ಯದುಗಿರಿಯ ಅಧಿದೈವ ಚೆಲ್ವತಿರುನಾರಾಯಣಸ್ವಾಮಿಗೆ ಅಭಿಷೇಕದೊಂದಿಗೆ ವೈರಮುಡಿ ಬ್ರಹ್ಮೋತ್ಸವ ‘ಸಂಪನ್ನ’

KannadaprabhaNewsNetwork |  
Published : Mar 28, 2024, 12:46 AM IST
27ಕೆಎಂಎನ್ ಡಿ17,18,19 | Kannada Prabha

ಸಾರಾಂಶ

ವೈರಮುಡಿ ಜಾತ್ರಾ ಮಹೋತ್ಸವದ 10ನೇ ತಿರುನಾಳ್ ದಿನವಾದ ಬುಧವಾರ ಇಡೀ ದೇವಾಲಯವನ್ನು ಸ್ವಚ್ಛಗೊಳಿಸಿ ಯಾವುದೇ ಲೋಪದೋಷಗಳಿದ್ದರೂ ಕ್ಷಮಿಸುವಂತೆ ಕೋರಿ ಸಂಪ್ರೋಕ್ಷಣೆ ಮಾಡಿದ ನಂತರ ಮೂಲಮೂರ್ತಿ, ಉತ್ಸವಮೂರ್ತಿಗೆ ಹಾಲು, ಜೇನು, ಮೊಸರು, ಎಳನೀರು, ಪವಿತ್ರ ತೀರ್ಥಗಳಿಂದ ಅಭಿಷೇಕ ನೆರವೇರಿಸಲಾಯಿತು. ಮಹಾಭಿಷೇಕ ಮಧ್ಯೆ ಹರಿಷಿಣ ಅಲಂಕಾರ ನೆರವೇರಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಯದುಗಿರಿಯ ಅಧಿದೈವ ಚೆಲ್ವತಿರುನಾರಾಯಣಸ್ವಾಮಿಗೆ ಬುಧವಾರ ವೇದ ಮಂತ್ರಗಳೊಂದಿಗೆ ದ್ವಾದಶಾರಾಧನೆಯ ಮೂಲಕ ಮಹಾಭಿಷೇಕ ನೆರವೇರುವುದರೊಂದಿಗೆ ವೈರಮುಡಿ ಬ್ರಹ್ಮೋತ್ಸವ ವಿದ್ಯುಕ್ತವಾಗಿ ಸಂಪನ್ನವಾಯಿತು.

ವೈರಮುಡಿ ಜಾತ್ರಾ ಮಹೋತ್ಸವದ 10ನೇ ತಿರುನಾಳ್ ದಿನವಾದ ಬುಧವಾರ ಇಡೀ ದೇವಾಲಯವನ್ನು ಸ್ವಚ್ಛಗೊಳಿಸಿ ಯಾವುದೇ ಲೋಪದೋಷಗಳಿದ್ದರೂ ಕ್ಷಮಿಸುವಂತೆ ಕೋರಿ ಸಂಪ್ರೋಕ್ಷಣೆ ಮಾಡಿದ ನಂತರ ಮೂಲಮೂರ್ತಿ, ಉತ್ಸವಮೂರ್ತಿಗೆ ಹಾಲು, ಜೇನು, ಮೊಸರು, ಎಳನೀರು, ಪವಿತ್ರ ತೀರ್ಥಗಳಿಂದ ಅಭಿಷೇಕ ನೆರವೇರಿಸಲಾಯಿತು.

ಮಹಾಭಿಷೇಕ ಮಧ್ಯೆ ಹರಿಷಿಣ ಅಲಂಕಾರ ನೆರವೇರಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಲಾಯಿತು. ವರ್ಷಕ್ಕೆ ಎರಡು ಸಲ ಮಾತ್ರ ಮೂಲಮೂರ್ತಿಗೆ ಅಭಿಷೇಕ ನಡೆಯುವ ಸಂಪ್ರದಾಯವಿದೆ. ಮಹಾಭಿಷೇಕವು ವೈರಮುಡಿ ಬ್ರಹ್ಮೋತ್ಸವದ ಕೊನೆ ದಿನ ನಡೆಯಿತು. ಈ ವರ್ಷ ಆಷಾಢ ಮಾಸದಲ್ಲಿ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜಯಂತ್ಯುತ್ಸವದಂದು ಎರಡನೇ ಬಾರಿ ಮಹಾಭಿಷೇಕ ನಡೆಯುತ್ತದೆ.

ಗರ್ಭಗೃಹ ಪ್ರದಕ್ಷಿಣೆ ಅವಕಾಶ:

ಮೇಲುಕೋಟೆ ಸಾಕ್ಷಾತ್ ಶ್ರೀಮನ್ನಾರಾಯಣನೇ ನೆಲಸಿ ಸದಾಕಾಲ ದಿವ್ಯದರ್ಶನ ನೀಡುವ ಕಾರಣ ಭೂವೈಕುಂಠವಾಗಿದೆ. ಇಲ್ಲಿ ವೈಕುಂಠದ್ವಾರ ಇಲ್ಲ. ಬದಲಾಗಿ ವರ್ಷಕ್ಕೊಮ್ಮೆ ತಿರುನಾರಾಯಣಸ್ವಾಮಿಯ ಮೂಲಗರ್ಭ ಗೃಹಪ್ರವೇಶಕ್ಕೆ ಮಹಾಭಿಷೇಕದ ರಾತ್ರಿ ಪ್ರದಕ್ಷಿಣೆಗೆ ಅವಕಾಶ ನೀಡಲಾಗುತ್ತಿದೆ. ಬುಧವಾರ ರಾತ್ರಿ ಭಕ್ತರಿಗೆ ಪ್ರದಕ್ಷಿಣೆಗೆ ಮುಕ್ತ ಅವಕಾಶ ನೀಡಲಾಗಿತ್ತು. ಹನುಮಂತವಾಹನೋತ್ಸವ ಉತ್ಸವ ಬೀದಿಗಳಲ್ಲಿ ಮೆರವಣಿಗೆ ಬರುವ ಸಮಯಾವಕಾಶದಲ್ಲಿ ಮಾತ್ರ ಪ್ರದಕ್ಷಿಣೆಗೆ ಅವಕಾಶವಿರುವ ಕಾರಣ ನೂರಾರುಭಕ್ತರು ಗರ್ಭಗೃಹ ಪ್ರದಕ್ಷಿಣೆಯಲ್ಲಿ ಭಾಗವಹಿಸಿ ಧನ್ಯತಾಭಾವ ಅನುಭವಿಸಿದರು. ಇದೇ ವೇಳೆ ಉತ್ಸವಮೂರ್ತಿ ಚೆಲುವನಾರಾಯಣಸ್ವಾಮಿಗೆ ಹನುಮಂತವಾಹನೋತ್ಸವ ವೈಭವದಿಂದ ನೆರವೇರಿತು.

ಕಳೆದ 10 ದಿನಗಳ ಕಾಲ ನಡೆದ ವೈರಮುಡಿ ಬ್ರಹ್ಮೋತ್ಸವದಲ್ಲಿ 5 ಲಕ್ಷಕ್ಕೂ ಅಧಿಕ ಭಕ್ತರು ಮೇಲುಕೋಟೆಗೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ವೈರಮುಡಿ ಉತ್ಸವ, ರಥೋತ್ಸವ ತೆಪ್ಪೋತ್ಸವ ಹಾಗೂ ತೀರ್ಥಸ್ನಾನಗಳಂದು ಭಕ್ತರು ಸಾಗರೋಪಾದಿಯಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದಿದ್ದಾರೆ.ಇಂದು ಶೇರ್ತಿಸೇವೆ

ಮೇಲುಕೋಟೆ: ಶ್ರೀಕೃಷ್ಣ-ಬಲರಾಮರು ಯದುಗಿರಿಗೆ ಆಗಮಿಸಿ ಚೆಲುವನಾರಾಯಣಸ್ವಾಮಿ ದರ್ಶನ ಮಾಡಿದ ಪ್ರತೀಕವಾಗಿ ಮಾ.28 ರಂದು ಶೇರ್ತಿಸೇವೆ ನಡೆಯಲಿದೆ.ಮೂಲಮೂರ್ತಿ ಮತ್ತು ಉತ್ಸವ ಮೂರ್ತಿ ವರ್ಷದಲ್ಲೊಮ್ಮೆ ಮಾತ್ರ ಒಂದೇಕಡೆ ಆರಾಧನೆಗೊಳ್ಳುವುದು ಶೇರ್ತಿಸೇವೆ ವಿಶೇಷವಾಗಿದೆ. ಶೇರ್ತಿಸೇವೆ ಕೈಂಕರ್ಯವನ್ನು ಅನೂಚಾನ ಸಂಪ್ರದಾಯದಂತೆ ಶ್ರೀರಂಗಶಲ್ವನಾರಾಯಣನ್‌ರ ಮನೆತನ ನಿರ್ವಹಿಸುತ್ತಾ ಬಂದಿದೆ.ಇದಕ್ಕೂ ಮುನ್ನ ಮಹಾನಿವೇದನ ನಡೆಯಲಿದೆ. ಪಂಚಭಕ್ಷಪರಮಾನ್ನಗಳನ್ನು ತಯಾರಿಸಿ ಚೆಲುವನಾರಾಯಣಸ್ವಾಮಿಗೆ ಸಮರ್ಪಿಸಲಾಗುತ್ತದೆ. ಅಂದು ದೊಡ್ಡ ದೊಡ್ಡ ಹಂಡೆಗಳಲ್ಲಿ ತಯಾರಿಸಿದ ಪ್ರಸಾದವನ್ನು ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆಲ್ಲರಿಗೂ ವಿತರಿಸಲಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿನ ಅಂಕು-ಡೊಂಕು ತಿದ್ದಲು ಶಿಕ್ಷಣವಂತರಾಗಿ
ಕುವೆಂಪು ಕರ್ನಾಟಕದ ಅಮೂಲ್ಯ ಆಸ್ತಿ