ಸೆ.30ರಂದು ಸಾವಿರಾರು ಜನರಿಂದ ವಚನ ಗಾಯನ

KannadaprabhaNewsNetwork |  
Published : Aug 31, 2026, 02:15 AM IST
okalipuram | Kannada Prabha

ಸಾರಾಂಶ

ವಚನ ಗಾಯನ ಲೋಕ ಶೀರ್ಷಿಕೆಯಡಿ ಸಾವಿರಾರು ಜನರಿಂದ ಸಾಮೂಹಿಕ ವಚನ ಗಾಯನ ಕಾರ್ಯಕ್ರಮವನ್ನು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ.30ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವಚನ ಗಾಯನ ಲೋಕ ಶೀರ್ಷಿಕೆಯಡಿ ಸಾವಿರಾರು ಜನರಿಂದ ಸಾಮೂಹಿಕ ವಚನ ಗಾಯನ ಕಾರ್ಯಕ್ರಮವನ್ನು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೆ.30ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಡೆದ ವಚನಗಾನ ಪರಂಪರೆ ಬೆಳೆಸಲು ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿವಮೊಗ್ಗದಲ್ಲಿ ₹30 ಲಕ್ಷ ವೆಚ್ಚದಲ್ಲಿ ಸಾಮೂಹಿಕ ವಚನ ಗಾಯನ ಕಾರ್ಯಕ್ರಮಕ್ಕೆ ಖರ್ಚಾಗಿದೆ. ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಕಾರ್ಯಕ್ರಮ ನಡೆಸುವ ಆಲೋಚನೆ ಇದೆ. ಎಲ್ಲರೂ ತನು-ಮನ-ಧನದ ಸಹಕಾರ ನೀಡಬೇಕು ಎಂದರು.

ದಾವಣಗೆರೆಯಲ್ಲಿ ಸೆ.20ರಿಂದ 28ರವರೆಗೆ ವಚನ ಗಾಯನ ತರಬೇತಿ ಇದ್ದು, ಸೆ.29ರಂದು ಅಂತಿಮ ಅಭ್ಯಾಸ ನಡೆಯಲಿದೆ. ಸೆ.30ರಂದು ಸಂಜೆ ಕಾರ್ಯಕ್ರಮ ನಡೆಸುವ ಆಲೋಚನೆ ಇದೆ. ಸಂಬಂಧಿಸಿದ ಎಲ್ಲ ಸಮಿತಿ ಸದಸ್ಯರು ಇ‍ವತ್ತಿನಿಂದಲೇ ಕಾರ್ಯ ಪ್ರವೃತ್ತರಾಗಬೇಕು. ಹಿರಿಯ ಗಾಯಕ, ಸಂಗೀತ ಸಂಯೋಜಕ ಡಾ. ಸಿ.ಅಶ್ವತ್ಥ್‌ ಸಂಯೋಜಿಸಿದ ವಚನಗಳು ಅಥವಾ ಜಂಗಮದೆಡೆಗೆ ನಾಟಕದಲ್ಲಿ ಸಂಯೋಜಿಸಿದ ವಚನಗಳು ಪೈಕಿ ಯಾವುದಾದರೂ ವಚನಗಳನ್ನು ಸಾಮೂಹಿಕ ಹಾಡಬಹುದು ಎಂದು ಹೇಳಿದರು.

ಚಿಕ್ಕಮಗಳೂರಿನ ಬಸವ ತತ್ವ ಪೀಠದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಕೆಲ ಜನರು ವಚನಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿದ್ದಾರೆ. ಮಿಥ್ಯಗಳನ್ನು ತೊಡೆದು ಹಾಕಬೇಕಾಗಿದೆ. ವಚನ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಆ್ಯಪ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ವಚನಗಳ ಮೌಲ್ಯಗಳನ್ನು ಅನುಸರಿಸುವ ಕೆಲಸವೂ ಆಗಬೇಕಾಗಿದೆ ಎಂದು ತಿಳಿಸಿದರು.

ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ಶರಣರ ವಚನಗಳನ್ನು ಏಕಕಾಲದಲ್ಲಿ ಕೇಳುವುದು ಸಂತೋಷದ ಸಂಗತಿಯಾಗಿದೆ. ವಚನ ಗಾಯನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೂ ಸೇರಿದಂತೆ 15ರಿಂದ 20 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ದಾವಣಗೆರೆ ಜಿಲ್ಲೆಯಲ್ಲೇ ಇಂತಹದ್ದೊಂದು ಅಪರೂಪದ, ವಿನೂತನ ಪ್ರಯತ್ನವೂ ಇದಾಗಲಿದೆ ಎಂದರು.

ವೇದಿಕೆ ಸಮಿತಿ, ಹಣಕಾಸು ಸಮಿತಿ, ಗಾಯನ ತರಬೇತಿ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ಸಭೆಯಲ್ಲಿ ರಚಿಸಲು ತೀರ್ಮಾನಿಸಲಾಯಿತು. ಗಾಯನ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕಳಿಸುವಂತೆ ಶಾಲಾ- ಕಾಲೇಜು ಆಡಳಿತ ಮಂಡಳಿಗಳು, ಮುಖ್ಯಸ್ಥರಿಗೆ ಮನವಿ ಮಾಡುವ ಬಗ್ಗೆಯೂ ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಯಿತು.

ಇದೇ ವೇಳೆ ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತೆ, ರಂಗಭೂಮಿ ಕಲಾವಿದೆ ಬಿ.ಸಾವಿತ್ರಮ್ಮ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ಗಾಯಕಿಯರಾದ ಯಶಾ ದಿನೇಶ, ಸುಮತಿ ಜಯಪ್ಪ, ಶಶಿಧರ ಬಸಾಪುರ, ಲಿಂಗರಾಜ, ಶಿವರಾಜ ಕಬ್ಬೂರು, ಎನ್.ಎಸ್. ರಾಜು, ಮರುಳಸಿದ್ದಯ್ಯ ಬಸವನಾಳ್, ರೂಪಾ ಗಣೇಶ, ನಿರ್ಮಲಾ ನಾಗರಾಜ, ರಾಜಶೇಖರ, ಆ‍ವರಗೆರೆ ರುದ್ರಮುನಿ ಇತರರು ಮಾತನಾಡಿದರು. ಹಲವಾರು ಸಂಘ-ಸಂಸ್ಥೆ, ಸಮಿತಿಗಳ ಮುಖಂಡರು, ಬಸವತತ್ವ ಅಭಿಮಾನಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಕಿ ಬಿಲ್ ಬಿಡುಗಡೆಗಾಗಿ ಮುಂದುವರಿದ ಗುತ್ತಿಗೆದಾರರ ಪ್ರತಿಭಟನೆ
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯಿಂದ ಮಲಗುಂಡಿ ಸ್ವಚ್ಛತೆ