ಹೊಸಪೇಟೆ: ವಿಮರ್ಶೆ ಮತ್ತು ಸಂಶೋಧನೆಗೆ ಅಪಾರವಾದ ಓದು ಬೇಕು. ಇಂತಹ ಬೆರಗಿನ ಓದು ಓ.ಎಲ್. ನಾಗಭೂಷಣ ಸ್ವಾಮಿ ಅವರಿಗೆ ಇತ್ತು. ಒಂದು ದಿನಕ್ಕೆ ಒಂದು ಸಾವಿರ ಪುಟಗಳನ್ನು ಓಎಲ್ಎನ್ ಓದುತ್ತಾರೆ ಎಂದರೆ ನಂಬಲೇಬೇಕು ಎಂದು ಕಥೆಗಾರ ಪ್ರೊ. ಅಮರೇಶ ನುಗಡೋಣಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಮಂಗಳವಾರ ನಡೆದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಮತ್ತು ಅಭಿನವ ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆನು ಒಲಿದಂತೆ ಹಾಡುವೆ, ಕನ್ನಡ ಮನಸ್ಸಿನೊಂದಿಗೆ ಒಂದು ದಿನ ಸಂವಾದ ಕಾರ್ಯಕ್ರಮದಲ್ಲಿ ಓ.ಎಲ್.ನಾಗಭೂಷಣ ಸ್ವಾಮಿ: ವಚನ ಸಾಹಿತ್ಯ ಕುರಿತು ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಅವರು ಕನ್ನಡ ವಿಮರ್ಶೆ ಬರೆದಿದ್ದಾರೆ. ವಚನಗಳಲ್ಲಿ ಕೃತಿನಿಷ್ಠ ಓದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಭಾಷೆಯನ್ನು ಬಹಳ ಸೂಕ್ಷ್ಮವಾಗಿ ಓದಬಲ್ಲ ವ್ಯಕ್ತಿತ್ವ ಅವರದು. ವಚನ ಸಾಹಿತ್ಯದಲ್ಲಿ ಬಹಳಷ್ಟು ಆಲೋಚನೆ ಮಾಡುವುದು ಇದೆ. ಕಾಲ ಕಳೆದಂತೆ ವಚನಗಳು ಜೀವಂತವಾಗಿ ನಮ್ಮನ್ನು ಓದಲು ಹೇಳುತ್ತವೆ ಎಂಬ ನೆಲೆಯಲ್ಲಿ ಓ.ಎಲ್.ಎನ್. ತಮ್ಮ ಕೃತಿಗಳನ್ನು ರೂಪಿಸಿದ್ದಾರೆ. ಪ್ರಕ್ಷೇಪಗಳಿಲ್ಲದೇ ವಚನಗಳನ್ನು ಹೇಗೆ ಓದಬಹುದು ಎಂದರು.ಓ.ಎಲ್.ನಾಗಭೂಷಣ ಸ್ವಾಮಿ ವಚನಗಳನ್ನು ಹಿಂದಿನ ಓದಿನ ತಳಹದಿಯ ಮೇಲೆ ಬರೆಯದೇ ತಾವೇ ಒರಿಜಿನಲ್ ಆಗಿ ಬರೆಯುವುದು ಅಚ್ಚರಿ ತರುತ್ತದೆ. ವಚನಗಳು ಸುಲಭ ಓದು ಎಂಬ ಬೀಸು ಹೇಳಿಕೆ ಇದೆ. ಆದರೆ ಓ.ಎಲ್.ಎನ್. ಇವತ್ತಿಗೂ ವಚನಗಳಲ್ಲಿರುವ ಕಠಿಣ ಪದಗಳಿಗೆ ಪದಕೋಶ ಬೇಕು ಎಂದು ಹೇಳುತ್ತಾರೆ. ವಚನಗಳಲ್ಲಿ ಸಂಸ್ಕೃತ ಪದಗಳು ಅನಂತರ ಸೇರ್ಪಡೆಯಾಗಿವೆ ಎಂದು ತಮ್ಮ ಶೋಧದಲ್ಲಿ ಓಎಲ್ಎನ್ ಳಿಸಿದ್ದಾರೆ ಎಂದರು.
ತುಮಕೂರು ವಿಶ್ವವಿದ್ಯಾಲಯದ ಪ್ರೊ.ಎನ್.ಎಸ್. ಗುಂಡೂರು ಅವರು ಓ.ಎಲ್. ನಾಗಭೂಷಣ ಸ್ವಾಮಿ : ಅನುವಾದ ಸಾಹಿತ್ಯ ಕುರಿತು ಮಾತನಾಡಿ, ಓ.ಎಲ್.ಎನ್. ಅವರು ಗುಣಾತ್ಮಕ ಓದುಗರಾಗಿ ಬಹಳ ಮುಖ್ಯವಾಗುತ್ತಾರೆ. ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳನ್ನು ಕನ್ನಡಕ್ಕೆ ದುಡಿಸಿಕೊಳ್ಳುವ ಬಗೆಯಿಂದ ಬಹಳ ಮುಖ್ಯರಾಗುತ್ತಾರೆ ಎಂದರು.ಓ.ಎಲ್.ಎನ್. ನಾಗಭೂಷಣ ಸ್ವಾಮಿ ಮಾತನಾಡಿ, ಪ್ರಯಾಣ ಮಾಡದೇ ಊರು ತಲುಪುವ ಹಾಗಿದೆ ಇಂದಿನ ಶಿಕ್ಷಣ. ಅನುವಾದ ಮಾಡುವಾಗ ಭಾಷೆ ಮುಖ್ಯ ಅಲ್ಲ, ಕೃತಿಯ ಭಾವ, ಲಯವನ್ನು ನಮ್ಮ ಭಾಷೆಯಲ್ಲಿ ಹಿಡಿಯಬೇಕು. ಅನುವಾದ ಮಾಡುವಾಗ ಇರುವುದನ್ನು ಬಿಡದೇ ಇಲ್ಲದಿರುವುದನ್ನು ಹೇಳದೇ ಕನ್ನಡಕ್ಕೆ ನಿಷ್ಠೆಯಿಂದ ಕೆಲಸ ಮಾಡಬೇಕು. ಭಾಷೆ ಬೇರೆಯಾದರೂ ಮನುಷ್ಯನ ಅನುಭವಗಳು ಒಂದೇ ಆಗಿರುತ್ತವೆ. ನಮ್ಮದಲ್ಲದ ಕಾಲದಲ್ಲಿ ನಮ್ಮದಲ್ಲದ ಭಾಷೆಯಲ್ಲಿ ನಮ್ಮನ್ನು ನೋಡಿಕೊಳ್ಳಬೇಕು ಎಂದರು.
ಕನ್ನಡ ವಿವಿ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ಕನ್ನಡ ಭಾಷಾಂತರ ವಿಭಾಗವು ಅನಾಥವಾಗಿದೆ. ಸರ್ಕಾರದ ನೀತಿ, ನಿಯಮಗಳು ಇದಕ್ಕೆ ಕಾರಣವಾಗಿದೆ. ವಿಭಾಗದಲ್ಲಿರುವ ಸಂಶೋಧನಾರ್ಥಿಗಳಿಂದ ಸ್ವಲ್ಪ ಜೀವಂತಿಕೆ ಇದೆ. ಅವರು ಪದವಿ ಪಡೆದು ಹೊರಟು ಹೋದರೆ ಮುಂದೇನು ಎಂಬ ಕತ್ತಲೆಯ ಪ್ರಶ್ನೆಯಿದೆ. ಸಂಶೋಧನಾ ವಿಶ್ವವಿದ್ಯಾಲಯ ಆಗಿರುವುದರಿಂದ ಅತಿಥಿ ಉಪನ್ಯಾಸಕರಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಯುಜಿಸಿ ನಿಯಮದಲ್ಲಿ ಅವಕಾಶವಿಲ್ಲ. ಈಗ 37 ಅಧ್ಯಾಪಕರು ವಿಶ್ವವಿದ್ಯಾಲಯದಲ್ಲಿದ್ದಾರೆ. ಎರಡು ವರ್ಷಗಳಿಂದ ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಮಾಡಿದರೂ ಯಾವ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಇವತ್ತಿಗಿಂತಲೂ ಮುಂದೆಯೂ ಹೆಚ್ಚು ಅಪಾಯ ಇರುವ ಸಾಧ್ಯತೆ ಇದೆ. ಕನ್ನಡದ ಮನಸ್ಸುಗಳು ಈ ಬಗ್ಗೆ ಯೋಚಿಸಬೇಕಾಗಿದೆ ಎಂದರು.ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಮಾತನಾಡಿದರು.
ಸಂಶೋಧನಾರ್ಥಿ ಮಂಜುನಾಥ, ಗುರುರಾಜ ಎನ್., ಆನಂದ ನಿರ್ವಹಿಸಿದರು.