ಶಿವಶರಣೆಯರ ವಚನಗಳು ಜನಸಾಮಾನ್ಯರ ಬದುಕಿಗೆ ಹತ್ತಿರ: ಎಸ್.ಎಂ. ಸಿದ್ದರಾಜಪ್ಪ

KannadaprabhaNewsNetwork |  
Published : May 20, 2025, 11:58 PM IST
ಬಸವ ಜಯಂತಿ ಕಾರ್ಯಕ್ರಮ ಉದ್ಘಾಟನೆ ಸಂದರ್ಭ | Kannada Prabha

ಸಾರಾಂಶ

ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಕೂಡ ಮಹತ್ವದ ಕೊಡುಗೆ ನೀಡಿದೆ ಎಂದು ಎಸ್‌. ಎಂ. ಸಿದ್ದರಾಜಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಬಸವಣ್ಣನವರ ಹಾಗೂ ಶಿವಶರಣೆಯರ ವಚನಗಳು ಜನಸಾಮಾನ್ಯರ ಬದುಕಿಗೆ ಹತ್ತಿರವಾಗಿವೆ. ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ವಚನ ಸಾಹಿತ್ಯವು ಕನ್ನಡ ಸಾಹಿತ್ಯಕ್ಕೆ ಕೂಡ ಮಹತ್ವದ ಕೊಡುಗೆ ನೀಡಿದೆ‌ ಎಂದು ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ‌ ಪ್ರೌಢಶಾಲಾ ವಿಭಾಗದ ‌ಉಪ ಪ್ರಾಂಶುಪಾಲ ಎಸ್.ಎಂ ಸಿದ್ದರಾಜಪ್ಪ ಹೇಳಿದರು.

ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ ಕುಶಾಲನಗರ ತಾಲೂಕು ಘಟಕದ ವತಿಯಿಂದ ಕುಶಾಲನಗರ‌ದಿಲ್ಲಿ ಏರ್ಪಡಿಸಿದ್ದ ಐದನೇ ವರ್ಷದ ಬಸವ ಜಯಂತಿ ಕಾರ್ಯಕ್ರಮದಲ್ಲಿ 12ನೇ ಶತಮಾನದ ‌ವಚನ ಸಾಹಿತ್ಯ ಹಾಗೂ ಶಿವ ಶರಣ- ಶರಣೆಯರ ಕೊಡುಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಭಕ್ತಿ ಭಂಡಾರಿ, ಮಹಾನ್ ಮಾನವತಾವಾದಿ ಹಾಗೂ ಸಾಮಾಜಿಕ ಕ್ರಾಂತಿ ಪುರುಷ ಜಗಜ್ಯೋತಿ ಬಸವಣ್ಣನವರ ವಚನಗಳು ಸಾರ್ವಕಾಲಿಕ ಸತ್ಯವನ್ನು ಸಾರುತ್ತವೆ. ಬಸವಣ್ಣನವರ ಸಾರಥ್ಯದಲ್ಲಿ 12ನೇ ಶತಮಾನದಲ್ಲಿ‌ ನಡೆದ ವಚನ ಚಳವಳಿಯು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು ಎಂದರು.

ಜಾತಿ ರಹಿತ ಮತ್ತು ವರ್ಗರಹಿತ ಸಮಾಜದ ಕಲ್ಪನೆಯನ್ನು ಜಗತ್ತಿಗೆ ತೋರಿಸಿದವರು ಬಸವಣ್ಣನವರು. ಕಾಯಕವೇ ಕೈಲಾಸ ಎಂಬ ತತ್ವದೊಂದಿಗೆ ಆರೋಗ್ಯವಂತ ಸಮಾಜಕ್ಕೆ ಅಡಿಪಾಯ ಹಾಕಿದವರು ಬಸವೇಶ್ವರರು ಎಂದು ಸಿದ್ದರಾಜಪ್ಪ ಬಣ್ಣಿಸಿದರು.

ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ, ಅದರಲ್ಲಿ ಎಲ್ಲ ವರ್ಗಗಳ ವಚನಕಾರರ ಕಾಯಕ ಸಮಾಜವನ್ನು ನಿರ್ಮಾಣ ಮಾಡಿದ್ದಾರೆ. ಪ್ರತಿಯೊಬ್ಬರೂ ಬಸವಣ್ಣನವರ ಆದರ್ಶಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತೊರೆನೂರು ವಿರಕ್ತಮಠದ ಮಲ್ಲೇಶ ಸ್ವಾಮೀಜಿ ಮಾತನಾಡಿ, ಬಸವಣ್ಣನವರಂತಹ ಪರಮಜ್ಞಾನಿಗಳ ವಚನಗಳನ್ನು ಕೇಳಿ ಪಾಲಿಸಿದರೆ ಪ್ರತಿಯೊಬ್ಬರ ಬದುಕು ಹಸನಾಗುತ್ತದೆ. ಮೌಲ್ಯಯುತವಾದ ವಚನ ಸಾಹಿತ್ಯವನ್ನು ಮಕ್ಕಳಿಗೆ ಬಾಲ್ಯದಿಂದಲೇ ಬೋಧಿಸುವ ಕೆಲಸದಲ್ಲಿ ಪೋಷಕರ ಪಾತ್ರವು ಪ್ರಮುಖವಾಗಿದೆ ಎಂದು ಹೇಳಿದರು.

ತಾಲೂಕು ಘಟಕ ಅಧ್ಯಕ್ಷರಾದ ಎಚ್.ಎಂ. ಮಧುಸೂದನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶನಿವಾರಸಂತೆ ಶಿಡಿಗಳಲೆ ಮಠ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲ ದೇಶಿ ಕೇಂದ್ರ ಸ್ವಾಮೀಜಿ, ಅರಕಲಗೂಡು ಚಿಲುಮೆ ಮಠದ ಜಯದೇವ ಸ್ವಾಮೀಜಿ, ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ, ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಮಾತನಾಡಿದರು.

ಜಿಲ್ಲಾ ವೀರಶೈವ- ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಎಸ್.ನಂದೀಶ್, ಸಮಾಜ ಸೇವಕ ಕೆ.ಎನ್. ವಸಂತ್, ಮಹಾಸಭಾದ ವಿವಿಧ ಘಟಕಗಳ ಪ್ರಮುಖರಾದ ಎಂ.ಎಸ್. ಶಿವಾನಂದ, ಶುಭಶೇಖರ್, ಧರ್ಮೇಂದ್ರ, ಕೆ.ಯು.ಎಂ. ಬಸವರಾಜ್, ಆದರ್ಶ್, ಎನ್.ಎಂ. ರಾಜೇಶ್, ರುದ್ರ ಪ್ರಸನ್ನ, ದೀಪಿಕಾ ಕರುಣ್, ಕಮಲಾ ಉದಯಕುಮಾರ್, ಮನು ಜಗದೀಶ್, ಎಂ.ಕೆ. ಧನರಾಜ್, ಸುಶೀಲಮ್ಮ ಬಸವರಾಜ್, ಬಿ.ಬಿ. ಲೋಕೇಶ್, ವಿ.ಸಿ.ಅಜಿತ್, ವಿಜಯ ಪಾಲಾಕ್ಷ, ಸರೋಜ ಆರಾಧ್ಯ ಇದ್ದರು.

ಶಿಕ್ಷಕಿಯರಾದ ಎಚ್.ಎಸ್. ಉಮಾದೇವಿ ಸ್ವಾಗತಿಸಿದರು. ಟಿ.ವಿ.ಶೈಲಾ, ಬಿ.ಬಿ.ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ವಿದ್ಯಾ ಅಜಿತ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ