- ವಯನಾಡಿನ ವರ, ಶ್ರೀರಂಗಪಟ್ಟಣದ ವಧುವಿನ ಸರಳ ವಿವಾಹ । ಅರ್ಥಪೂರ್ಣ ವಿವಾಹಕ್ಕೆ ಕುಟುಂಬ ಸದಸ್ಯರು ಸಾಕ್ಷಿ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಆಢಂಬರ, ತೋರ್ಪಡಿಕೆ ಹಾಗೂ ಅನವಶ್ಯಕ ಖರ್ಚುಗಳ ಮದುವೆಗಳ ನಡುವೆಯೇ ತಾಲೂಕಿನಲ್ಲೊಂದು ಸರಳ, ಸಜ್ಜನಿಕೆಯ ವಚನ ಕಲ್ಯಾಣ ನಡೆದಿದೆ. ಕೇರಳದ ವರ ಮತ್ತು ಮಂಡ್ಯದ ವಧು ಸೇರಿ ಇಲ್ಲಿನ ಮೂಡುಗೂರು ವಿರಕ್ತ ಮಠದಲ್ಲಿ ಸರಳ ರೀತಿಯಲ್ಲಿ ವಚನ ಕಲ್ಯಾಣ ಮಾಡಿಕೊಂಡಿದ್ದು, ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಕೇರಳದ ವಯನಾಡು ಜಿಲ್ಲೆಯ ಆಂಡೂರಿನ ಕನ್ನಡಿಗ ಮಾಚಪ್ಪ ಹಾಗೂ ರೇಣುಕಾ ದಂಪತಿಗಳ ಮಗ ಸಂಗಮೇಶ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅಪ್ಪಾಜಿ ಹಾಗೂ ರೇಖಾ ಅವರ ಪುತ್ರಿ ಐಶ್ವರ್ಯಾ ನವ ವಧುವರರು. ಮೂಡುಕೂಡು ವಿರಕ್ತ ಮಠದಲ್ಲಿ ಧರ್ಮ ಗುರು ಬಸವಣ್ಣ ಹಾಗೂ ಶರಣರ ಆಶಯದಂತೆ ವಚನ ಕಲ್ಯಾಣವಾಗಿದ್ದಾರೆ.
ಶ್ರೀಗಳ ಸಮ್ಮುಖದಲ್ಲಿ ನಡೆದ ಸರಳ ವಿವಾಹದಲ್ಲಿ ನವ ವಧು-ವರರು ಇಷ್ಟಲಿಂಗ ಪೂಜೆ ನೆರವೇರಿಸಿ, ಧರ್ಮ ಧ್ವಜಾರೋಹಣ ಮಾಡಿದ ಬಳಿಜ ಧರ್ಮ ಗುರು ಬಸವಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.
ಬಳಿಕ ಮಾತನಾಡಿದ ಮಠಾಧೀಶ ಇಮ್ಮಡಿ ಉದ್ಧಾನ ಸ್ವಾಮೀಜಿ, ‘ಹಣ ಹಾಗೂ ಸಮಯವನ್ನು ಅಪಮೌಲ್ಯಗೊಳಿಸದೆ ಬಳಸಬೇಕು. ದುಬಾರಿ ಮದುವೆಯಲ್ಲಿ ಎರಡು ಮನ-ಮನೆ-ಊರು ಸೇರಲು ಸಾಧ್ಯವಿಲ್ಲ. ಈ ಮದುವೆಯಲ್ಲಿ ಎರಡು ಕುಟುಂಬಗಳು, ಸ್ನೇಹಿತರು, ಬಂಧು-ಬಳಗವಷ್ಟೆ ಭಾಗವಹಿಸಿ ಸಂಭ್ರಮಿಸಿದ್ದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ನವ ದಂಪತಿಗಳಿಗೆ ಶುಭ ಹಾರೈಸಿ ಬಸವಣ್ಣನ ಭಾವಚಿತ್ರ ಕೊಟ್ಟು ಬೀಳ್ಕೊಟ್ಟು ಆಶೀರ್ವದಿಸಿದರು.
ವಚನ ಮಾಂಗಲ್ಯದಲ್ಲಿ ಹೂರದಹಳ್ಳಿ ಪ. ಪರಮೇಶ್ವರಪ್ಪ, ಬಲಚವಾಡಿ ಬಿಕ್ಷದ ಮಠದ ಶ್ರೀ ಸೇರಿದಂತೆ ನವ ವಧುವರರ ಸಂಬಂಧಿಕರು ಹಾಗೂ ಸ್ನೇಹಿತರು ಇದ್ದರು.
ಏನಿದು ವಚನ ಕಲ್ಯಾಣ?ಬಸವಾದಿ ಪ್ರಮಥರು ಕಲ್ಪಿಸಿದ ವಿವಾಹ ಪದ್ಧತಿ.ವಧು ವರರು ಒಪ್ಪಿದರೆ, ಅದಕ್ಕೆ ಹೆತ್ತವರು ಸಮ್ಮತಿ ಇತ್ತರೆ, ಗುರು ಹಿರಿಯರು ಆಶೀರ್ವದಿಸಿದಬೇಕು. ಪಂಚಾಗದ ಹಂಗಿಲ್ಲ. ರಾಶಿಕೂಟ, ಗಣ ಸಂಬಂಧ ನೋಡಬೇಕಿಲ್ಲ. ಅನುಕೂಲವಾದ ದಿನದಂದು ಗುರು- ಲಿಂಗ- ಜಂಗಮ ಸಾಕ್ಷಿಯಾಗಿ ವಿಭೂತಿ, ರುದ್ರಾಕ್ಷಿ, ಪ್ರಸಾದ, ಪಾದೋದಕ, ಮಂತ್ರದ ಅರ್ಥಗಳನ್ನು ಮೂಲಕ ವಚನಗಳ ಹೇಳುವ ಮೂಲಕ ವಧು-ವರರ ಕುಟುಂಬದ ಸಮ್ಮುಖದಲ್ಲಿ ಅತ್ಯಂತ ಸರಳವಾಗಿ ಪ್ರಮಾಣ ವಚನ ಬೋಧಿಸುವುದು. ಸಭಾ ಸಮ್ಮತಿಯೊಂದಿಗೆ ಮಾಂಗಲ್ಯಧಾರಣೆಯೊಂದಿಗೆ ಮುಗಿಸುವ ಕಲಾಪ ಇದು.ಇದರಲ್ಲಿ ವೈದಿಕ ವಿಧಿ ವಿದಾನಗಳಿಲ್ಲ. ಕಾಶೀಯಾತ್ರೆ, ಕಳಸಪೂಜೆ, ಫಲಪೂಜೆ, ಕಂಕಣಧಾರಣೆ, ಅರುಂಧತಿ ದರ್ಶನ, ಅಕ್ಷತೆ ಬಳಕೆ, ಅರಿಶಿನ ಕುಂಕುಮದ ಅಗತ್ಯವಿಲ್ಲ. ಪ್ರಸಾದರೂಪದ ಒಂದು ಉಪಾಹಾರ, ಒಂದು ಭೋಜನ ಮೂರ್ನಾಲ್ಕು ತಾಸಿನಲ್ಲಿ ಮುಗಿಯುವ ಮದುವೆ ಇದು. ಇಂದಿನ ದಿನಗಳಿಗೆ ದುಬಾರಿ ಖರ್ಚು ವೆಚ್ಚಗಳಿಲ್ಲದ ಈ ಸುಂದರ ಪದ್ಧತಿಯನ್ನು ಯುವ ಜನತೆ ಆಯ್ಕೆ ಮಾಡಿಕೊಂಡರೆ ಒಳ್ಳೆಯದು.---
ಮೂಡುಗೂರು ಮಠದಲ್ಲಿ ಶ್ರೀಗಳ ಸಮ್ಮುಖದಲ್ಲಿ ನವ ವಧುವರರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.