ಲಕ್ಷ್ಮೀ ವೆಂಕಟೇಶ್ವರ, ನರಸಿಂಹ,ಭೂ ವರಾಹನಾಥ ದೇವಾಲಯಗಳಲ್ಲಿ ಅಭಿಷೇಕ, ವಿಶೇಷ ಪೂಜಾ ಕೈಂಕರ್ಯ । ಸಾವಿರಾರು ಭಕ್ತಾದಿಗಳ ದರ್ಶನ । ಮಾಜಿ ಸಚಿವ,ಶಾಸಕ, ಜನಪ್ರತಿನಿಧಿಗಳ ಕುಟುಂಬಗಳಿಂದಲೂ ಪೂಜಾ ಸೇವೆ
ಕನ್ನಡಪ್ರಭ ವಾರ್ತೆ ಭಾರತೀನಗರಕೆ.ಎಂ.ದೊಡ್ಡಿಯ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಸಾವಿರಾರು ಭಕ್ತರು ಪೂಜೆ ಸಲ್ಲಿಸಿದರು.
ಮುಂಜಾನೆ 4.30ರ ವೇಳೆ ವೈಕುಂಠದ್ವಾರ ಪ್ರವೇಶದೊಂದಿಗೆ ಶ್ರೀವೆಂಕಟೇಶ್ವರಸ್ವಾಮಿಗೆ ಅಷ್ಟವದನ ಸೇವೆ ಮತ್ತು ಮಹಾಮಂಗಳಾರತಿ ಜರುಗಿತು. ನಂತರ ವೈಕುಂಠ ಏಕಾದಶಿ ಪೂಜೆ ಪ್ರಯುಕ್ತ ವೈಕುಂಠ ದ್ವಾರ ತೆರೆದು ಪೂಜೆ ಮಾಡಲಾಯಿತು. ವೈಕುಂಠದ್ವಾರದ ಪಕ್ಕ ವಿಶೇಷವಾಗಿ ಶ್ರೀ ಲಕ್ಷ್ಮೀ ನಾರಾಯಣ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಾಧಿಗಳಿಗೆ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶ್ರೀ ವೆಂಕಟೇಶ್ವರ ಮೂರ್ತಿಗೆ ವಿಶೇಷ ಆಭರಣಗಳಿಂದ ಅಲಂಕಾರಗೊಳಿಸಿ ದೇವಸ್ಥಾನದ ಸುತ್ತ ವಿವಿಧ ಬಗೆಯ ಪುಷ್ಪಗಳಿಂದ ಶೃಂಗಾರಗೊಳಿಸಲಾಯಿತು.ಪೂಜಾ ಕೈಕಂಕರ್ಯದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಶಾಸಕ ಕೆ.ಎಂ.ಉದಯ್, ಭಾರತೀ ಎಜುಕೇಷನ್ ಟ್ರಸ್ಟ್‌ನ ಸಿಇಓ ಆಶಯ್ ಜಿ.ಮಧು ಸೇರಿ ಹಲವು ಗಣ್ಯರು, ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿದ್ದರು.
ಹಂಗರಹಳ್ಳಿ ಶ್ರೀವಿದ್ಯಾ ಚೌಡೇಶ್ವರಿ ಮಹಾಸಂಸ್ಥಾನ ಮಠದ ಶ್ರೀ ಬಾಲಮಂಜುನಾಥ ಮಹಾಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ನಮ್ಮ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಯನ್ನು ಬಿಡಬಾರದು. ಯೋಗ್ಯದ ಭಾಗ್ಯಗಳಿಗೆ ಮಣೆ ಹಾಕಬೇಕೇ ಹೊರತು ಪುಕ್ಕಟ್ಟೆ ಭಾಗ್ಯಗಳಿಗೆ ಮಣೆಹಾಕಬಾರದು ಎಂದರು.ಭಾರತೀನಗರವು ಸುತ್ತಮುತ್ತಲ ಹಳ್ಳಿಗಳಿಗೆ ಕೇಂದ್ರ ಸ್ಥಳವಾಗಿರುವುದರಿಂದ ಸುಮಾರು 25ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತಾಧಿಗಳಿಗೆ ಪ್ರಸಾದವಾಗಿ ಕಜ್ಜಾಯ, ಬಾಳೆಹಣ್ಣು, ಬಾದಾಮಿ ಹಾಲು ವಿತರಿಸಲಾಯಿತು. ಅರ್ಚಕ ಗೋಪಾಲಕೃಷ್ಣ ಭಟ್ ಹಾಗೂ ಅನಂತಕೃಷ್ಣ ಭಟ್ , ಯು.ವಿ.ಗಿರೀಶ್ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು.
ವೈಕುಂಠ ಏಕಾದಶಿ ಪೂಜಾ ಮಹೋತ್ಸವದ ಅಂಗವಾಗಿ ಸೋಮು ಮತ್ತು ತಂಡದವರಿಂದ ವಾದ್ಯಗೋಷ್ಠಿ, ಬೆಳಗ್ಗೆ 10.30 ಗಂಟೆಗೆ ವಿಜಯಪುರ ವಿಶ್ವ ವಿಜೇತ ಸ್ವಾಮಿ ವಿವೇಕಾನಂದ ಯುವ ಬಳಗದಿಂದ ಶ್ರೀ ವೆಂಕಟೇಶ್ವರ ಲೀಲಾ ವೈಭವ ಎಂಬ ವಿನೂತನ ಗಾನಸಹಿತ ಪ್ರವಚನ, ಮಧ್ಯಾಹ್ನ 2 ಗಂಟೆಗೆ ಕುಣಿಗಲ್ ಬಲರಾಮು ಅವರಿಂದ ಶ್ರೀ ರಾಮಸ್ಮರಣೆ, ಶ್ರೀರಂಗಸಿರಿ ಕಲಾ ಸೇವಾಟ್ರಸ್ಟ್ ಮತ್ತು ನಾಡಪ್ರಭು ಕೆಂಪೇಗೌಡರ ಕಲಾ ಟ್ರಸ್ಟ್‌ರವರಿಂದ ಶ್ರೀನಿವಾಸ ಕಲ್ಯಾಣ ಅಥವಾ ಪದ್ಮಾವತಿ ಪರಿಣಯ ಎಂಬ ಭಕ್ತಿಮಯ ಪೌರಾಣಿಕ ನಾಟಕ ನಡೆಯಿತು. ಶ್ರೀವೆಂಕಟೇಶ್ವರ ದೇವಸ್ಥಾನದ ಪದಾಧಿಕಾರಿಗಳು ಅಚ್ಚುಕಟ್ಟಾಗಿ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮಗಳು ನಡೆಯಲು ನೆರವಾದರು.-------
ಭಾರತೀನಗರದ ಶ್ರೀವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಶ್ರೀವೆಂಕಟೇಶ್ವರ ಮೂರ್ತಿಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು.--- ವೈಕುಂಠ ಏಕಾದಶಿ ಅಂಗವಾಗಿ ನಡೆದ ಪೂಜೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರನ್ನು ಅಭಿನಂದಿಸಲಾಯಿತು.
--ವೈಕುಂಠ ಏಕಾದಶಿ ಅಂಗವಾಗಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಹಂಗರಹಳ್ಳಿ ಶ್ರೀ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನ ಮಠದ ಶ್ರೀ ಬಾಲಮಂಜುನಾಥ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿದರು.