಲೂ ಕರೆಯುವರು ಎಂದು ಹೇಳಿದರು.

ವಚನ ಸಾಹಿತ್ಯವು ಕಾಡು ದಾರಿಯಲ್ಲಿ ಕೈಹಿಡಿದು ನಡೆಸುವ ದಾರಿ ದೀವಿಗೆಯಂತೆ, ಮಾನವ ಕುಲದ ಆಂತರಿಕ ಮತ್ತು ಬೌದ್ಧಿಕ ಬದುಕಿನ ಜೊತೆಗಾರನಿದ್ದಂತೆ. 12ನೇ ಶತಮಾನದಲ್ಲಿ ಸೃಷ್ಟಿಯಾದ ಈ ಸಾಹಿತ್ಯ ಪ್ರಕಾರ ಸಾಹಿತ್ಯಕ್ಕಾಗಿ ಸೃಷ್ಟಿಯಾದುದಲ್ಲ. ವ್ಯಕ್ತಿ ಮತ್ತು ಸಮಾಜದ ಪರಿವರ್ತನೆಗಾಗಿ. ತನ್ಮೂಲಕ ಶತ ಶತಮಾನ ಕಳೆದರೂ ಶರಣ ಸಾಹಿತ್ಯ ತನ್ನ ಪ್ರಭಾವವನ್ನು ಇನ್ನೂ ಬೀರುತ್ತಲೇ ಇದೆ. ಸರಿ ಸುಮಾರು 20 ಸಾವಿರಕ್ಕಿಂತಲೂ ಹೆಚ್ಚು ವಚನಗಳು 30 ಕ್ಕಿಂತಲೂ ಹೆಚ್ಚು ಭಾಷೆಯಲ್ಲಿ ಅನುವಾದಗೊಂಡಿರುವುದು ವಚನ ಸಾಹಿತ್ಯದ ಪ್ರಖರತೆ, ಪ್ರಸ್ತುತತೆ, ಪ್ರಾಮುಖ್ಯತೆಗೆ ಸಾಕ್ಷಿಯಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಇದನ್ನು ಬಸವಯುಗ ಎಂತಲೂ, ಸ್ವತಂತ್ರಯುಗ ಎಂತಲೂ ಕರೆಯುವರು ಎಂದು ತಿಳಿಸಿದರು.

ಜೆಎಸ್‌ಬಿ ಪ್ರತಿಷ್ಠಾನದ ಎಸ್.ಶಶಿಕುಮಾರ ಮಾತನಾಡಿ, ಭಾರತೀಯರು ಧರ್ಮವನ್ನು ಬಿಡುವುದಿಲ್ಲ, ಹಾಗಾಗಿ ಧರ್ಮದ ತಳಹದಿಯ ಮೇಲೆ ಹೊಸ ಸಮಾಜವನ್ನು ನಿರ್ಮಿಸುವ ಉದ್ದೇಶದಿಂದ ಶರಣರು ಈ ಚಳವಳಿಯನ್ನು ಆರಂಭಿಸಿದರು. ಈ ಸಾಮಾಜಿಕ ಬದಲಾವಣೆಗೆ ಒಂದು ಮಾಧ್ಯಮವಾಗಿ ವಚನ ರೂಪವನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಿ, ವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಜತೆಗೆ ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ, ಕನ್ನಡ ಓದನ್ನು ಪ್ರೋತ್ಸಾಹಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕಿ ವಸಂತಮೇರಿ, ಸಹ ಶಿಕ್ಷಕರಾದ ದೇವರಾಜು, ಹೇಮಲತಾ, ಸುನೀಲ ಗ್ಲಾಡಸನ್, ಕುಮಾರಿ, ಸಿಬ್ಬಂದಿ, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!