ಹೊಸಪೇಟೆ: ಹಂಪಿ ಸೇರಿದಂತೆ ಜಿಲ್ಲಾದ್ಯಂತ ವೈಕುಂಠ ಏಕಾದಶಿಯನ್ನು ಭಕ್ತಿ ಭಾವದಿಂದ ಮಂಗಳವಾರ ಆಚರಿಸಲಾಯಿತು.
ನಗರದ ಅಮರಾವತಿ ಪ್ರದೇಶದ ಶ್ರೀ ವೆಂಕಟೇಶ್ವರ ದೇವಸ್ಥಾನ, ಹಂಪಿ ರಸ್ತೆಯ ವಾಸವಿಕಲ್ಯಾಣ ಮಂಟಪದ ಸಮೀಪವಿರುವ ಶ್ರೀ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಆಕರ್ಷಕ ಅಲಂಕಾರಗಳನ್ನು ನಡೆಸಲಾಯಿತು. ಭಕ್ತರು ಬೆಳಗ್ಗೆಯಿಂದಲೇ ಶಿಸ್ತಿನಿಂದ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಧನುರ್ಮಾಸದಲ್ಲಿ ಬರುವ ವೈಕುಂಠ ಏಕಾದಶಿಯು ಮಹಾವಿಷ್ಣುವಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ಹಬ್ಬವಾಗಿದ್ದು, ಪುಷ್ಯ ಮಾಸದ ಶುಕ್ಲಪಕ್ಷದ ಹನ್ನೊಂದನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ವೈಕುಂಠದ ಬಾಗಿಲು ಅಂದರೆ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದ್ದು, ಈ ದ್ವಾರದಿಂದ ಪ್ರವೇಶಿಸಿದ ಭಕ್ತರಿಗೆ ಪಾಪ ವಿಮೋಚನೆ ಮತ್ತು ಮೋಕ್ಷಪ್ರಾಪ್ತಿ ಲಭಿಸುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.ವೈಕುಂಠ ಎಂದರೆ ಕ್ಷೀರಸಾಗರದಲ್ಲಿ ಶೇಷನಾಗನ ಮೇಲೆ ಪವಡಿಸುವ ವಿಷ್ಣುವಿನ ದಿವ್ಯ ವಾಸಸ್ಥಾನವಾಗಿದ್ದು, ವರ್ಷಪೂರ್ತಿ ಮುಚ್ಚಿರುವ ವೈಕುಂಠ ದ್ವಾರ ಈ ದಿನ ಮಾತ್ರ ತೆರೆಯಲಾಗುತ್ತದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಅನೇಕ ಭಕ್ತರು ಉಪವಾಸ ವ್ರತವನ್ನು ಆಚರಿಸಿ, ವಿಷ್ಣುನಾಮಸ್ಮರಣೆ ಹಾಗೂ ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು.
ಭಕ್ತರ ಸುಗಮ ದರ್ಶನಕ್ಕಾಗಿ ದೇವಸ್ಥಾನ ಸಮಿತಿಗಳು ಸಮರ್ಪಕ ವ್ಯವಸ್ಥೆ ಕಲ್ಪಿಸಿದ್ದವು. ಸ್ವಯಂಸೇವಕರು ಹಾಗೂ ಪೊಲೀಸರು ಸಹಕಾರ ನೀಡಿದ ಕಾರಣ ಯಾವುದೇ ಅಡಚಣೆಗಳಿಲ್ಲದೆ ಧಾರ್ಮಿಕ ಆಚರಣೆಗಳು ಯಶಸ್ವಿಯಾಗಿ ನಡೆದವು. ಭಕ್ತರು ಶಾಂತಿ, ಶಿಸ್ತು ಹಾಗೂ ಭಕ್ತಿಭಾವದೊಂದಿಗೆ ಹಬ್ಬವನ್ನು ಆಚರಿಸಿದರು.ನಗರದ ಅಮರಾವತಿಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಮುಕ್ಕೋಟಿ ವೈಕುಂಠ ಏಕಾದಶಿಯನ್ನು ಆಚರಿಸಲು ಮಂಗಳವಾರ ಬೆಳಗಿನಿಂದಲೇ ಭಕ್ತರು ನೆರೆದಿದ್ದರು. ಉತ್ತರ ದ್ವಾರದ ಮೂಲಕ ಭಗವಂತನ ದರ್ಶನ ಪಡೆಯಲು ಭಕ್ತರು ಆಗಮಿಸಿದರು.
ಬೆಳಗಿನ ಜಾವ 3 ಗಂಟೆಯಿಂದಲೇ ಭಗವಂತನಿಗೆ ಪಂಚಾಮೃತ ಅಭಿಷೇಕಗಳು, ವಿಶೇಷ ಅರ್ಚನೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.ವಿಜಯನಗರ ಜಿಲ್ಲೆ ಎಸ್ಪಿ ಜಾಹ್ನವಿ, ಡಿವೈಎಸ್ಪಿ ಡಾ. ಮಂಜುನಾಥ ತಳವಾರ ದೇವಾಲಯದಲ್ಲಿ ಸ್ವಾಮಿ ದರ್ಶನ ಪಡೆದರು.
ದೇವಾಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಅನಿರೀಕ್ಷಿತವಾಗಿ ಹೆಚ್ಚಾಗಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಈ ಬಾರಿ ಸುಮಾರು 13,000 ಲಡ್ಡುಗಳನ್ನು ಸಿದ್ಧಪಡಿಸಲಾಗಿದ್ದು, ಎಲ್ಲ ಭಕ್ತರು ಶಿಸ್ತಿನಿಂದ ಭಗವಂತನ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸುತ್ತಿದ್ದಾರೆ ಎಂದರು. ತಿಮ್ಮಪ್ಪನ ದರ್ಶನಕ್ಕೆ ಮುಗಿಬಿದ್ದ ಭಕ್ತರುಹರಪನಹಳ್ಳಿ: ವೈಕುಂಠ ಏಕಾದಶಿ ಪ್ರಯುಕ್ತ ನಗರ ಸಮೀಪದ ದೇವರ ತಿಮಲಾಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ಲಕ್ಷ್ಮಿವೆಂಕಟೇಶ್ವರ ದೇವಾಲಯದಲ್ಲಿ ಭಕ್ತರು ಬೆಳಗ್ಗಿನಿಂದಲೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನವನ್ನು ಮಂಗಳವಾರ ಪಡೆದರು.ವೈಕುಂಠ ಏಕಾದಶಿ ಇರುವುದರಿಂದ ಪೂರ್ವ ದಿಕ್ಕಿನ ಮುಖ್ಯ ದ್ವಾರ ಬಾಗಿಲನ್ನು ಬಂದ್ ಮಾಡಿ ಉತ್ತರ ದಿಕ್ಕಿನ ಕಿರಿದಾದ ಬಾಗಿಲನ್ನು ತೆರೆಯಲಾಗಿತ್ತು, ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೆ ವೈಕುಂಠ ಏಕಾದಶಿ ಎನ್ನುತ್ತಾರೆ.ವೈಕುಂಠ ಏಕಾದಶಿ ಎಂದು ಅಭ್ಯಂಜನ ಸ್ನಾನ ಮಾಡಿ ಲಕ್ಷ್ಮೀವೆಂಕಟೇಶ್ವರ ದರ್ಶನ ಮಾಡಿ ವೈಕುಂಠ ದ್ವಾರದಿಂದ ಹೊರ ಬಂದರೆ ಮುಕ್ತಿ ಸಿಗುತ್ತದೆ. ಪಾಪಗಳು ನಾಶವಾಗುತ್ತವೆ ಎನ್ನುವ ನಂಬಿಕೆ ಭಕ್ತರದ್ದು. ಎಂಟು ನೂರು ವರ್ಷಗಳ ಇತಿಹಾಸವಿರುವ ಇಲ್ಲಿಯ ದೇವರಿಗೆ ಬೆಳಗ್ಗೆ ಅಭಿಷೇಕ ಮಾಡಿ ವಿವಿಧ ಹೂವುಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು,
ಮುಖಂಡರಾದ ಸಿ. ಚಂದ್ರಶೇಖರ ಭಟ್, ಧರ್ಮಕರ್ತ ಕಟ್ಟಿ ಹರ್ಷ, ದಂಡಿನ ಹರೀಶ, ಅರ್ಚಕರಾದ ಶ್ರೀನಿವಾಸ ಪೂಜಾರ, ಲಕ್ಷ್ಮೀಪತಿ, ಮುಜರಾಯಿ ಸಿಬ್ಬಂದಿ ಶಿವಕುಮಾರ ಇದ್ದರು.