ಎಲ್ಲ ಶಾಲೆಗಳಲ್ಲೂ ಭಗವದ್ಗೀತೆ ಕಲಿಸುವಂತಾಗಲಿ

KannadaprabhaNewsNetwork |  
Published : Dec 24, 2023, 01:45 AM IST
ಭಗವದ್ಗೀತಾ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲದ ಹುಬ್ಬಳ್ಳಿ ಉಪವಲಯದ ನಿರ್ದೇಶಕ ಡಾ. ಬಸವರಾಜ ರಾಜಋಷಿ ಚಾಲನೆ ನೀಡಿದರು. | Kannada Prabha

ಸಾರಾಂಶ

ವಿವಿಧ ಧರ್ಮದ ಶ್ರೇಷ್ಠ ಗ್ರಂಥಗಳಲ್ಲಿ ಇರುವ ಮಹಾನ್ ಸತ್ಯಗಳು, ನೈತಿಕ ಮೌಲ್ಯಗಳು ಹಾಗೂ ಲೌಕಿಕ ಜ್ಞಾನವನ್ನು ಭಾರತೀಯ ಸಂಸ್ಕೃತಿಯ ಪ್ರತೀಕದಂತಿರುವ ಭಗವದ್ಗೀತಾ ಗ್ರಂಥ ಒಳಗೊಂಡಿದೆ. ಪ್ರತಿಯೊಬ್ಬರು ಭಗವದ್ಗೀತಾ ಅಧ್ಯಯನ ಮಾಡುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಅರಿತುಕೊಳ್ಳಬೇಕು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲದ ಹುಬ್ಬಳ್ಳಿ ಉಪವಲಯದ ನಿರ್ದೇಶಕ ಡಾ. ಬಸವರಾಜ ರಾಜಋಷಿ ಹೇಳಿದರು.

ಭಗವದ್ಗೀತಾ ಜಯಂತ್ಯುತ್ಸವದಲ್ಲಿ ಡಾ. ಬಸವರಾಜ ರಾಜಋಷಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಾಡಿನ ಎಲ್ಲ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ಕಲಿಸುವ ಕಾರ್ಯವಾಗಬೇಕಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲದ ಹುಬ್ಬಳ್ಳಿ ಉಪವಲಯದ ನಿರ್ದೇಶಕ ಡಾ. ಬಸವರಾಜ ರಾಜಋಷಿ ಹೇಳಿದರು.

ಇಲ್ಲಿನ ಭೈರಿದೇವರಕೊಪ್ಪದ ಓಂ ಶಾಂತಿ ನಗರದಲ್ಲಿರುವ ಭಗವದ್ಗೀತಾ ಜ್ಞಾನಲೋಕದಲ್ಲಿ ಶನಿವಾರ ಸಂಜೆ ಭಗವದ್ಗೀತಾ 5161ನೇ ಜಯಂತಿ ಮಹೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿವಿಧ ಧರ್ಮದ ಶ್ರೇಷ್ಠ ಗ್ರಂಥಗಳಲ್ಲಿ ಇರುವ ಮಹಾನ್ ಸತ್ಯಗಳು, ನೈತಿಕ ಮೌಲ್ಯಗಳು ಹಾಗೂ ಲೌಕಿಕ ಜ್ಞಾನವನ್ನು ಭಾರತೀಯ ಸಂಸ್ಕೃತಿಯ ಪ್ರತೀಕದಂತಿರುವ ಭಗವದ್ಗೀತಾ ಗ್ರಂಥ ಒಳಗೊಂಡಿದೆ. ಪ್ರತಿಯೊಬ್ಬರು ಭಗವದ್ಗೀತಾ ಅಧ್ಯಯನ ಮಾಡುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಪ್ರಸ್ತುತ ವರ್ತಮಾನ ಹಾಗೂ ವಿಜ್ಞಾನದ ಅಮಲಿನಲ್ಲಿರುವ ಇಂದಿನ ಯುವಜನತೆ ಭಾರತೀಯ ಸಂಸ್ಕೃತಿ-ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಗಳನ್ನು ಮರೆಯುತ್ತಿದ್ದಾರೆ. ಗುರು-ಹಿರಿಯರು ಹಾಗೂ ಮಾತಾ-ಪಿತರಿಗೆ ವಿಧೇಯತೆ ಮತ್ತು ಗೌರವ ತೋರುವ ಮನೋಭಾವ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾವ್ಯಚೂಡಾಮಣಿ ಡಾ. ವೇಣಿಮಾಧವಶಾಸ್ತ್ರೀ ಜೋಶಿ ಉಪನ್ಯಾಸ ನೀಡಿ, ಶ್ರೀಕೃಷ್ಣನು ಸಾಕ್ಷಾತ್‌ ಈಶ್ವರನ ಸ್ವರೂಪ. ಪರಮಾತ್ಮನನ್ನು ನಿರಾಕಾರ, ಸಾಕಾರ ಎಂಬ ಎರಡು ರೂಪದಲ್ಲಿ ಕಾಣಬಹುದಾಗಿದೆ. ನಿರಾಕಾರದ ಪ್ರತಿರೂಪವಾಗಿರುವ ಚೈತನ್ಯ ಶಕ್ತಿಯೇ ಶ್ರೀಕೃಷ್ಣನ ಅವತಾರ. ಈ ಚೈತನ್ಯ ಶಕ್ತಿಯಿಂದಲೇ ಈ ಜಗತ್ತು ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ಧಾರವಾಡದ ವಾಚಸ್ಪತಿಶಾಸ್ತ್ರೀ ಜೋಶಿ, ಸೂರ್ಯನಾರಾಯಣ ಭಟ್‌, ಹುಬ್ಬಳ್ಳಿ ವೇದಪೀಠಂನ ಡಾ. ಕಂಠಪಲ್ಲಿ ಸಮೀರಾಚಾರ್ಯರು, ಚಿತ್ರದುರ್ಗದ ಬ್ರಹ್ಮಕುಮಾರಿ ಶಿವರಶ್ಮಿ, ರಾಯಚೂರಿನ ಬ್ರಹ್ಮಕುಮಾರಿ ಸ್ಮೀತಾ ಅವರಿಂದ ಉಪನ್ಯಾಸ ನೆರವೇರಿತು. ವಿವಿಯ ಸಂಚಾಲಕರಾದ ಬ್ರಹ್ಮಕುಮಾರಿ ನಿರ್ಮಲಾ, ವೀಣಾ, ಜಯಂತಿ, ಲೀಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜ್ಯಪಾಲರ ಸಂದೇಶ

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಬೇಕಿದ್ದ ರಾಜ್ಯಪಾಲರಾದ ಥಾವರಚೆಂದ ಗೆಹಲೋತ್‌ ಅವರು ಅನಿವಾರ್ಯ ಕಾರಣಗಳಿಂದ ಆಗಮಿಸದಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಶುಭ ಕೋರಿ ಸಂದೇಶ ಕಳುಹಿಸಿದ್ದರು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಸೇವೆ ಅಪ್ರತಿಮವಾಗಿದೆ. ಮಹಿಳೆಯರಿಂದಲೇ ದೇಶ, ವಿದೇಶಗಳಲ್ಲಿ ನಡೆಯುತ್ತಿರುವ ದೊಡ್ಡ ಆಧ್ಯಾತ್ಮ ಕೇಂದ್ರವಾಗಿ ಹೊರಹೊಮ್ಮಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದ ಮಾತುಗಳು ಇಂದಿಗೂ ಜೀವನ ಸುಧಾರಣೆಗೆ ಕಾರಣವಾಗಿವೆ. ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸದರೆ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂಬುದನ್ನು ಭಗವದ್ಗೀತೆಯಲ್ಲಿ ತಿಳಿಸಿದ್ದಾರೆ. ಭಗವದ್ಗೀತೆಯು ಸನಾತನ ಹಿಂದು ಧರ್ಮದ ಆಧಾರವಾಗಿದೆ. ಇದರಲ್ಲಿರುವ ಸಾರಗಳನ್ನು ಓದಿ ಅರ್ಥೈಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ತಮ್ಮ ಸಂದೇಶದಲ್ಲಿ ರಾಜ್ಯಪಾಲರು ಕರೆ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ